ಬೆಳಗಾವಿ: ಹುತಾತ್ಮ ಯೋಧನಿಗೆ ಅಗೌರವ ತೋರಿದ ನಮ್ಮ ರಾಜ್ಯದ ಜನಪ್ರತಿನಿಧಿಗಳು
ಬೆಳಗಾವಿ, ಡಿಸೆಂಬರ್ 18: ದೇಶ ಕಾಯುವ ಯೋಧರಿಗೆ ನಮ್ಮ ನಾಡಿನಲ್ಲಿ ಅಪಾರ ಗೌರವ ಇದೆ. ಆದರೆ ಯೋಧ ಮರಣ ಹೊಂದಿದ್ದರೂ ಅವರಿಗೆ ಯಾವೊಬ್ಬ ಜನಪ್ರತಿನಿಧಿ ಕೂಡ ಗೌರವ ತೋರದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ನಮ್ಮ ರಾಜ್ಯದ ಜನಪ್ರತಿನಿಧಿಗಳ ನಡೆಗೆ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟ ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದ ಸೇವಾ ನಿರತ ಸೈನಿಕ ಮಹೇಶ ಎನ್ ವಾಲಿ (24) ದೇಶ ಸೇವೆಯನ್ನು ಸಲ್ಲಿಸುತ್ತಿರುವಾಗ ನಡೆದಿರುವ ಒಂದು ಘಟನೆಯಲ್ಲಿ ವೀರಮರಣ ಹೊಂದಿದ್ದಾರೆ. ಇಂದು (ಡಿಸೆಂಬರ್ 18) ಬುಧವಾರ ಬೆಳಗ್ಗೆ ಯೋಧನ ಪಾರ್ಥಿವ ಶರೀರ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಈ ವೇಳೆ ಸೇರಿದ ಎಲ್ಲಾ ಮಾಜಿ ಸೈನಿಕರು ಹಾಗೂ ಸ್ಥಳೀಯ ಸೇನಾಧಿಕಾರಿಗಳು ಜಿಲ್ಲಾಧಿಕಾರಿಗಳು ಮೃತ ಯೋಧನಿಗೆ ಗೌರವ ನಮನ ಸಲ್ಲಿಸಿದರು.

ಆದರೆ ಇಡೀ ರಾಜ್ಯದ ರಾಜಕೀಯ ನಾಯಕರುಗಳೆಲ್ಲಾ ಬೆಳಗಾವಿ ಅಧಿವೇಶನದಲ್ಲಿ ಬೀಡು ಬಿಟ್ಟಿದ್ದರೂ ಕೂಡ ಯಾರೊಬ್ಬ ರಾಜಕೀಯ ನಾಯಕರು ಕೂಡ ಸೈನಿಕನ ಗೌರವ ನಮನ ಕಾರ್ಯಕ್ರಮಕ್ಕೆ ಬಾರದಿರುವುದು ತುಂಬಾ ಬೇಸರ ಉಂಟುಮಾಡಿದೆ. ರಾಜಕೀಯ ನಾಯಕರುಗಳಿಗೆ ರೈತರು ಮತ್ತು ಸೈನಿಕರ ಮೇಲೆ ಪ್ರೀತಿ ಅನುಕಂಪ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು. ಇವತ್ತಿನ ರಾಜಕೀಯ ನಾಯಕರ ನಡೆಯಿಂದ ಸೈನಿಕ ಸಮುದಾಯಕ್ಕೆ ತುಂಬಾ ನೋವುಂಟಾಗಿದೆ ಎಂದು ಬೆಳಗಾವಿ ಮಾಜಿ ಸೈನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಯೋಧ ಮಹೇಶ ಎನ್.ವಾಲಿ ಹುತಾತ್ಮ
ಜಮ್ಮು ಕಾಶ್ಮೀರ ಲೇಹ ಎನ್ನುವ ಗಡಿ ಭಾಗದಲ್ಲಿ ಮೈನಸ್ 20 ಡಿಗ್ರಿ ಸೆಲ್ಸಿಯಸ್ ಚಳಿ ಹಿನ್ನಲೆಯಲ್ಲಿ ರಸ್ತೆ ಮೇಲೆ ಮಂಜಿನ ಉಂಡೆ ಬಿದ್ದಿದ್ದು ರಸ್ತೆ ಮೇಲಿನ ಮಂಜಿನ ಉಂಡೆಯನ್ನು ಹಿಟಾಚಿ ವಾಹನದ ಮೂಲಕ ತೆಗೆಯುವ ಸಮಯದಲ್ಲಿ ಗುಡ್ಡದಿಂದ ಮೂರು ಟನ್ ಭಾರವುಳ್ಳ ಕಲ್ಲೊಂದು ಹಿಟಾಚಿ ವಾಹನ ಮೇಲೆ ಬಿದ್ದ ಪರಿಣಾಮ ಯೋಧ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಇಂಡಿಯನ್ ಆರ್ಮಿ ಬಾರ್ಡರ್ ರೋಡ್ ಆರ್ಗನೈಜೆಶನ್ ಯುನಿಟ್‌ನಲ್ಲಿ ಯೋಧ ಮಹೇಶ ಎನ್ ವಾಲಿ ಕೆಲಸ ಮಾಡುತ್ತಿದ್ದರು. ಈ ಮಂಜಿನ ದುರಂತದಲ್ಲಿ ಯೋಧನ ದೇಹವೆಲ್ಲ ಛಿದ್ರವಾಗಿದ್ದು ಮಹೇಶ ಅವರ ಕಾಲುಗಳು ಮಾತ್ರ ಪತ್ತೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದೇ 2025 ಫೆಬ್ರವರಿಯಲ್ಲಿ ಮಹೇಶ ಅವರ ಮದುವೆ ಕೂಡಾ ನಿಶ್ಚಿಯವಾಗಿತ್ತು ಆದರೆ, ವಿಧಿ ಲಿಖಿತ ಬೇರೆನೆ ಆಗಿದ್ದು ಇದೇ ಡಿಸೆಂಬರ 14 ಸಾವನಪ್ಪಿದ್ದಾರೆ. ಪಾರ್ಥಿವ ಶರೀರ ಬೆಳಗಾವಿಯ ಸ್ವ ಗ್ರಾಮಕ್ಕೆ ಆಗಮಿಸಿದ್ದು ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications