ಕುಂದಾನಗರಿ ಬೆಳಗಾವಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ನೇಮಕ
ಬೆಳಗಾವಿ, ಜುಲೈ, 05: ಎರಡು ವರ್ಷ ಬೆಳಗಾವಿ ಜಿಲ್ಲಾಧಿಕಾರಿ ಆಗಿದ್ದ ನಿತೇಶ್ ಪಾಟೀಲ್ ಅವರನ್ನು ಸಣ್ಣ ಉದ್ದಿಮೆಗಳ ನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇನ್ನು ನೂತನ ಜಿಲ್ಲಾಧಿಕಾರಿ ಆಗಿ 2015ಬ್ಯಾಚನ ಮೊಹಮ್ಮದ್ ರೋಷನ್ ಆಗಮಿಸಲಿದ್ದಾರೆ. ಮೊಹಮ್ಮದ್ ರೋಷನ್ ಹೆಸ್ಕಾಂ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹ್ಮದ್ ರೋಷನ್ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಹಾಗೂ ಒಳ್ಳೆಯ ಆಡಳಿತದ ಮೂಲಕ ಜನಸಾಮಾನ್ಯರ ಕಷ್ಟ-ಸುಖಕ್ಕೆ ಸ್ಪಂದಿಸುವ ಆಶಾಭಾವನೆಯಿಂದ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ ಬರೆದು ಯಶಸ್ಸು ಕಂಡವರು.
ಆಡಳಿತದಲ್ಲಿ ಸುಧಾರಣೆ ತರುವ ಮೂಲಕ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುವ ಮಹತ್ವಾಕಾಂಕ್ಷೆ ಹೊಂದಿದವರು. ಅಜ್ಜ, ತಂದೆ, ತಾಯಿ ಸರ್ಕಾರಿ ಸೇವೆಯಲ್ಲಿದ್ದವರೇ. ಪ್ರಸ್ತುತ ಪತ್ನಿ, ಚಿಕ್ಕಪ್ಪ ಕೂಡ ಐಎಎಸ್ ಆಫೀಸರ್. ಹೀಗೆ ಕುಟುಂಬ ಸದಸ್ಯರೆಲ್ಲಾ ಒಂದಲ್ಲಾ ಒಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ.
ಐಎಎಸ್ ಆಫೀಸರ್ ಆಗುವ ಮೊದಲು ಇವರು ಕೂಡ ವಾರನ್ ಬೆಟ್ ಕಂಪೆನಿಯಲ್ಲಿ ಕೆಲಸ ಮಾಡುವ ಅವಕಾಶ ಪಡೆದಿದ್ದರು. ಒಳ್ಳೆಯ ಹುದ್ದೆ ಜೊತೆಗೆ ಒಳ್ಳೆಯ ಸಂಬಳವಿತ್ತು. ಆದರೆ ಟಿಪಿಕಲ್ ಕಾರ್ಪೊರೇಟ್ ಲೈಫ್ ಎಂಜಾಯ್ ಮಾಡುವ ಬದಲು ತಾನೊಬ್ಬ ಉತ್ತಮ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂಬ ಅಭಿಲಾಷೆಯಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಹಾವೇರಿ ಜಿಲ್ಲಾ ಪಂಚಾಯತ ಸಿಇಓ, ಹುಬ್ಬಳ್ಳಿ ಹೆಸ್ಕಾಂ ಎಂಡಿ ಸೇರಿದಂತೆ ವಿವಿಧೆಡೆ ಕಡೆ ಸೇವೆ ಸಲ್ಲಿಸಿ ಈಗ ಬೆಳಗಾವಿ ಜಿಲ್ಲಾಧಿಕಾರಿ ಆಗಿ ನೇಮಕಗೊಂಡಿದ್ದಾರೆ.
ಮೊಹಮ್ಮದ್ ರೋಶನ್ ಅವರು ಹೈದರಾಬಾದ್ ಮೂಲದವರಾಗಿದ್ದು, ಇವರ ತಂದೆ-ತಾಯಿ ಇಬ್ಬರೂ ವೈದ್ಯರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹೈದರಾಬಾದ್‌ನಲ್ಲಿಯೇ ಮುಗಿಸಿದರು. ನಂತರ ಪದವಿಯಲ್ಲಿ ಇಂಜಿನಿಯರಿಂಗ್ ಹಾಗೂ ಎಂಬಿಎನಲ್ಲಿ ಸ್ನಾತಕೋತ್ತರ ಪದವಿ
ಪಡೆದರು. ಕುಟುಂಬದವರೆಲ್ಲಾ ಸಿವಿಲ್ ಸರ್ವೀಸ್‌ನಲ್ಲಿ ಇದ್ದುದರಿಂದ ತಾನು ಕೂಡ ಒಮ್ಮೆ ಪ್ರಯತ್ನಿಸೋಣವೆಂದು ಇಂಜಿನಿಯರಿಂಗ್ 4ನೇ ವರ್ಷದಲ್ಲಿದ್ದಾಗ ಪರೀಕ್ಷೆಗೆ ಸಿದ್ಧತೆ ಶುರು ಮಾಡಿಕೊಂಡ ಅವರು ಪ್ರಥಮ ಪ್ರಯತ್ನದಲ್ಲಿ ಪ್ರಿಲಿಮ್ಸ್‌ನಲ್ಲಿ ಯಶಸ್ವಿಯಾದರೂ ಮುಖ್ಯ ಪರೀಕ್ಷೆಯಲ್ಲಿ ಆಗಲಿಲ್ಲ.
ಮತ್ತೆ ಎಂಬಿಎ ಮಾಡುವಾಗ ಎರಡನೇ ಹಾಗೂ ಮೂರನೇ ಪ್ರಯತ್ನ ಮಾಡಿದರು. ಆದರೆ ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡರು. 2014ರಲ್ಲಿ 44ನೇ ರ‍್ಯಾಂಕ್ ಪಡೆಯುವ ಮೂಲಕ ಅತ್ಯುತ್ತಮಅಂಕ ಪಡೆದರು. ಸಂದರ್ಶನದಲ್ಲಿಯೂ ಸಹ ಒಳ್ಳೆಯ ಅಂಕಗಳು ಬಂದು ಯಪಿಎಸ್‌ಸಿ ಪರೀಕ್ಷೆ ಬರೆದು, ಲಿತಾಂಶ ಬರುವ ಕೆಲವೇ ದಿನಗಳಿರುವಾಗ ವಾರನ್ ಬೆಟ್ ಕಂಪೆನಿಯಲ್ಲಿ ರೋಶನ್ ಅವರಿಗೆ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಸಂಬಳ ಕೂಡ ಚೆನ್ನಾಗಿತ್ತು.
ಆದರೆ ಒಂದು ತಿಂಗಳು ಕೆಲಸ ಮಾಡಿದ ನಂತರ ಆ ಕೆಲಸ ಬಿಟ್ಟರು. "ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡಿದ್ದರೆ, ಈ ತರಹ ಜನರ ಸೇವೆ ಮಾಡುವ ಅವಕಾಶ ಸಿಗುತ್ತಿರಲಿಲ್ಲ. ಉದ್ದೇಶಪೂರ್ವಕವಾಗಿ ಖಾಸಗಿ ಕಂಪನಿ ಕೆಲಸ ಬಿಟ್ಟು, ಗ್ರಾಮೀಣಭಾಗದಲ್ಲಿ ಕೆಲಸಗಳನ್ನು ಮಾಡಲು, ವಿಶೇಷವಾಗಿ ಅಲ್ಲಿಯ ಜನರ ಸಮಸ್ಯೆ ಬಗೆಹರಿಸಲು ಈ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ," ಎಂದು ತಿಳಿಸಿದ್ದಾರೆ.












Click it and Unblock the Notifications