• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ : ಬುಧವಾರದ ಕಲಾಪದ ಮುಖ್ಯಾಂಶಗಳು

|

ಬೆಳಗಾವಿ, ಡಿ. 10 : ಬೆಳಗಾವಿ ಚಳಿಗಾಲದ ಅಧಿವೇಶನದ ಎರಡನೇ ದಿನದ ಕಲಾಪ ಗಂಭೀರವಾದ ಚರ್ಚೆಯೊಂದಿಗೆ ಆರಂಭವಾಯಿತು. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪಡಿತರ ಚೀಟಿ ವಿತರಣೆಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ಬಿಜೆಪಿ ಶಾಸಕ ಪ್ರಭು ಚೌವಾಣ್ ಪಡಿತರ ಚೀಟಿ ತುಂಬಿದ ಬುಟ್ಟಿಯನ್ನು ಸದನಕ್ಕೆ ಹೊತ್ತು ತಂದು ಎಲ್ಲರ ಗಮನ ಸೆಳೆದರು.

ಆದರೆ, ಸಂಜೆಯ ವೇಳೆಗೆ ಹಿರೇಕೆರೂರು ಶಾಸಕ ಯು.ಬಿ.ಬಣಕಾರ್ ಅವರು ಕ್ಯಾಂಡಿ ಕ್ರಷ್ ಆಡುತ್ತಿದ್ದಾಗ, ಔರಾದ್ ಶಾಸಕ ಪ್ರಭು ಚೌವಾಣ್ ಪ್ರಿಯಾಂಕ ಗಾಂಧಿ ಅವರ ಫೋಟೋ ನೋಡುತ್ತಿದ್ದಾಗ ಮಾಧ್ಯಮಗಳ ಕಣ್ಣಿಗೆ ಸಿಕ್ಕಿಬಿದ್ದು, ವಿವಾದಕ್ಕೆ ಕಾರಣರಾದರು.[ಚೌವಾಣ್ ಮಾಡಿದ್ದೇನು ಇಲ್ಲಿದೆ ವಿವರ]

ಬುಧವಾರದ ಕಲಾಪಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಕಣ್ಣೀರು ಹಾಕಿದರು. [ಮಂಗಳವಾರ ಕಲಾಪದಲ್ಲಿ ಏನಾಯ್ತು?]

ಸಚಿವರ ವಿರುದ್ಧ ಅಸಮಾಧಾನ : 'ನಾನು 2 ವರ್ಷದಿಂದ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದೇನೆ. ನನಗೆ ಸಚಿವ ಸ್ಥಾನ ನೀಡದಿದ್ದರೂ ಬೇಡ. ಆದರೆ ಆಸಕ್ತಿ ಇಲ್ಲದ ಸಚಿವರನ್ನು ಸಂಪುಟದಿಂದ ಕೈಬಿಡಿ' ಎಂದು ಅಫಜಲ್ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಸಭೆಯಲ್ಲಿ ಹೇಳಿದರು.

* ಸಚಿವರು ಕಚೇರಿಗಳಲ್ಲೇ ಏಜೆಂಟರುಗಳನ್ನು ಇಟ್ಟುಕೊಂಡಿದ್ದಾರೆ. ಮಧ್ಯವರ್ತಿಗಳ ಮೂಲಕ ಕಲೆಕ್ಷನ್ ಮಾಡುತ್ತಿದ್ದಾರೆ ಎಂದು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

* ಬಾಗಲಕೋಟೆ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ವಿರುದ್ಧ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅಸಮಾಧಾನ ವ್ಯಕ್ತಪಡಿಸಿ, ಸಚಿವರು ಪಕ್ಷ ವಿರೋಧಿಗಳನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಾರೆ. ಹೀಗಾದ್ರೆ ಪಕ್ಷ ಕಟ್ಟುವುದು ಹೇಗೆ? ಎಂದು ಪ್ರಶ್ನಿಸಿದರು.

ಕಲಾಪದಲ್ಲಿ ನಡೆದದ್ದೇನು : ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಪ್ರತಿ ಜಿಲ್ಲೆಯಲ್ಲಿಯೂ ಸುಮಾರು 20,000 ಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ರದ್ದು ಮಾಡಿರುವುದಲ್ಲದೆ, ಬಡತನ ರೇಖೆಗಿಂತಲೂ ಕಡಿಮೆ ಇರುವ ( ಬಿಪಿಎಲ್ ) ಕಾರ್ಡುದಾರರನ್ನು ಬಡತನ ರೇಖೆಗಿಂತಲೂ ಮೇಲಿರುವ ( ಎಪಿಎಲ್ ) ಕಾರ್ಡುದಾರರಾಗಿ ಪರಿವರ್ತಿಸಿ ಜನರಿಗೆ ಅನ್ಯಾಯ ಮಾಡಿದೆ ಎಂದು ಪ್ರಭು ಚವಾಣ್ ಸರ್ಕಾರದ ಗಮನ ಸೆಳೆದರು.

60 ಶಾಲೆಗಳಲ್ಲಿ ಸಿಸಿಟಿವಿ : ಶಾಲೆಗಳಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಮೇಲೆ ನಿಗಾ ಇಡಲು ರಾಜ್ಯದಲ್ಲಿರುವ ಸರ್ಕಾರಿ ಹಾಗೂ ಖಾಸಗಿಯ ಎಲ್ಲಾ 60 ಸಾವಿರ ಶಾಲೆಗಳಲ್ಲೂ ಸಿಸಿಟಿವಿ ಅಳವಡಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರ್ಥಿಕ ಲಭ್ಯತೆ ಆಧರಿಸಿ ಮೊದಲ ಹಂತದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷಾ ಕೇಂದ್ರಗಳಿರುವ 2,300 ಶಾಲೆಗಳಲ್ಲಿ ಆದ್ಯತೆ ಮೇರೆಗೆ ಸಿಸಿಟಿವಿ ಅಳವಡಿಸಲಾಗುತ್ತದೆ ಎಂದರು. ಎಲ್ಲಾ ಶಾಲೆಗಳಲ್ಲೂ ಕ್ಯಾಮರಾ ಅಳವಡಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.

ಹೊಸ ತಾಲೂಕು ಘೋಷಣೆ ಶೀಘ್ರ : ಹೊಸ ತಾಲೂಕುಗಳನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮೇಲ್ಮನೆಯಲ್ಲಿ ಭರವಸೆ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ಉತ್ತರ ನೀಡಿದ ಸಚಿವರು, ಹೊಸ ತಾಲೂಕುಗಳ ಘೋಷಣೆಯನ್ನು ಸರ್ಕಾರ ಕೈ ಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಚಿವರ ವಿರುದ್ಧ ಸ್ಪೀಕರ್ ಗರಂ : ಜಿಲ್ಲಾ ಪಂಚಾಯಿತಿ ಅನುದಾನ ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಸ್ಪೀಕರ್ ಕಾನೂನು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಶೃಂಗೇರಿ ಶಾಸಕ ಜೀವರಾಜ್ ಅಧಿಕಾರಿಗಳ ವಿರುದ್ಧದ ಆರೋಪ ಸಾಬೀತಾಗಿದ್ದು, ಈ ಬಗ್ಗೆ 6 ತಿಂಗಳ ಹಿಂದೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ, ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಉತ್ತರಿಸುತ್ತಿದ್ದಾಗ ಮಧ್ಯಪ್ರದೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಪಾರದರ್ಶಕ ಆಡಳಿತ ನಡೆಸುತ್ತೇವೆ ಎಂದು ಹೇಳುತ್ತೀರಿ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಸೂಚನೆ ನೀಡಿದರು.

ಜಮೀನು ಕೊಟ್ಟರೆ ಉದ್ಯಮ ಆರಂಭ : ಉತ್ತರ ಕರ್ನಾಟಕ ಭಾಗದಲ್ಲಿ ಯಾರಾದರೂ ಭೂಮಿ ನೀಡಿದರೆ ಜವಳಿ ಉದ್ಯಮ ಸ್ಥಾಪಿಸಲು ಸಿದ್ಧ ಎಂದು ಸಚಿವ ಬಾಬುರಾವ್ ಚಿಂಚನಸೂರ್ ವಿಧಾನಪರಿಷತ್ತಿನಲ್ಲಿ ತಿಳಿಸಿದರು. ಡಾ.ಜಯಮಾಲಾ ರಾಮಚಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರ್ಕಾರ ಜವಳಿ ನೀತಿ ರೂಪಿಸಿ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಿಗೆ ವಿಸ್ತರಿಸಬೇಕೆಂಬ ಉದ್ದೇಶ ಹೊಂದಿದ್ದು, ಬೆಂಗಳೂರಿನಲ್ಲಿ ಕೇಂದ್ರಿಕೃತವಾಗಿರುವ ಗಾರ್ಮೆಂಟ್ಸ್ ಉದ್ಯಮವನ್ನು ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಸ್ಥಾಪನೆಗೆ ಯೋಜನೆ ರೂಪಿಸಿದೆ. ಭೂಮಿ ಸಮಸ್ಯೆಯಿಂದಾಗಿ ಇದು ಜಾರಿಗೆ ಬರುತ್ತಿಲ್ಲ ಎಂದರು.

ಬೆಂಗಳೂರು ವಿವಿ : ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿ, ಕೋಲಾರ ಕೇಂದ್ರಿತವಾಗಿ ಪ್ರತ್ಯೇಕ ವಿವಿ ಸ್ಥಾಪಿಸುವ ಚಿಂತನೆಯಿದ್ದು, ಈ ಕುರಿತು ಸಂಪುಟದಲ್ಲಿ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ ಶಾಸಕ ರಮೇಶ್ ಕುಮಾರ್ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
10 days Karnataka Assembly winter session in Belagavi. Day Two Wednesday, December 10 highlights. What happened in the Assembly today?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more