ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟ: ಇಂದು ಸ್ವಾಮೀಜಿ ಜೊತೆ ಸಚಿವೆ ಮಹತ್ವದ ಸಭೆ
ಬೆಳಗಾವಿ, ಡಿಸೆಂಬರ್ 09: ಬೆಳಗಾವಿ ಚಳಿಗಾಲ ಅಧಿವೇಶನ ಆರಂಭವಾಗಿದ್ದು, ಇತ್ತ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದ ಪಂಚಮಸಾಲಿ ಸಮುದಾಯ ಪರ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಧ್ವನಿ ಎತ್ತಿದ್ದಾರೆ. ಪಂಚಮಸಾಲಿ ಪ್ರತಿಭಟನೆ ವಿಚಾರದಲ್ಲಿ ಬೆಳಗಾವಿ ಜಿಲ್ಲಾಡಳಿತದ ನಡೆಗೆ ಸಚಿವೆ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಆಡಳಿತ ಪಕ್ಷದಲ್ಲಿದ್ದುಕೊಂಡು, ಸಚಿವೆಯಾದರೂ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರತಿಭಟನಾಕಾರರ ಪರ ಧ್ವನಿ ಎತ್ತಿದ್ದಾರೆ.

ಬೆಳಗಾವಿ ಜಿಲ್ಲಾಡಳಿತವು ಪಂಚಮಸಾಲಿ ಟ್ರ್ಯಾಕ್ಟರ್ ರ್ಯಾಲಿಗೆ ನಿರ್ಬಂಧ ವಿಧಿಸಿದೆ. ಹೀಗೆ ಮಾಡಕೂಡದು. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಹೀಗಾಗಿ ಪ್ರತಿಭಟನೆಗಳಿಗೆ ನಿರ್ಬಂಧ ಹೇರಬಾರದು. ನಾನು ಸಹ ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡಿದ್ದೇನೆ ಎಂದು ಅವರು ಹೇಳುವ ಮೂಕ ಜಿಲ್ಲಾಡಳಿತದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ರೈತರಿಗೆ ಈಗ ಕಬ್ಬಿನ ಸೀಜನ್, ಟ್ರಾಕ್ಟರ್ ಹೆಚ್ಚು ಓಡಾಡುತ್ತವೆ. ಅಧಿವೇಶನ ವೇಳೆ ಯಾವುದೇ ಅಪಘಾತ, ದುರ್ಘಟನೆ ಆಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕೇ ವಿನಃ ನಿಬಂಧಿಸಬಾರದು. ಮುಂಜಾಗ್ರತೆ ದೃಷ್ಟಿಯಿಂದ ಜಿಲ್ಲಾಡಳಿತ ಹೀಗೆ ಕ್ರಮ ಕೈಗೊಂಡಿರಬಹುದು ಅಂತಲೂ ಅವರು ತಿಳಿಸಿದರು.
ಇಂದು ಸಂಜೆ 4 ಗಂಟೆಗೆ ಸಭೆ
ಪಂಚಮಸಾಲಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರೊಂದಿಗೆ ಮಾತನಾಡಿದ್ದೇನೆ. ಇಂದು ಸಂಜೆ 4 ಗಂಟೆಗೆ ಅರವಿಂದ್ ಬೆಲ್ಲದ್, ಸಿಸಿ ಪಾಟೀಲ್ ಒಳಗೊಂಡಂತೆ ಕೆಲವು ನಾಯಕರ ಜೊತೆಗೆ ಸಭೆ ನಡೆಸಲಾಗುವುದು. ಅವರ ಬೇಡಿಕೆ, ಹೋರಾಟ ಕುರಿತು ಚರ್ಚಿಸಲಾಗುವುದು ಎಂದು ವಿವರಿಸಿದರು.
ಬೆಳಗಾವಿಯಲ್ಲಿ ರೈತರ ಟ್ರ್ಯಾಕ್ಟರ್ ನಿರ್ಬಂಧಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಯಿಸಿ ಮಾತನಾಡುತ್ತೇನೆ. ರೈತರ ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ, ಪಂಚಮಸಾಲಿ ಹೋರಾಟಗಾರರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಅವರು ಹೇಳಿದರು.












Click it and Unblock the Notifications