ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಣಕ್ಕೆ: ಮತ್ತೆ ಬಿಜೆಪಿ ಪಾಲಾಗಲಿದೆಯಾ ಗಡಿ ಕ್ಷೇತ್ರ..?
ಬೆಳಗಾವಿ, ಮಾರ್ಚ್ 26: 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಅಂತಿಮವಾಗಿದ್ದು, ಈಗಾಗಲೇ ಭರ್ಜರಿ ಚುನಾವಣಾ ಪ್ರಚಾರ ಆರಂಭವಾಗಿದೆ. ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಪ್ರಚಾರ ಆರಂಭಿಸಿದ್ದು, ಗೆಲುವಿನ ಭರವಸೆಯಲ್ಲಿದ್ದಾರೆ.
ಈ ಬಾರಿ ಶತಾಯಗತಾಯ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕು ಎಂದುಕೊಂಡಿರುವ ಬಿಜೆಪಿ, ಉತ್ತರ ಕರ್ನಾಟಕದ ಭಾಗಗಳಲ್ಲಿಯೂ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಪೈಕಿ ಜಗದೀಶ್ ಶೆಟ್ಟರ್ ಪ್ರಮುಖರಾಗಿದ್ದಾರೆ. ಮರಳಿ ಬಿಜೆಪಿ ಸೇರಿರುವ ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಲೋಕಸಭಾ ಟಿಕೆಟ್ ನೀಡುವ ಮೂಲಕ ಪಕ್ಷದಿಂದ ಗೌರವ ನೀಡಿದ್ದು, ಜಗದೀಶ್ ಶೆಟ್ಟರ್ ಕೂಡ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವ ಧ್ಯೇಯದೊಂದಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ.

ಬೆಳಗಾವಿ ಬಿಜೆಪಿಯ ಭದ್ರಕೋಟೆಯಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಮರಳಿದ್ದು, ಬೆಳಗಾವಿ ಜಯದ ಮೂಲಕ ತಮ್ಮ ರಾಜಕೀಯ ಬದುಕಿನ ಮತ್ತೊಂದು ಅಧ್ಯಾಯ ಆರಂಭಿಸಲಿದ್ದಾರೆ ಎನ್ನುವುದು ಜಗದೀಶ್ ಶೆಟ್ಟರ್ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರ ಮಾತಾಗಿದೆ.
ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸುಲಭದ ಹಾದಿಯೇ ಏಕೆಂದರೆ, ಜಗದೀಶ್ ಶೆಟ್ಟರ್ ಬೇರೆ ಕ್ಷೇತ್ರದಿಂದ ಬಂದವರಾದರೂ ಸಹ ಬೆಳಗಾವಿ ಜನರಿಗೆ ಚಿರಪರಿಚಿತರು. ಸುರೇಶ್ ಅಂಗಡಿಯವರು ಜಿಲ್ಲಾಧ್ಯಕ್ಷರಾಗಿದ್ದ ಸಮಯದಲ್ಲಿ ಶೆಟ್ಟರ್ ವಿರೋಧ ಪಕ್ಷದ ನಾಯಕನಾಗಿದ್ದಾಗ ಬೆಳಗಾವಿಯಲ್ಲಿ ಸಾಕಷ್ಟು ಸಂಘಟನಾ ಕೆಲಸ ಮಾಡಿದ್ದಲ್ಲದೆ, ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೂಡ ಕೆಲಸ ಮಾಡಿದ್ದಾರೆ.
ಮುಖ್ಯವಾಗಿ ಜಗದೀಶ್ ಶೆಟ್ಟರ್ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಸದ್ಯ ಈ ಕ್ಷೇತ್ರದಲ್ಲಿ ಟಿಕೆಟ್ ಸಿಗದೇ ಅಸಮಾಧಾನಗೊಂಡಿರುವ ಅಭ್ಯರ್ಥಿಗಳು ಯಾರೂ ಇರದ ಕಾರಣ ಸಂಪೂರ್ಣ ಬಿಜೆಪಿ ಪಡೆ ಜಗದೀಶ್ ಶೆಟ್ಟರ್ ಪರ ಕೆಲಸ ಮಾಡಲಿದೆ. ಹಾಲಿ ಸಂಸದೆ ಮಂಗಳಾ ಅಂಗಡಿಯವರು ಸಹ ಶೆಟ್ಟರ್ ಪರವಾಗಿ ಪ್ರಚಾರ ಮಾಡುವ ಭರವಸೆ ನೀಡಿದ್ದಾರೆ. ಹೀಗಾಗಿ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲು ಬಿಜೆಪಿ ಸಮರ್ಥವಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯುತ ಪ್ರಾಬಲ್ಯ ಹೆಚ್ಚಿದ್ದು, ಬಿಜೆಪಿಯನ್ನು ಸೋಲಿಸಲು ಲಿಂಗಾಯತ ಮತಬ್ಯಾಂಕ್ ಹಂಚಿಕೆ ಮಾಡಬೇಕು ಹಾಗೂ ದಲಿತ, ಒಬಿಸಿ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಪಡೆಯಬೇಕು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಆದರೆ ಈ ಕ್ಷೇತ್ರದಲ್ಲಿ ಲಿಂಗಾಯತ ಮತಬ್ಯಾಂಕ್ ಒಡೆಯುವುದು ಅಷ್ಟು ಸುಲಭದ ಮಾತಲ್ಲ. ಇನ್ನು ದಲಿತರು ಮತ್ತು ಒಬಿಸಿಗಳು ಕೂಡ ಬಿಜೆಪಿ ಪರವಾಗಿದ್ದು, ಸಾಕಷ್ಟು ಮರಾಠ ಮತದಾರರು ಕೂಡ ಬಿಜೆಪಿ ಪರವಾಗಿರುವುದು ಕ್ಷೇತ್ರದ ಸದ್ಯದ ಸನ್ನಿವೇಶವಾಗಿದೆ. ಹೀಗಾಗಿ ಬಿಜೆಪಿಗೆ ಬೆಳಗಾವಿ ಲೋಕಸಭಾ ಕ್ಷೇತ್ರ ಗೆಲುವಿನ ಹಾದಿಯಾಗುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications