ಲೋಕಸಭೆ ಚುನಾವಣೆ: ರಮೇಶ್ ಜಾರಕಿಹೊಳಿ ಬೆಂಬಲ ಯಾರ ಕಡೆಗೆ?
ಬೆಳಗಾವಿ, ಏಪ್ರಿಲ್ 17: ರಾಜ್ಯದ ಮೊದಲ ಹಂತದ ಚುನಾವಣೆಯ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಮುಗಿದಿದ್ದು, ಜನರು ಮತದಾನಕ್ಕೆ ಅಣಿಯಾಗಿದ್ದಾರೆ. ಈಗ ಗಮನವೆಲ್ಲಾ ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳತ್ತ ಹರಿದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಳಗಾವಿ ಕ್ಷೇತ್ರವು ವಿಶೇಷವಾಗಿ ಈ ಬಾರಿ ಗಮನ ಸೆಳೆಯುತ್ತಿದ್ದು, ಇದಕ್ಕೆ ಕಾರಣ ಕಾಂಗ್ರೆಸ್‌ನ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ. ಜಾರಕಿಹೊಳಿ ಅವರು ಕಾಂಗ್ರೆಸ್ ಮೇಲಿನ ಮುನಿಸಿನಿಂದಾಗಿ ಚುನಾವಣಾ ವಿಷಯದಲ್ಲಿ ತಟಸ್ಥವಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಇಳಿಯದೇ ಹೋದಲ್ಲಿ ಕಾಂಗ್ರೆಸ್‌ಗೆ ತೀವ್ರ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ. ಅಕಸ್ಮಾತ್ ರಮೇಶ್ ಅವರು ಕಾಂಗ್ರೆಸ್‌ಗೆ ವಿರುದ್ಧವಾಗಿ ಕೆಲಸ ಮಾಡಿದಲ್ಲಿ ಕೈಗೆ ಸೋಲು ಕಟ್ಟಿಟ್ಟ ಬುತ್ತಿ.

ಪ್ರಚಾರ ಸಭೆಗಳಿಂದ ದೂರ ಉಳಿದ ರಮೇಶ್
ಪ್ರಸ್ತುತ ಪ್ರಚಾರ ಕಣದಲ್ಲಿ ಕಾಣಿಸಿಕೊಳ್ಳದೆ ತಟಸ್ಥವಾಗಿರುವ ರಮೇಶ್ ಜಾರಕಿಹೊಳಿ ಅವರು, ತಾವು ಕಾಂಗ್ರೆಸ್ ಪರವೇ ಇರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಅವರು ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಳ್ಳದಿರುವುದು ಅವರ ಹೇಳಿಕೆಯನ್ನು ಪುಷ್ಟೀಕರಿಸುತ್ತಿಲ್ಲ.

ರಮೇಶ್ ಜಾರಕಿಹೊಳಿಯಿಂದ ಬೆಂಬಲಿಗರ ಸಭೆ
ರಮೇಶ್ ಜಾರಕಿಹೊಳಿ ಅವರು ಇಂದಷ್ಟೆ ತಮ್ಮ ಬೆಂಬಲಿಗರ ಗುಪ್ತ ಸಭೆ ಸಹ ನಡೆಸಿದ್ದು, ಇದು ಕಾಂಗ್ರೆಸ್ ಗೆ ಆತಂಕ ಉಂಟುಮಾಡಿದೆ. ಸಭೆಯಲ್ಲಿ ಜಾರಕಿಹೊಳಿ ಅವರು ಕಾಂಗ್ರೆಸ್ ವಿರೋಧಿ ನಿಲವು ತಳೆದು, ಕಾಂಗ್ರೆಸ್ ಅನ್ನು ಧಿಕ್ಕರಿಸುವಂತೆ ಸೂಚನೆ ನೀಡಿದ್ದಾರೆ ಎಂದು ಗಾಳಿ ಸುದ್ದಿ ಕ್ಷೇತ್ರದಲ್ಲಿ ಹರಡಿದೆ.

ರಮೇಶ್ ಜಾರಕಿಹೊಳಿ ವಿರುದ್ಧ ಹೈಕಮಾಂಡ್‌ಗೆ ದೂರು
ಇದಕ್ಕೆ ಪೂರಕವೆಂಬಂತೆ ಇಂದು ಬೆಳಗಾವಿ ಕಾಂಗ್ರೆಸ್ ಮುಖಂಡರು ರಮೇಶ್ ಜಾರಕಿಹೊಳಿ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಸಹ ರಮೇಶ್ ವಿರುದ್ಧ ಅಸಮಾಧಾನದ ಮಾತನ್ನಾಡಿದ್ದಾರೆ.

ಕಾಂಗ್ರೆಸ್ vs ಬಿಜೆಪಿ
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿರೂಪಾಕ್ಷಪ್ಪ ಶಿವಲಿಂಗಪ್ಪ ಸಾಧುನ್ವಾರ್ ಅವರು ಸ್ಪರ್ಧಿಸಿದ್ದಾರೆ. ಅವರ ಎದುರಾಳಿಯಾಗಿ ಬಿಜೆಪಿಯಿಂದ ಸುರೇಶ್ ಅಂಗಡಿ ಅವರು ಸ್ಪರ್ಧಿಸಿದ್ದಾರೆ.












Click it and Unblock the Notifications