ಪುತ್ಥಳಿ ತೆರವು ವಿವಾದ; ಬೆಳಗಾವಿಯಲ್ಲಿ ರಾಯಣ್ಣನ ಅಭಿಮಾನಿಗಳ ಬೃಹತ್ ಪ್ರತಿಭಟನೆ
ಬೆಳಗಾವಿ, ಆಗಸ್ಟ್ 27: ಬೆಳಗಾವಿ ಹೊರವಲಯದ ಪೀರನವಾಡಿ ಗ್ರಾಮದ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರಾಯಣ್ಣನ ಅಭಿಮಾನಿಗಳು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ಗಮನ ಸೆಳೆದರು.
ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಮರು ಪ್ರತಿಷ್ಠಾಪನೆ ಮಾಡುವಂತೆ ಇಂದು ರಾಜ್ಯದ ನಾನಾ ಜಿಲ್ಲೆಗಳಿಂದ ರಾಯಣ್ಣನ ಅಭಿಮಾನಿಗಳು ಬೆಳಗಾವಿಯ ಸುವರ್ಣ ವಿಧಾನ ಸೌಧದಿಂದ ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಯಣ್ಣ ಅಭಿಮಾನಿ ಸಂಘಟನೆಗಳ ಕಾರ್ಯಕರ್ತರು ಹಾಗೂ ಕನ್ನಡ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿ ಸುವರ್ಣ ಸೌಧದಿಂದ ಯಡಿಯೂರಪ್ಪ ಮಾರ್ಗದವರೆಗೆ ಕಾಲ್ನಡಿಗೆ ಮೂಲಕ ಆಗಮಿಸಿದರು. ಡಿಸಿ ಕಚೇರಿಗೆ ಹೊರಟಿದ್ದ ಪ್ರತಿಭಟನಾ ನಿರತರನ್ನು ಪೊಲೀಸರು ತಡೆದರು. ಬಳಿಕ ಸ್ಥಳಕ್ಕೆ ಡಿಸಿ ಎಂಜಿ ಹಿರೇಮಠ ಹಾಗೂ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಆ. 29ಕ್ಕೆ ವಿವಾದ ಇತ್ಯರ್ಥ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.

ಮತ್ತೊಂದೆಡೆ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಸಂಜೆ 6ಕ್ಕೆ ಸಭೆಯನ್ನು ಆಯೋಜಿಸಲಾಗಿದೆ. ಜಿಲ್ಲೆಯ ಹಾಲುಮತ ಸಮಾಜದ ಮುಖಂಡರ ಜೊತೆ ಸಚಿವರು ಸಭೆ ನಡೆಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಹಾಲುಮತ ಮಹಾಸಭಾದ ಮುಖಂಡರು ಸೇರಿದಂತೆ ನಾನಾ ಸಂಘಟನೆಗಳ ಪ್ರಮುಖರು ಸಭೆ ಭಾಗಿಯಾಗಲಿದ್ದಾರೆ.












Click it and Unblock the Notifications