ಸಲ್ಲೇಖನ ವ್ರತದೊಂದಿಗೆ ಇಹಲೋಕ ತ್ಯಜಿಸಿದ ಜಂಗಲವಾಲೆ ಬಾಬಾ
ಚಿಕ್ಕೋಡಿ, ಅಕ್ಟೋಬರ್ 19: ಜಂಗಲವಾಲೆ ಬಾಬಾ ಎಂದೇ ಖ್ಯಾತಿಯಾಗಿದ್ದ ಜೈನಮುನಿ ಚಿನ್ಮಯಸಾಗರ ಮಹಾರಾಜರು ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಕಳೆದ 7 ದಿನಗಳಿಂದ ಯಮ ಸಲ್ಲೇಖನ ವ್ರತ ಕೈಗೊಂಡಿದ್ದ ಮುನಿಗಳು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ಚಿನ್ಮಯಸಾಗರ ಮಹಾರಾಜರು ಜೈನ ಧರ್ಮದ ಅನುಸಾರ ಶರೀರ ತ್ಯಾಗದ ತೀರ್ಮಾನಕ್ಕೆ ಬಂದಿದ್ದು, ಸೆಪ್ಟೆಂಬರ್ 19ರಿಂದ ಅಕ್ಟೋಬರ್ 12ರವರೆಗೆ ಊಟ ತ್ಯಜಿಸಿ ನೀರು ಮಾತ್ರ ಸೇವನೆ ಮಾಡಿದ್ದರು. ಬಳಿಕ ಅಕ್ಟೋಬರ್ 12 ರಿಂದ 18ರವರೆಗೆ ನೀರು ತ್ಯಜಿಸಿ ಯಮ ಸಲ್ಲೇಖನ ವ್ರತಕ್ಕೆ ಕುಳಿತಿದ್ದರು.
"ಮೋಕ್ಷಕ್ಕಾಗಿ ಶರೀರ ತ್ಯಾಗ ಮಾಡಲು ಈ ತೀರ್ಮಾನ ಕೈಗೊಂಡಿದ್ದೇನೆ. ದೇಹ ಸ್ಥಿತಿಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇನ್ನು ಮುಂದೆ ನೀರನ್ನೂ ಸೇವಿಸದೇ ವ್ರತ ಆಚರಣೆ ಮಾಡುತ್ತೇನೆ" ಎಂದು ಬಾಬಾ ಭಕ್ತರಿಗೆ ತಿಳಿಸಿದ್ದರು. ಮುನಿಗಳ ದರ್ಶನ ಪಡೆಯಲು ನೂರಾರು ಭಕ್ತರು ಆಗಮಿಸಿದ್ದರು.

ರಾಷ್ಟ್ರಸಂತ ಎಂದೇ ಖ್ಯಾತರಾಗಿರುವ ಚಿನ್ಮಯಸಾಗರ ಮುನಿಗಳು ಮೂರು ದಶಕಗಳಿಂದ ದೇಶಾದ್ಯಂತ ವಿಹರಿಸಿ ಸಾವಿರಾರು ಜನರನ್ನು ದುಶ್ಚಟಗಳಿಂದ ಮುಕ್ತಗೊಳಿಸಿದ್ದರು. ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಜನಿಸಿದ ಚಿನ್ಮಯಸಾಗರ ಮುನಿಗಳು ಜೈನ ಧರ್ಮದ ಅಹಿಂಸಾ ತತ್ವಗಳಿಗೆ ಆಕರ್ಷಿತರಾಗಿ 1988ರ ಮಾರ್ಚ್ 31ರಂದು ಆಚಾರ್ಯ ವಿದ್ಯಾಸಾಗರ ಅವರಿಂದ ಮುನಿದೀಕ್ಷೆ ಪಡೆದಿದ್ದರು.












Click it and Unblock the Notifications