ಗಣೇಶ ಚತುರ್ಥಿ 2023; ಗಣೇಶ ಮಂಡಳಗಳಿಗೆ ಉಚಿತ ವಿದ್ಯುತ್?
ಬೆಳಗಾವಿ, ಆಗಸ್ಟ್ 08; "ಬೆಳಗಾವಿಯಲ್ಲಿ ಗಣೇಶ ಉತ್ಸವ ಮಂಡಳಿಗಳಿಗೆ ಯಾವುದೇ ರೀತಿಯ ವಿಳಂಬವಾಗದಂತೆ ಏಕಗವಾಕ್ಷಿ ಯೋಜನೆ ಮೂಲಕ ಕೂಡಲೇ ಪರವಾನಿಗೆ ನೀಡಬೇಕು" ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಸೆಪ್ಟೆಂಬರ್‌ನಲ್ಲಿ ನಡೆಯುವ ಗಣೇಶೋತ್ಸವ 2023ರ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸಚಿವರು ಪೂರ್ವಭಾವಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ಬೆಳಗಾವಿ ಮೇಯರ್ ಶೋಭಾ ಸೋಮನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ಶಾಸಕರಾದ ಆಸೀಫ್ (ರಾಜು) ಸೇಠ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಪೊಲೀಸ್ ಆಯುಕ್ತರಾದ ಎಸ್. ಎನ್. ಸಿದ್ದರಾಮಪ್ಪ ಮುಂತಾದವರು ಪಾಲ್ಗೊಂಡಿದ್ದರು.

ಸಚಿವರು ಮಾತನಾಡಿ, 'ಬೆಳಗಾವಿ ನಗರದಲ್ಲಿ ಅತ್ಯಂತ ಸಂಭ್ರಮದಿಂದ ಗಣೇಶೋತ್ಸವ ಆಚರಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ರೀತಿಯ ವಿಳಂಬವಾಗದಂತೆ ಏಕಗವಾಕ್ಷಿ ಯೋಜನೆ ಮೂಲಕ ಕೂಡಲೇ ಪರವಾನಿಗೆ ನೀಡಬೇಕು" ಎಂದರು.
"ಈ ಬಾರಿಯ ಗಣೇಶೋತ್ಸವದಲ್ಲಿ ಮಂಡಳಿಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸುವ ಕುರಿತು ಸರಕಾರದ ಮಟ್ಟದಲ್ಲಿ ಗಮನ ಸೆಳೆಯಲಾಗುವುದು. ಏನಾದರೂ ಸಮಸ್ಯೆಗಳಿದ್ದರೆ ಅಧಿಕಾರಿಗಳ ಗಮನಕ್ಕೆ ತರಬೇಕು. ಬಗೆಹರಿಯದಿದ್ದರೆ ತಮ್ಮ ಗಮನಕ್ಕೆ ತರಬೇಕು" ಎಂದು ಸಚಿವರು ಬೆಳಗಾವಿ ನಗರದ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳಿಗೆ ತಿಳಿಸಿದರು.
ಏಕಗವಾಕ್ಷಿ ವ್ಯವಸ್ಥೆ; ಸಭೆಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, "ಗಣೇಶೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಪಾಲಿಕೆಯಲ್ಲಿ 1 ಕೋಟಿ ರೂಪಾಯಿ ಅನುದಾನ ಇಡಲಾಗಿದೆ. ಮಂಡಳಿಗಳಿಗೆ ಪರವಾನಿಗೆ ನೀಡಲು ಅನುಕೂಲವಾಗುವಂತೆ 8 ಪೊಲೀಸ್ ಠಾಣೆಗಳಲ್ಲಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುತ್ತಿದೆ. ಮೆರವಣಿಗೆ ವೀಕ್ಷಿಸಲು ಅನುಕೂಲವಾಗುವಂತೆ ದೊಡ್ಡ ಗ್ಯಾಲರಿ ನಿರ್ಮಿಸಲಾಗುವುದು. ಮೆರವಣಿಗೆ ಸಾಗುವ ಮಾರ್ಗವನ್ನು ಪರಿಶೀಲಿಸಿ ಸುಗಮ ಮೆರವಣಿಗೆಗೆ ಅಗತ್ಯ ವ್ಯವಸ್ಥೆ ಮತ್ತು ಹೆಚ್ಚುವರಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು" ಎಂದರು.
ಸಭೆಯಲ್ಲಿ ಮಾತನಾಡಿದ ಗಣೇಶೋತ್ಸವ ಮಹಾಮಂಡಳದ ಪದಾಧಿಕಾರಿ ವಿಕಾಸ್ ಕಲಘಟಗಿ, "ನಗರದಲ್ಲಿ 378 ಗಣೇಶೋತ್ಸವ ಮಂಡಳಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿವೆ. ಆದ್ದರಿಂದ ವಿದ್ಯುತ್ ಬಿಲ್‌ನಲ್ಲಿ ರಿಯಾಯಿತಿ ನೀಡಬೇಕು. ಸಾಧ್ಯವಾದರೆ ಸಂಪೂರ್ಣ ಬಿಲ್ ಮನ್ನಾ ಮಾಡಲು ಸರ್ಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು" ಎಂದು ಮನವಿ ಮಾಡಿದರು.
ಸಚಿವರು ಮಾತನಾಡಿ, "ಗಣೇಶೋತ್ಸವ ಮಂಡಳಿಯವರು ಕೂಡ ನಿಗದಿತ ಅವಧಿಯಲ್ಲಿ ಮೆರವಣಿಗೆ ಮುಗಿಸುವ ಮೂಲಕ ಆದಷ್ಟು ಬೇಗನೇ ಮೂರ್ತಿ ವಿಸರ್ಜನೆಗೆ ಸಹಕರಿಸಬೇಕು" ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಾತನಾಡಿ, "ಪ್ರತಿವರ್ಷದಂತೆ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೊಂಡಗಳ ಸ್ವಚ್ಛತೆ, ರಸ್ತೆ ದುರಸ್ತಿ, ವಿದ್ಯುತ್ ತಂತಿಗಳ ತೆರವು, ಪೊಲೀಸ್ ಭದ್ರತೆ ಮತ್ತಿತರ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಹೇಳಿದರು.
"ಗಣೇಶೋತ್ಸವವನ್ನು ಪ್ರತಿವರ್ಷದಂತೆ ಸಂಭ್ರಮದಿಂದ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು" ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು, ಉಚಿತ ವಿದ್ಯುತ್ ಒದಗಿಸುವುದರ ಜತೆಗೆ ಪರವಾನಿಗೆ ವ್ಯವಸ್ಥೆಯನ್ನು ಸರಳೀಕರಣ ಮಾಡಬೇಕು. ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿ ಗಣೇಶೋತ್ಸವ ಮೆರವಣಿಗೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಗಣೇಶ ವಿಸರ್ಜನೆಗೆ ಹೆಚ್ಚುವರಿ ಟ್ಯಾಂಕ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಬಾರಿಯ ಗಣೇಶ ಚತುರ್ಥಿ ಸೆಪ್ಟೆಂಬರ್ 19ರ ಮಂಗಳವಾರ ನಡೆಯಲಿದೆ. ಈಗಾಗಲೇ ಹಬ್ಬದ ತಯಾರಿ ಸಹ ಜೋರಾಗಿದೆ. ಭಾರತೀಯ ರೈಲ್ವೆ ಸಹ ಗಣೇಶ ಹಬ್ಬದಲ್ಲಿ ಊರಿಗೆ ಹೋಗುವ ಪ್ರಯಾಣಿಕರಿಗಾಗಿಯೇ ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ.












Click it and Unblock the Notifications