Jagadish Shettar: ಬೆಳಗಾವಿ ಕ್ಷೇತ್ರದಿಂದ ನಂಗೆ ಬಿಜೆಪಿ ಟಿಕೆಟ್ ಫಿಕ್ಸ್..
ಹುಬ್ಬಳ್ಳಿ, ಮಾರ್ಚ್, 20: ರಾಜ್ಯಾದ್ಯಂತ ಲೋಕಸಭೆ ಚುನಾವಣೆಗೆ ಟಿಕೆಟ್‌ಗಾಗಿ ಭಾರೀ ಪೈಪೋಟಿಗಳು ನಡೆಯುತ್ತಿವೆ. ಇನ್ನು ಧಾರವಾಡದಿಂದ ಬಿಜೆಪಿ ಟಿಕೆಟ್ ಸಿಗುತ್ತದೆಂದು ಶೆಟ್ಟರ್ ಭಾರೀ ಆಸೆ ಹೊಂದಿದ್ದರು. ಆದರೆ ಈ ಕ್ಷೇತ್ರದ ಟಿಕೆಟ್ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಒಲಿದಿದ್ದು, ಇದರಿಂದ ನಿರಾಸೆಗೊಂಡಿರುವ ಶೆಟ್ಟರ್ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾದರೆ ಈ ಬಗ್ಗೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಳಗಾವಿಯಿಂದ ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ, ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದರು.

ಇವತ್ತು ಅಥವಾ ನಾಳೆ ಅಭ್ಯರ್ಥಿ ಫೈನಲ್ ಮಾಡುತ್ತಾರೆ. ಳಗಾವಿಯಿಂದ ನನಗೆ ಟಿಕೆಟ್ ಸಿಗುತ್ತದೆ, ಅಲ್ಲಿಂದ ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ. ಈಗಾಗಲೇ ಬೆಳಗಾವಿಯ ಪ್ರಮುಖರ ಜೊತೆ ಎರಡ್ಮೂರು ಬಾರಿ ಮಾತಾಡಿದ್ದೇನೆ. ಎಲ್ಲರೂ ಸೇರಿ ಚುನಾವಣೆ ಮಾಡೋಣ ಎಂದು ಹೇಳಿದ್ದಾರೆ. ನಾಳೆಯವರೆಗೆ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.
ಅಧಿಕೃತವಾಗಿ ಟಿಕೆಟ್ ಘೋಷಣೆಯ ನಂತರ ಬೆಳಗಾವಿಗೆ ಬರುವಂತೆ ಅಲ್ಲಿನ ಮುಖಂಡರು ಹೇಳಿದ್ದಾರೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಬೆಳಗಾವಿಗೆ ಹೋಗಿ ಪ್ರಚಾರ ಪ್ರಾರಂಭಿಸುತ್ತೇನೆ. ಇನ್ನು ಮುಖಂಡರಾದ ಅಭಯ್ ಪಾಟೀಲ್, ಕೋರೆ, ಬೆನಕೆ, ಕಡಾಡಿ ಜೊತೆ ಮಾತಾಡಿದ್ದೇನೆ. ಅಭಯ್ ಪಾಟೀಲ್ ಜೊತೆ ನಿನ್ನೆ ಸಂಜೆ ಮಾತಾಡಿದ್ದೇನೆ. ಎಲ್ಲರೂ ಸೇರಿ ಚುನಾವಣೆ ಮಾಡೋಣ ಅಂದಿದ್ದಾರೆ. ಮತ್ತೊಮ್ಮೆ ಮೋದಿಯವರು ಪ್ರಧಾನಿ ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ತಮ್ಮ ಕೆಲಸಕ್ಕೆ ದೆಹಲಿಗೆ ಹೋಗಿರಬಹುದು. ನನಗೆ ಟಿಕೆಟ್ ತಪ್ಪಿಸುವ ಕುತಂತ್ರ, ಷಡ್ಯಂತ್ರ ನಡೆದಿದೆ ಎಂದು ನಾನು ಒಪ್ಪುವುದಿಲ್ಲ. ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ, ಎನ್‌ಡಿಎ 400 ಪ್ಲಸ್ ಗೆಲ್ಲುವ ವಾತಾವರಣವಿದೆ ಎಂದರು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಾರೀ ಸ್ಪರ್ಧೆ ಇದೆ, ಹೀಗಾಗಿ ಪಕ್ಷದಲ್ಲು ಸ್ವಲ್ಪ ಅಸಮಾಧಾನ ಸಹಜ. ಎಲ್ಲಾ ನಿರ್ಧಾರಗಳನ್ನು ನವದೆಹಲಿಯಲ್ಲಿ ನಮ್ಮ ನಾಯಕರು ಮಾಡುತ್ತಾರೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಇಂತಹವರ ಕೈವಾಡವಿದೆ ಅಂತಾ ಹೇಳೋದು ತಪ್ಪು. ಬಿ.ಎಲ್.ಸಂತೋಷ್ ವಿಚಾರದಲ್ಲಿ ನಾನು ಏನೂ ಕಮೆಂಟ್ ಮಾಡುವುದಿಲ್ಲ. ಬಿಜೆಪಿಗೆ ಬಂದ ಮೇಲೆ ಅವರ ಜೊತೆ ಒಮ್ಮೆಯೂ ಮಾತುಕತೆ ಆಗಿಲ್ಲ ಎಂದರು.












Click it and Unblock the Notifications