ಪುತ್ರನ ಕೊರಳಲ್ಲಿನ ಹುಲಿ ಉಗುರು ಫೋಟೋ ವೈರಲ್ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?
ಬೆಳಗಾವಿ, ಅಕ್ಟೋಬರ್, 27: ರಾಜ್ಯಾದ್ಯಂತ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ಅದೇ ರೀತಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಕೊರಳಲ್ಲೂ ಹುಲಿ ಉಗುರು ಹೋಲುವ ಪೆಂಡೆಂಟ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಇದೀಗ ಇಂದು ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಹಾಗೆಯೇ ಈ ವೇಳೆ ಸಚಿವೆ ಕೊಟ್ಟ ಪ್ರತಿಕ್ರಿಯೆ ಹೇಗಿತ್ತು ಎಂದು ಇಲ್ಲಿ ತಿಳಿಯಿರಿ.

ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಸಚಿವೆಯ ಪುತ್ರ ಮೃಣಾಲ ಹೆಬ್ಬಾಳಕರ ಧರಿಸಿದ್ದ ಹುಲಿ ಉಗುರಿನ ಚಿತ್ರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಇಂದು ಬೆಳಗಾವಿ ಅರಣ್ಯಾಧಿಕಾರಿಗಳು ಡಿಸಿಎಫ್ ಶಂಕರ ಕಲ್ಲೋಳಿಕರ ನೇತೃತ್ವದಲ್ಲಿ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.
ಇನ್ನು ಪೆಂಡೆಂಟ್ ನೈಜತೆಯ ಬಗ್ಗೆ ಪರಿಶೀಲಿಸಿ, ವಿಸ್ಕೃತ ವರದಿ ರಾಜ್ಯಮಟ್ಟದ ಸಮಿತಿಗೆ ನೀಡಲಾಗುವುದು. ನೈಜವಾಗಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಫ್ ತಿಳಿಸಿದ್ದಾರೆ.

ಈ ವೇಳೆ ಎಸಿಎಫ್ ಶಿವರುದ್ರಪ್ಪ ಕಬಾಡಗಿ, ವಲಯ ಅರಣ್ಯಾಧಿಕಾರಿ ಪುರುಷೋತ್ತಮ, ಉಪವಲಯ ಅರಣ್ಯಾಧಿಕಾರಿ ವಿನಯ ಗೌಡರ, ಪ್ರಾದೇಶಿಕ ಹಾಗೂ ಸ್ಕ್ವಾಡ್ ಸಿಬ್ಬಂದಿ ಹಾಜರಿದ್ದರು.
ಇನ್ನು ಈ ಬಗ್ಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಅರಣ್ಯಾಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ. ಇನ್ನು ಇದು ಪ್ಲಾಸ್ಟಿಕ್ ಹುಲಿ ಉಗುರಿನ ಪೆಂಡೆಂಟ್ ಆಗಿದ್ದು, ಇದನ್ನು ಮಗನಿಗೆ ಮದುವೆ ಸಂದರ್ಭದಲ್ಲಿ ಸಂಬಂಧಿಕರು ಗಿಫ್ಟ್ ಕೊಟ್ಟಿದ್ದರು ಎಂದರು.
ಹೆಬ್ಬಾಳ್ಕರ್ ಅಳಿಯನ ನಿವಾಸಕ್ಕೆ ಅರಣ್ಯ ಅಧಿಕಾರಿಗಳ ಭೇಟಿ
ಹುಲಿ ಉಗುರಿನ ಪೆಂಡೆಂಟ್ ಪ್ರಕರಣ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಳಿಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ನಿವಾಸಕ್ಕೆ ಅರಣ್ಯ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಜತ್ ಉಳ್ಳಾಗಡ್ಡಿಮಠ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳಿಗೆ ರಜತ್ ಉಳ್ಳಾಗಡ್ಡಿಮಠ ಸಹಕಾರ ಹಾಗೂ ಅಗತ್ಯ ಮಾಹಿತಿ ನೀಡಿದರು.
ಹುಲಿ ಉಗುರಿನ ಪೆಂಡೆಂಟ್ ಮಾದರಿಯ ಚೈನ್ ಧರಿಸಿದ್ಧ ರಜತ್ ಉಳ್ಳಾಗಡ್ಡಿಮಠ ಅವರ ಪೋಟೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತಿದ್ದಂತೆ ರಜತ್ ಉಳ್ಳಾಗಡ್ಡಿಮಠ ಅವರ ಮನೆಗೆ ಆಗಮಿಸಿದ ಅರಣ್ಯ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹುಬ್ಬಳ್ಳಿ ಪೊಲೀಸರು ಸಾಥ್ ನೀಡಿದರು.
ನಂತರ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್. ಅವರು, ರಜತ್ ಅವರ ಬಳಿ ಇರುವ ಪೆಂಡೆಂಟ್ ಮಾದರಿ ಚೈನ್ ಅನ್ನು ಪರಿಶೀಲನೆ ಮಾಡಿದ್ದೇವೆ. ಈಗಾಗಲೇ ಆ ಪೆಂಡೆಂಟ್ ವಶಕ್ಕೆ ತೆಗೆದುಕೊಂಡಿದ್ದೇವೆ. ಹೆಚ್ಚಿನ ತನಿಖೆಗಾಗಿ ಈ ಉಗುರನ್ನು ಎಫ್‌ಎಸ್‌ಐಎಲ್ ಪ್ರಯೋಗಾಲಯಕ್ಕೆ ಕಳಿಸಲಾಗುವುದು. ವರದಿ ಬಂದ ನಂತರ ಈ ಕುರಿತು ಸ್ಪಷ್ಟನೆ ಸಿಗಲಿದೆ ಎಂದರು.
ಈ ಬಗ್ಗೆ ವರದಿ ಬರುವುದಕ್ಕೆ ಒಂದು ತಿಂಗಳು ಅವಧಿ ಬೇಕಾಗುತ್ತದೆ. ಒಂದು ವೇಳೆ ಅದು ನಿಜವಾದ ಹುಲಿ ಉಗುರು ಆದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ತನಿಖೆಗೆ ಸಹಕಾರ ನೀಡುವಂತೆ ರಜತ್ ಉಳ್ಳಾಗಡ್ಡಿಮಠ ಅವರಿಗೆ ಸೂಚಿಸಿದ್ದೇವೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್. ತಿಳಿಸಿದ್ದಾರೆ.












Click it and Unblock the Notifications