Ramesh Jarkiholi: 5 ವರ್ಷದಲ್ಲಿ ರಮೇಶ್ ಜಾರಕಿಹೊಳಿ ಆಸ್ತಿ 122ರಿಂದ 49 ಕೋಟಿ ರೂ.ಗೆ ಕುಸಿತ!
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಅಖಾಡ ಸಿದ್ಧವಾಗಿದ್ದು, ಘಟಾನುಘಟಿ ನಾಯಕರು ಮತದಾರರನ್ನು ಒಲಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಈ ಬಾರಿ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರಗಳಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರವೂ ಒಂದು.
ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ಸ್ಪರ್ಧಿಸಿರುವ ಕಾರಣ, ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದೇ ವೇಳೆ ಗೋಕಾಕ್ ಅಭ್ಯರ್ಥಿಯಾಗಿರುವ ರಮೇಶ್ ಜಾರಕಿಹೊಳಿ ತಮ್ಮ ಆಸ್ತಿ ವಿವರ ಸಲ್ಲಿಸಿದ್ದು, ಕಳೆದ 5 ವರ್ಷಗಳ ಅವಧಿಯಲ್ಲಿ 72.25 ಕೋಟಿ ರೂ.ನಷ್ಟು ಕುಸಿತ ಕಂಡಿದೆ.

2023ರ ವಿಧಾನಸಭಾ ಚುನಾವಣೆಗೆ ರಮೇಶ್ ಜಾರಕಿಹೊಳಿ ಘೋಷಿಸಿರುವ ಆಸ್ತಿ 49.25 ಕೋಟಿ ರೂ. ಆಗಿದೆ. ಗೋಕಾಕ್ ತಹಶೀಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.
2018ರ ವಿಧಾನಸಭೆ ಚುನಾವಣೆ ವೇಳೆ 122 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ, ಅಲ್ಲಿಂದ ಈವರೆಗೆ ಅವರ ಆಸ್ತಿಯಲ್ಲಿ ಭಾರೀ ಕುಸಿತು ಕಂಡಿದೆ. ಇಷ್ಟು ದೊಡ್ಡ ಪ್ರಮಾಣದ ಆಸ್ತಿ ಮೌಲ್ಯ ಇಳಿಕೆಗೆ ಕಾರಣವೆನೆಂದು ತಿಳಿಸಿಲ್ಲ.
2018ರಲ್ಲಿ ರಮೇಶ್ ಜಾರಕಿಹೊಳಿ ಅವರು ತಮ್ಮ ಪತ್ನಿ ಜಯಶ್ರೀ, ಇಬ್ಬರು ಪುತ್ರರಾದ ಅಮರನಾಥ ಮತ್ತು ಸಂತೋಷ್ ಅವರ ಆಸ್ತಿ ವಿವರ ಘೋಷಿಸಿದ್ದರು. ಆದರೆ, ಈ ಬಾರಿ ರಮೇಶ್ ಜಾರಕಿಹೊಳಿ, ಪತ್ನಿ ಹಾಗೂ ಅಮರನಾಥ್ ಹೆಸರಿನಲ್ಲಿರುವ ಆಸ್ತಿ ಮಾತ್ರ ಘೋಷಿಸಿದ್ದಾರೆ. ಅವರ ಮತ್ತೊಬ್ಬ ಪುತ್ರ ಸಂತೋಷ್ ಜಾರಕಿಹೊಳಿ ಪ್ರತ್ಯೇಕವಾಗಿರುವುದು ಅವರ ಆಸ್ತಿ ಕುಸಿತಕ್ಕೆ ಕಾರಣ ಎನ್ನಲಾಗಿದೆ.

2013ರಲ್ಲಿ 57 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ, 2018ರ ವಿಧಾನಸಭೆ ಚುನಾವಣೆ ವೇಳೆಗೆ 122 ಕೋಟಿ ರೂ.ಗೆ ಏರಿಕೆಯಾಗಿತ್ತು.
"ರಮೇಶ್ ಜಾರಕಿಹೊಳಿ ಅವರ ಕುಟುಂಬದ ಒಡೆತನದ ಸಕ್ಕರೆ ಕಾರ್ಖಾನೆಗಳನ್ನು ನಿರ್ವಹಿಸುತ್ತಿರುವ ಕಿರಿಯ ಪುತ್ರ ಸಂತೋಷ್ ಜಾರಕಿಹೊಳಿ ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರ ಆಸ್ತಿ ಮೌಲ್ಯ ಕಡಿಮೆ ಆಗಲು ಇದೂ ಒಂದು ಕಾರಣ. ಅಮರನಾಥ ಅವರು ರಮೇಶ್ ಜಾರಕಿಹೊಳಿಯೊಂದಿಗೆ ವಾಸಿಸುತ್ತಿದ್ದಾರೆ. ಸಹೋದರರ ನಡುವೆ ಆಸ್ತಿ ಹಂಚಿಕೆಯಾಗಿರುವ ಸಾಧ್ಯತೆ ಇದೆ," ಎಂದು ಜಾರಕಿಗೊಳಿ ಕುಟುಂಬದ ಆಪ್ತ ವಕೀಲರು ತಿಳಿಸಿದ್ದಾರೆ.
ಪ್ರಕರಣಗಳ ಮಾಹಿತಿ
ರಮೇಶ್ ಜಾರಕಿಹೊಳಿ ಅವರು ತಮ್ಮ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಅರೋಪದ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಎಸ್ಐಟಿ ಕೂಡ ಬಿ ರಿಪೋರ್ಟ್ ಸಲ್ಲಿಸಿದೆ. ಇದೇ ವೇಳೆ ಎದುರಾಳಿ ತಂಡ ಎಸ್‌ಐಟಿ ಆದೇಶ ಪ್ರಶ್ನಿಸಿದೆ ಎಂದೂ ಚುನಾವಣಾ ಅಫಿಡ್‌ವಿಟ್‌ನಲ್ಲಿ ರಮೇಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಕಟ್ಟಿಹಾಕಲು ಕಾಂಗ್ರೆಸ್ ಪ್ಲ್ಯಾನ್
ಈ ಬಾರಿ ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಮಹಾಂತೇಶ ಕಡಾಡಿ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ್ ಪೂಜಾರಿ ಅಸಮಾಧಾನಗೊಂಡಿದ್ದು, ಇದೀಗ ಅವರ ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ.
ಪಂಚಮಸಾಲಿ ಜೊತೆಗೆ ಅಹಿಂದ ಮತ ಬ್ಯಾಂಕ್
ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಅಶೋಕ ಪಟ್ಟಣ, ಚನ್ನರಾಜ್ ಹಟ್ಟಿಹೊಳಿ ಮನವೊಲಿಕೆ ಯತ್ನದ ಫಲವಾಗಿ ಅಶೋಕ್ ಪೂಜಾರಿ ಕಾಂಗ್ರೆಸ್ ಪರ ಪ್ರಚಾರ ನಡೆಸಲು ಒಪ್ಪಿಕೊಂಡಿದ್ದಾರೆ. ಪಂಚಮಸಾಲಿ ಜೊತೆಗೆ ಅಹಿಂದ ಮತ ಬ್ಯಾಂಕ್ ಮೂಲಕ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಲು ಕಾಂಗ್ರೆಸ್ ತಯಾರಿ ನಡೆಸಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಗೋಕಾಕ್ನಲ್ಲಿ ಅಶೋಕ್ ಪೂಜಾರಿ ಕ್ಯಾಂಪೇನ್ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಡಾ. ಮಹಾಂತೇಶ ಕಡಾಡಿ ಗೆಲ್ಲಿಸಲು ಮುಂದಾಗಿದ್ದಾರೆ. ಆಗ ಬಿಜೆಪಿಯಲ್ಲಿದ್ದ ಅಶೋಕ್ ಪೂಜಾರಿ 2008, 2013, 2018ರಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧೆ ಮಾಡಿದ್ದರು.
ನಂತರ 2019ರಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ ನಂತರ ನಡೆದ ಉಪ ಚುನಾವಣೆಯಲ್ಲಿಯೂ ಅಶೋಕ್ ಪೂಜಾರಿ ಸೋಲು ಕಂಡಿದ್ದರು. 1999, 2004, 2008, 2013, 2018 ಮತ್ತು 2019ರಲ್ಲಿ ಸತತವಾಗಿ ರಮೇಶ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.












Click it and Unblock the Notifications