ಅಲ್ಪಸಂಖ್ಯಾತರಿಗೆ ಕೊಡೋಕೆ ಕೋಟಿ ಕೋಟಿ ಹಣ ಇದೆ, ಆದ್ರೆ ರೈತರಿಗೆ ಕೊಡೊಕೋ ಇಲ್ಲ: R.ಅಶೋಕ್ ಹೀಗೆ ಹೇಳಿದ್ದು ಯಾರಿಗೆ & ಯಾಕೆ?
ಬೆಳಗಾವಿ, ಡಿಸೆಂಬರ್, 07: ರಾಜ್ಯ ಸರ್ಕಾರದ ಬಳಿ ರೈತರಿಗೆ ಕೊಡೋಕೆ ಹಣ ಇಲ್ಲ, ಆದರೆ ಅಲ್ಪಸಂಖ್ಯಾತರಿಗೆ ಮಾತ್ರ ಕೋಟಿ ಕೋಟಿ ಹಣ ಕೊಡುತ್ತೇವೆ ಅಂತಾ ಹೇಳುತ್ತಾರೆ. ಇದೇನಾ ನ್ಯಾಯ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಖಾಸಗಿ ಹೊಟೆಲ್‌ನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲವಿದೆ, ಆದರೆ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಒಣಮೇವು, ಹಸಿ ಮೇವಿನ ಅಭಾವ ಉಂಟಾಗಿದ್ದು, ರೈತರು ಆತಂಕದಲ್ಲಿ ಇದ್ದಾರೆ. ರಾಜ್ಯದ ಯಾವ ಭಾಗದಲ್ಲಿಯೂ ಗೋಶಾಲೆ ತೆರೆದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ ಆಗಿದೆ ಎಂದ ಅವರು, ಮೌಲ್ವಿಗಳಿಗೆ ದುಡ್ಡು ಕೊಡೋಕೆ ಜೇಬಿನಲ್ಲಿ ಹತ್ತು ಸಾವಿರ ಕೋಟಿ ಇಟ್ಟುಕೊಂಡು ಅಡ್ಡಾಡುತ್ತಾರೆ. ಇದ್ಯಾವ ನ್ಯಾಯ ಎಂದು ಅವರು ಪ್ರಶ್ನೆ ಮಾಡಿದರು. ಇನ್ನು ಕಾಂಗ್ರೆಸ್ ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ದಲಿತರ ಹಣ ದುರ್ಬಳಕೆ ಆಗಬಾರದು ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಸರ್ಕಾರ ರಾಜ್ಯದ ಜನತೆ ಮೇಲೆ ತೆರಿಗೆ ಹಾಕುತ್ತಿದ್ದೀರಿ. ರಾಜ್ಯದಲ್ಲಿ ಬರಗಾಲ ಉಂಟಾಗಿದೆ. ಇದರ ಬಗ್ಗೆ ಗಮನಹರಿಸಲಿ. ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲದೇ ಪಾಪರ್ ಆಗಿದ್ದಾರೆ. ಜನರ ಮೇಲೆ ವಿಪರಿತ ತೆರಿಗೆ ಹಾಕಿ ಹಣ ವಸೂಲಿ ಮಾಡೋಕೆ ಹೋಗುತ್ತಿದ್ದಾರೆ. ಚುನಾವಣೆಗೂ ಮುಂಚೆ ಗ್ಯಾರಂಟಿಗಳನ್ನು ಕೊಟ್ಟರು. ಈಗ ಏನಾಯಿತು ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಕ್ಷಿ ಸಮೇತ ಆರೋಪ ಮಾಡಲಿ
ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದ ಮೌಲ್ವಿಗಳು ಐಸಿಸ್ ಉಗ್ರರ ಜೊತೆ ನಂಟು ಹೊಂದಿದ್ದರು ಎಂಬ ಯತ್ನಾಳ್ ಹೇಳಿಕೆಗೆ ಉತ್ತರಿಸಿದ ಜಗದೀಶ ಶೆಟ್ಟರ್, ಸಾಕ್ಷಿ ಸಮೇತ ಆರೋಪ ಮಾಡಿದರೆ ಅದಕ್ಕೊಂದು ಬೆಲೆ ಮತ್ತು ವಿಶ್ವಾಸಾರ್ಹತೆ ಬರುತ್ತದೆ. ಹಾಗಾಗಿ, ಕೇಂದ್ರದ ಗೃಹ ಸಚಿವರು ಇದರಲ್ಲಿ ಏನು ಕ್ರಮ ತೆಗೆದುಕೊಳ್ಳುತ್ತಾರೆ ತೆಗೆದುಕೊಳ್ಳಲಿ ಎಂದರು.
ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ಭಾಗದ ಹಲವಾರು ಶಾಸಕರು ಉತ್ತರಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು. ಚರ್ಚೆಗೆ ಸಮಯ ನಿಗದಿ ಪಡಿಸುವಂತೆ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಸಚಿವರ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಮುಖ್ಯಮಂತ್ರಿಗಳು ಮತ್ತು ಪ್ರಮುಖ ಸಚಿವರು ಒಪ್ಪಿಕೊಂಡಿದ್ದಾರೆ. ಸೋಮವಾರದಿಂದ ಎರಡ್ಮೂರು ದಿವಸ ಉತ್ತರಕರ್ನಾಟಕ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚಿಸಲು ಸಮಯ ನಿಗದಿ ಪಡಿಸಲು ಸರ್ಕಾರದಿಂದ ಭರವಸೆ ಸಿಕ್ಕಿದೆ. ಇದಕ್ಕೆ ಪ್ರತಿಪಕ್ಷಗಳು ಸಹಕಾರ ಕೊಟ್ಟರೆ ಒಳ್ಳೆಯ ಫಲಪ್ರದ ಚರ್ಚೆ ಆಗಲಿದೆ ಎಂದರು.
ಬರ ಪರಿಹಾರ 2 ಸಾವಿರ ರೂಪಾಯಿ ಸಾಕಾಗುವುದಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಯಿಸಿ, ಇದು ಮೊದಲನೇ ಕಂತು ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. 18 ಸಾವಿರ ಕೋಟಿ ರೂಪಾಯಿ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡು ಮೂರ್ನಾಲ್ಕು ತಿಂಗಳಾಗಿದೆ. ಆದರೂ ಈವರೆಗೂ ಕೇಂದ್ರದಿಂದ ಒಂದು ಪೈಸೆಯೂ ಬಂದಿಲ್ಲ. ಹಾಗಾಗಿ, ರೈತರು ಸಂಕಷ್ಟದಲ್ಲಿರುವ ಹಿನ್ನೆಲೆ ಎಲ್ಲಾ ರೈತರಿಗೂ ಮೊದಲನೇ ಕಂತಿನ 2 ಸಾವಿರ ರೂಪಾಯಿ ನೀಡಿದ್ದಾರೆ. ಮುಂದೆ ಕೇಂದ್ರದ ನಿಲುವು ನೋಡಿಕೊಂಡು ಬೆಳೆ ನಷ್ಟಕ್ಕೆ ಹೆಚ್ಚಿನ ಪರಿಹಾರ ನೀಡಲಾಗುತ್ತದೆ ಎಂದರು.
ವಿಧಾನಸಭೆಯಲ್ಲಿ ಸಾವರ್ಕರ್ ಫೋಟೊ ತೆಗೆದು ನೆಹರು ಫೋಟೋ ಹಾಕುತ್ತಾರಾ ಎಂಬ ಪ್ರಶ್ನೆಗೆ ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಅಲ್ಲದೇ ನನ್ನ ಗಮನಕ್ಕೂ ಆ ವಿಚಾರ ಬಂದಿಲ್ಲ ಎಂದರು. ಇನ್ನು ಎಸ್‌ಪಿಸಿ, ಟಿಎಸ್‌ಪಿ ಹಣ ದುರ್ಬಳಕೆ ವಿಚಾರಕ್ಕೆ ಪ್ರತಿಕ್ರಯಿಸಿ, ಅಧಿವೇಶನ ನಡೆಯುತ್ತಿದೆಯಲ್ಲಾ..? ಅಲ್ಲಿ ಆ ಬಗ್ಗೆ ಅವರು ಚರ್ಚೆ ಮಾಡಲಿ. ಯಾರು ಒಬ್ಬರೂ ಇಲ್ಲಿಯವರೆಗೂ ಚರ್ಚೆ ಮಾಡಿಯೇ ಇಲ್ಲ ಎಂದರು.












Click it and Unblock the Notifications