ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್, ಬೆಳಗಾವಿಯಲ್ಲಿ ಪರಿಸ್ಥಿತಿ ಉದ್ವಿಗ್ನ
ಚಳಿಗಾಲ ಅಧಿವೇಶನ ನಡೆಯುತ್ತಿರುವ ಬೆಳಗಾವಿಯಲ್ಲಿ 2A ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯವು ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. ಇಂದು ಅಪಾರ ಸಂಖ್ಯೆಯಲ್ಲಿ ಪ್ರತಿಭಟನೆಗೆ ಜನ ಸೇರಿದ ಕಾರಣ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ.
ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಿಡಿಕಾರಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಆಗ್ರಹಿಸಿ, ಬೆಳಗಾವಿಯ ಸುವರ್ಣಸೌಧದ ಎದುರು ಇಂದು ಬೃಹತ್ ಸಮಾವೇಶ ನಡೆಯಿತು. ಪೊಲೀಸರ ಲಾಠಿ ಏಟಿಗೂ ಬೆದರದ ಹೋರಾಟಗಾರರು ನಮ್ಮ ಸಮಾಜದ ನ್ಯಾಯಯುತವಾದ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಲಜ್ಜೆಗೇಡಿ ಸರ್ಕಾರವು ಸ್ವತಃ ಎಡಿಜಿಪಿ ಅವರನ್ನೇ ಬಿಟ್ಟು ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿಸಿದ್ದು ನಿಜಕ್ಕೂ ಹೇಯ ಹಾಗೂ ಖಂಡನೀಯ. ಪ್ರತಿಭಟನೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಖುದ್ದು ಎಡಿಜಿಪಿ ಶ್ರೇಣಿಯ ಅಧಿಕಾರಿಯನ್ನು ಸರ್ಕಾರ ನಿಯೋಜಿಸಿರುವುದು ಏಕೆ ಎಂದು ಹೇಳಬೇಕು? ಎಂದು ತಾಕೀತು ಮಾಡಿದ್ದಾರೆ.
ತಾರ್ಕಿಕ ಅಂತ್ಯ ಕಾಣುವವರೆಗೂ ಕೂಡಲಸಂಗಮ ಪೀಠದ ಜಗದ್ಗುರು ಪೂಜ್ಯ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಈ ಹೋರಾಟ ಮುಂದುವರೆಯಲಿದೆ ಎಂದೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶಿಲಾಯುಗ ಕಾಲದ ಮನಃಸ್ಥಿತಿಯ ಸರ್ಕಾರ: ಪಂಚಮಸಾಲಿ ಬಂಧುಗಳ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಅಡಾಲ್ಫ್ ಹಿಟ್ಲರ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ. ಸಂತರು, ಪಂಚಮಸಾಲಿ ಸಮುದಾಯ ಜಗದ್ಗುರುಗಳಾದ ಬಸವ ಮೃತ್ಯುಂಜಯ ಮಹಾಸ್ವಾಮೀಜಿಗಳನ್ನು ಅತ್ಯಂತ ಹೇಯವಾಗಿ ನಡೆಸಿಕೊಂಡಿರುವುದು ನನಗೆ ಅತೀವ ನೋವುಂಟು ಮಾಡಿದೆ. ಇದು ಶಿಲಾಯುಗ ಕಾಲದ ಮನಃಸ್ಥಿತಿಯ ಸರ್ಕಾರ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ಬೇಡಿಕೆಗಳ ಬಗ್ಗೆ ಪೂಜ್ಯ ಸ್ವಾಮೀಜಿ ಅವರು, ಸಮುದಾಯದ ಪ್ರಮುಖರು ನಿರಂತರವಾಗಿ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದರು. ಆದರೂ ಸರ್ಕಾರ ಕಿವುಡಾಗಿತ್ತು, ನಿರ್ಲಕ್ಷ್ಯ ವಹಿಸಿತ್ತು. ಶಾಂತಿಯುತವಾಗಿ ಪ್ರತಿಭಟಿಸಲು ಬಂದ ಸ್ವಾಮೀಜಿಗಳು, ಸಮುದಾಯದ ನಾಯಕರು, ಜನತೆಯ ಮೇಲೆ ದಬ್ಬಾಳಿಕೆ ನಡೆಸಿ ಪೊಲೀಸ್ ವಶಕ್ಕೆ ತೆಗೆದುಕೊಂಡ ಕ್ರಮ ಖಂಡನೀಯ ಎಂದು ಕಿಡಿಕಾರಿದ್ದಾರೆ.
ಸರ್ಕಾರವೇ ಶಾಂತಿ ಕದಡುವ ದುಷ್ಪ್ರಯತ್ನ ಮಾಡಿದರೆ ಅದಕ್ಕೆ ಸರ್ಕಾರವೇ ಪೂರ್ಣ ಹೊಣೆ. ಕೂಡಲೇ ಪೂಜ್ಯ ಸ್ವಾಮೀಜಿ ಅವರ ಹಾಗೂ ಸಮುದಾಯದ ಕ್ಷಮೆ ಕೇಳಬೇಕು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಇಂದು ಬೆಳಗ್ಗೆಯಿಂದ 2ಎ ಮೀಸಲಾತಿಗಾಗಿ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದ ಹೋರಾಟಗಾರರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೌಜನ್ಯಕ್ಕೂ ಮಾತುಕತೆಗೆ ಮುಂದಾಗಲಿಲ್ಲ. ಬದಲಾಗಿ ಈ ಲಿಂಗಾಯತ ವಿರೋಧಿ ಸರ್ಕಾರ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಮೇಲೆಯೇ ಏಕಾಏಕಿ ಲಾಠಿ ಚಾರ್ಜ್ ಮಾಡಿಸಿ, ಈ ಹೋರಾಟವನ್ನು ಹತ್ತಿಕ್ಕುವ ಕಾರ್ಯಕ್ಕೆ ಮುಂದಾಗಿದೆ. ಇವರ ಈ ಸರ್ವಾಧಿಕಾರಿ ನಡೆ ಖಂಡನೀಯ ಎಂದು ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಆಕ್ರೋಶ ಹೊರಹಾಕಿದ್ದಾರೆ.

ಲಾಠಿ ಚಾರ್ಜ್ ನಡೆಸಿ, ಬಸವಜಯ ಮೃತ್ಯುಂಜಯ ಶ್ರೀಗಳು, ಶಾಸಕ ಬಸನಗೌಡ ಯತ್ನಾಳ್, ಈರಣ್ಣ ಕಡಾಡಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಾಂಗ್ರೆಸ್ ಸರ್ಕಾರವು ನಮ್ಮ ಹೋರಾಟವನ್ನು ಹತ್ತಿಕ್ಕಲು ಎಲ್ಲ ಕುತಂತ್ರವನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications