ಅನ್ನದಾತನ ಆತ್ಮಹತ್ಯೆ ಬಗ್ಗೆ ನ್ಯಾಯಾಂಗ ತನಿಖೆ
ಬೆಳಗಾವಿ, ನ.28 : ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುವ ವೇಳೆ ಆತ್ಮಹತ್ಯೆ ಮಾಡಿಕೊಂಡ ಕಬ್ಬು ಬೆಳೆಗಾರ ವಿಠಲ ಅರಭಾವಿ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದಾಗಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ಪಕ್ರಕರಣ ಸತ್ಯಾಸತ್ಯತೆ ತಿಳಿಯುವುದಕ್ಕೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಗುರುವಾರ ಕಬ್ಬು ಬೆಳೆಗಾರನ ಆತ್ಮಹತ್ಯೆ ವಿಚಾರದ ಕುರಿತು ಸದನದಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತನ ಆತ್ಮಹತ್ಯೆಗೆ ಸರ್ಕಾರವೇ ಹೊಣೆ ಎಂದು ಪ್ರತಿಪಕ್ಷಗಳು ಕೂಗಾಡುತ್ತಿವೆ. ಇದನ್ನು ಮುಂದೆಯೂ ಹೇಳುತ್ತೀರಿ ಎಂದು ಆರೋಪಿಸಿದರು. ಆದ್ದರಿಂದ ಪ್ರಕರಣದ ಸತ್ಯಾಸತ್ಯತೆ ತಿಳಿಯುವುದಕ್ಕೆ ನ್ಯಾಯಾಂಗ ತನಿಖೆ ವಹಿಸಲಾಗುವುದು ಎಂದು ತಿಳಿಸಿದರು. (ಬೆಳಗಾವಿಯಲ್ಲಿ ರೈತ ಆತ್ಮಹತ್ಯೆ)

ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಶಾಸಕರ ರಮೇಶ್ ಕುಮಾರ್, ವಿಠಲ ಅರಭಾವಿ ಆತ್ಮಹತ್ಯೆಗೆ ಸರ್ಕಾರ ಮಾತ್ರವಲ್ಲ ಇಡೀ ಸದನದ ಸದಸ್ಯರು ಹೊಣೆ. ಏಕೆಂದರೆ, ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿತ್ತು. ಸದನದೊಳಗೆ ತೀರ್ಮಾನ ಆಗುವುದಕ್ಕೂ ಮೊದಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರು. (ಜಯಕಾರ ಧಿಕ್ಕಾರದ ನಡುವೆ ಸಕ್ಕರೆದಾತನ ಅಂತ್ಯಕ್ರಿಯೆ)
ವಿಠಲ ಅರಭಾವಿ ಆತ್ಮಹತ್ಯೆ ಬಗ್ಗೆ ಹಲವಾರು ಸಂಶಯಗಳಿವೆ. ಆತ ಸೇವಿಸಿದ ಕೀಟನಾಶಕ ಪ್ರತಿಭಟನಾ ಸ್ಥಳದಲ್ಲಿ ಮಾರಾಟಕ್ಕೆ ಇಡಲಾಗಿತ್ತೇ? ಆತನನ್ನು ಯಾರಾದರೂ ವಿಷ ಕುಡಿಯುವುದಕ್ಕೆ ಪ್ರೇರೇಪಿಸಿದ್ದರೇ ಎಂಬ ಪ್ರಶ್ನೆಗಳಿವೆ. ಹೀಗಾಗಿ, ಆತ್ಮಹತ್ಯೆ ಬಗ್ಗೆ ಸರ್ಕಾರವು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. (ರೈತ ಆತ್ಮಹತ್ಯೆ : ಸರ್ಕಾರಕ್ಕೆ ಪ್ರತಿಪಕ್ಷಗಳ ಗುದ್ದು)
ಗುರುವಾರದ ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪಗಳಲ್ಲಿ ರೈತ ಆತ್ಮಹತ್ಯೆ ಪ್ರತಿಧ್ವನಿಸಿತ್ತು. ವಿಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕಲಾಪಕ್ಕೆ ಅಡ್ಡಿ ಪಡಿಸಿದ್ದವು. ವಿಧಾನಪರಿಷತ್ ಕಲಾಪವನ್ನು ಪ್ರತಿಭಟನೆಯಿಂದಾಗಿ ಮುಂದೂಡಿದರೆ, ವಿಧಾನಸಭೆ ಕಲಾಪ ಎರಡು ಬಾರಿ ಮುಂದೂಡಿದ ನಂತರ ಸಂಜೆ ಆರಂಭವಾಯಿತು. (ನಾಲ್ಕನೇ ದಿನದ ಕಲಾಪದಲ್ಲಿ ನಡೆದದ್ದೇನು)












Click it and Unblock the Notifications