ಬೆಳಗಾವಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಶೀಘ್ರವೇ ಸಿಬ್ಬಂದಿ ನೇಮಕ
ಬೆಳಗಾವಿ, ಅಕ್ಟೋಬರ್ 15; "ಬೆಳಗಾವಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿ, ಉಪಕರಣಗಳ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ಬೆಳಗಾವಿ ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ್) ಕಚೇರಿಯ ಸಭಾಂಗಣದಲ್ಲಿ ಬಿಮ್ಸ್ ಶೈಕ್ಷಣಿಕ ಪ್ರಗತಿ, ಆಸ್ಪತ್ರೆ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಶೀಲನೆ ಸಭೆಯನ್ನು ಸಚಿವರು ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸಚಿವರು, "ಬೆಳಗಾವಿ ನಗರದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿಗಳ ನೇಮಕ ಹಾಗೂ ವೈದ್ಯಕೀಯ ಉಪಕರಣಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಶೀಘ್ರ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು" ಎಂದರು.
"ಜಿಲ್ಲೆಯಲ್ಲಿ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಇರುವುದರಿಂದ ಸರ್ಕಾರದ ಹಂತದಲ್ಲಿ ಆರೋಗ್ಯ ಇಲಾಖೆಯ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಜಿಲ್ಲಾಸ್ಪತ್ರೆಗೆ ಸಿಬ್ಬಂದಿಗಳ ಕೊರತೆಯಿದ್ದು, ಶೀಘ್ರ ನೇಮಕಾತಿಗೆ ಕ್ರಮ ವಹಿಸಲಾಗುವುದು" ಎಂದು ಹೇಳಿದರು.
ಜಿಲ್ಲಾ ಸರ್ಜನ್ ಡಾ. ಆರ್. ವಿ. ಶಿಂಧೆ ಮಾತನಾಡಿ, "ಅವಶ್ಯಕ ಸಿಬ್ಬಂದಿಗಳ ನೇಮಕಾತಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸಾವನೆ ಸಲ್ಲಿಸಲಾಗಿದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಗಡಿ ರಾಜ್ಯಗಳಾದ ಗೋವಾ, ಮಹಾರಾಷ್ಟ್ರದಿಂದ ಹೆಚ್ಚಾಗಿ ರೋಗಿಗಳು ಬರುತ್ತಿದ್ದಾರೆ. ಸಿಬ್ಬಂದಿಗಳ ನೇಮಕದಿಂದ ಜಿಲ್ಲಾ ಆಸ್ಪತ್ರೆಗೆ, ಗ್ರಾಮೀಣ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕಾ ಆಸ್ಪತ್ರೆಗಳಿಂದ ಬರುವ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲಿದೆ" ಎಂದು ವಿವರಿಸಿದರು.
450 ಹಾಸಿಗೆ ಆಸ್ಪತ್ರೆ; "ಬಿಮ್ಸ್ ಮತ್ತು ಜಿಲ್ಲಾಸ್ಪತ್ರೆ ಸೇರಿ 1040 ಬೆಡ್‌ಗಳನ್ನು ಹೊಂದಿದೆ. ಆದರೆ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ತಾಯಿ ಮಕ್ಕಳ ವಿಭಾಗ ಸೇರಿ 3 ಭಾಗಗಳಾಗಿವೆ. ಇದರಿಂದ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ರೋಗಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲು 450 ಬೆಡ್‌ಗಳ ಬೋಧನಾ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಮಂಜೂರಾತಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ" ಎಂದು ಬಿಮ್ಸ್ ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
"100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಕಾಮಗಾರಿ ಪ್ರಾರಂಭಿಸಲಾಗಿದೆ. ಅದೇ ರೀತಿಯಲ್ಲಿ ಎಂ.ಆರ್.ಐ, ಸಿಟಿ ಸ್ಕ್ಯಾನ್, ಕ್ಷ-ಕಿರಣ, ಮೈಕ್ರೋ ಬಯಾಲಜಿ ಪ್ರಯೋಗಾಲಯ, ಬಯೋಕೆಮಿಸ್ಟ್ರಿ ಪ್ರಯೋಗಾಲಯ, ಪೆಥಾಲಜಿ ಪ್ರಯೋಗಾಲಯ, ತುರ್ತು ಚಿಕಿತ್ಸಾ ಘಟಕಗಳನ್ನು ಸೇರಿದಂತೆ ನಿರಂತರ 24*7 ಸೇವೆಗಳನ್ನು ಒದಗಿಸಲಾಗುತ್ತಿದೆ" ಎಂದರು.
"ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಅಭಿಯಾನದಡಿ ಕೇಂದ್ರ ಸರ್ಕಾರದ ಆದೇಶದಂತೆ ತುರ್ತು ಚಿಕಿತ್ಸೆಗಾಗಿ ಎಂಐಸಿಯು, ಐಸಿಯು ಇತ್ಯಾದಿಗಳ ಮೂಲಭೂತ ಸೌಕರ್ಯಗಳ 50 ಬೆಡ್‌ಗಳ ತೀವ್ರ ನಿಗ ಘಟಕ ಪ್ರಾರಂಭಿಸಲು ಅನುಮೋದನೆ ದೊರೆತಿದ್ದು, ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ" ಎಂದು ಅಧಿಕಾರಿಗಳು ಹೇಳಿದರು.
ಸಭೆಯ ಬಳಿಕ ಸಚಿವರು ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳ ನೂತನ ಕಟ್ಟಡ ಕಾಮಗಾರಿ, ಕ್ಯಾಂಟೀನ್ ಊಟದ ವ್ಯವಸ್ಥೆ, ನರ್ಸಿಂಗ್ ವಿಧ್ಯಾರ್ಥಿಗಳ ಕೊಠಡಿ, ಆಸ್ಪತ್ರೆ ಉದ್ಯಾನವನ ನಿರ್ವಹಣೆ, ಔಷಧಿಗಳ ವಿತರಣೆ ಹಾಗೂ ವಿವಿಧ ವಿಭಾಗಗಳ ವೈದ್ಯಕೀಯ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜಲ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಘಟಕದ ನಿರ್ವಹಣೆಗಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಅದೇ ರೀತಿಯಲ್ಲಿ ಬಿಮ್ಸ್ ಶೈಕ್ಷಣಿಕ ಸಾಧನೆಗಳು, ಸಂಶೋಧನಾ ಚಟುವಟಿಕೆಗಳು, ವಿಶೇಷ ಸಾಧನೆಗಳು, ಕಟ್ಟಡ ಕಾಮಗಾರಿ ಹಾಗೂ ಸಿಬ್ಬಂದಿಗಳ ಕಾರ್ಯ ನಿರ್ವಹಣೆಯ ಕುರಿತು ಸಭೆಯಲ್ಲಿ ಬಿಮ್ಸ್ ಅಧಿಕಾರಿಗಳು ವಿವರಣೆ ಕೊಟ್ಟರು.












Click it and Unblock the Notifications