'ಟಿಪ್ಪು ಜಯಂತಿ ಆಚರಣೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಸೇರಿಸಬೇಡಿ'
ಬೆಳಗಾವಿ, ಅಕ್ಟೋಬರ್ 22 : 'ಟಿಪ್ಪು ಜಯಂತಿ ಆಚರಣೆ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಹಾಕಬೇಡಿ' ಎಂದು ಬೆಳಗಾವಿ ಸಂಸದ ಸುರೇಶ್ ಅಂಗಡಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಈ ರೀತಿ ಈಗಾಗಲೇ ಮನವಿ ಮಾಡಿ ವಿವಾದ ಹುಟ್ಟುಹಾಕಿದ್ದಾರೆ.
'ಇತಿಹಾಸ ಮರೆತವರು, ಇತಿಹಾಸ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಟಿಪ್ಪು ಆಳ್ವಿಕೆಯಲ್ಲಿ ಸಾವಿರಾರು ಹಿಂದುಗಳನ್ನು ಹತ್ಯೆ ಮಾಡಿದ್ದಾರೆ ಎಂಬ ಇತಿಹಾಸ ಇದೆ. ಈ ಬಗ್ಗೆ ಹಿರಿಯ ಸಾಹಿತಿಗಳು ಸೇರಿದಂತೆ ಅನೇಕರು ದಾಖಲೆ ಬಿಡುಗಡೆ ಮಾಡಿದ್ದಾರೆ' ಎಂದು ಸುರೇಶ್ ಅಂಗಡಿ ಹೇಳಿದ್ದಾರೆ.

'ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕದಿರಲು ಮನವಿ ಮಾಡಿದ್ದೇನೆ. ನನ್ನ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟ ಮಾಡಬಾರದು. ಟಿಪ್ಪು ಜಯಂತಿ ಆಚರಣೆಗೆ ಹಲವಾರು ವಿರೋಧಗಳಿದ್ದರೂ ಸರ್ಕಾರ ಟಿಪ್ಪು ಜಯಂತಿ ಮಾಡಲು ಹೊರಟಿದೆ' ಎಂದು ಸುರೇಶ್ ಅಂಗಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಾದ ಹುಟ್ಟು ಹಾಕಿದ ಸಚಿವ : ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ ಈಗಾಗಲೇ ಟಿಪ್ಪು ಜಯಂತಿ ಬಗ್ಗೆ ವಿವಾದ ಹುಟ್ಟು ಹಾಕಿದ್ದಾರೆ. 'ನನ್ನ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಸೇರಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರುವ ವೇದಿಕೆಯಲ್ಲಿಯೇ ಟಿಪ್ಪು ಇತಿಹಾಸವನ್ನು ಎಳೆ-ಎಳೆಯಾಗಿ ಬಿಚ್ಚಿಡುತ್ತೇನೆ. ತಾಕತ್ತಿದ್ದರೆ ಮುಖ್ಯಮಂತ್ರಿಗಳು ತಡೆಯಲಿ' ಎಂದು ಹೇಳಿದ್ದಾರೆ.












Click it and Unblock the Notifications