Laxman Savadi: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಲಕ್ಷ್ಮಣ ಸವದಿ ಹೇಳಿದ್ದೇನು?
ಬೆಳಗಾವಿ, ಮೇ 29: ಚುನಾವಣೆಗೆ ಮುನ್ನ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಭರ್ಜರಿ ಗೆಲುವು ಕಂಡಿದ್ದ ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಸವದಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದರು.
ಬಿಜೆಪಿ ನಾಯಕರ ಟೀಕೆಗಳಿಗೆ ತಿರುಗೇಟು ಕೊಟ್ಟಿರುವ ಲಕ್ಷ್ಮಣ ಸವದಿ, ರಾಜಕಾರಣದಲ್ಲಿ ತಾಳ್ಮೆ ಮುಖ್ಯವಾಗುತ್ತದೆ. ತಾಳ್ಮೆಯಿಂದ ಇರುವುದು ಮುಖ್ಯವಾಗುತ್ತದೆ, ನನಗೆ ನಿರಾಸೆಯಾಗಿಲ್ಲ, ಭವಿಷ್ಯದಲ್ಲಿ ಉತ್ತಮ ದಿನಗಳು ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಥಣಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಲಕ್ಷ್ಮಣ ಸವದಿ, ಎಲ್ಲರಿಗೂ ನಿರೀಕ್ಷೆಗಳು ಇರುವುದು ಸಹಜ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳು ಇರುವುದಿಲ್ಲ. ಆಸೆಗಳಿಗೆ ಕೊನೆ ಇಲ್ಲ, ಅದು ಮನುಷ್ಯನ ಸಹಜಗುಣ. ಎಲ್ಲರಿಗೂ ಸಚಿವರಾಗಬೇಕು, ಡಿಸಿಎಂ ಆಗಬೇಕು, ಮುಖ್ಯಮಂತ್ರಿಯಾಗಬೇಕು ಎನ್ನುವ ನಿರೀಕ್ಷೆಗಳು ಇರುತ್ತವೆ ಎಂದರು.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆಯಾ? ಸಿದ್ದರಾಮಯ್ಯ ಎರಡೂವರೆ ವರ್ಷಗಳಿಗೆ ಮಾತ್ರ ಸಿಎಂ ಆಗಿರ್ತಾರ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಸವದಿ, ಹೈಕಮಾಂಡ್ ಮಟ್ಟದಲ್ಲಿ ಏನು ಚರ್ಚೆ ನಡೆದಿದೆ ಎನ್ನುವುದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಮತ್ತು ವರಿಷ್ಠ ನಡುವೆ ಚರ್ಚೆ ಎಲ್ಲೂ ಬಹಿರಂಗವಾಗಿಲ್ಲ, ಯಾರು ಏನೆ ಮಾತನಾಡಿದರೂ ಅದು ಊಹಾಪೋಹ ಅಷ್ಟೇ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಮಾಡುತ್ತಿರುವ ಟೀಕೆಗಳು, ಗೊಂದಲ ಮೂಡಿಸಲು ಮಾಡುತ್ತಿರುವ ಪ್ರಯತ್ನಗಳ ಕುರಿತು ಮಾತನಾಡಿ, ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಮೊದಲು ಸರ್ವೆ ಕೆಲಸ ಮುಗಿಯಬೇಖು, ನಂತರ ಅದಕ್ಕೆ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಆಪ್ತ ಬಣದಲ್ಲಿರುವ ಲಕ್ಷ್ಮಣ ಸವದಿ
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ಸಿದ್ದರಾಮಯ್ಯ ಅವರ ಆಪ್ತರಲ್ಲಿ ಗುರುತಿಸಿಕೊಂಡವರು. ಅಥಣಿ ಕ್ಷೇತ್ರದಲ್ಲಿ ತಾವು ಗೆಲ್ಲುವ ಜೊತೆಗೆ ಅಕ್ಕಪಕ್ಕದ ಕ್ಷೇತ್ರಗಳಾದ ಕುಡುಚಿ ಮತ್ತು ಕಾಗವಾಡದಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಸಿದ್ದರಾಮಯ್ಯ ಅವರ ನಂಬಿಕೆ ಉಳಿಸಿಕೊಂಡಿದ್ದಾರೆ. ಬಿಜೆಪಿಯ ಘಟಾನುಘಟಿ ನಾಯಕರು ಅಥಣಿಯಲ್ಲಿ ಸವದಿ ಅವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟು ಬಿರುಸಿನ ಪ್ರಚಾರ ಮಾಡಿದರು ಲಕ್ಷ್ಮಣ ಸವದಿ ಭರ್ಜರಿ ಗೆಲುವು ಕಂಡಿದ್ದರು.
ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದು ಗೆದ್ದ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕಾಂಗ್ರೆಸ್ ತನ್ನದೇ ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ಹಂಚಿಕೆ ಮಾಡಿದೆ. ಸವದಿ ಅವರಿಗೆ ಬೇರೆ ಪ್ರಮುಖ ಜವಾಬ್ದಾರಿಗಳನ್ನು ನೀಡುವ ಸಾಧ್ಯತೆ ಇದೆ.












Click it and Unblock the Notifications