ಬೆಳಗಾವಿ : ಮಾಜಿ ಶಾಸಕ ಸಂಭಾಜಿ ಪಾಟೀಲ್ ವಿಧಿವಶ
ಬೆಳಗಾವಿ, ಮೇ 17 : ಮಾಜಿ ಶಾಸಕ, ಎಂಇಎಸ್ ನಾಯಕ ಸಂಭಾಜಿ ಪಾಟೀಲ್ ವಿಧಿವಶರಾಗಿದ್ದಾರೆ. ಮೂರು ಬಾರಿ ಬೆಳಗಾವಿ ಮೇಯರ್ ಆಗಿದ್ದ ಅವರು, ಒಂದು ಬಾರಿ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸಂಭಾಜಿ ಪಾಟೀಲ್ (66) ಅವರು ಶುಕ್ರವಾರ ರಾತ್ರಿ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
2013ರ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಎಂಇಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಅವರು ಜಯಗಳಿಸಿದ್ದರು. ಆದರೆ, 2018ರ ಚುನಾವಣೆಯಲ್ಲಿ ಬೆಳಗಾವಿ ಉತ್ತರದಿಂದ ಕಣಕ್ಕಿಳಿದು ಕೇವಲ 249 ಮತಗಳನ್ನು ಪಡೆದಿದ್ದರು.

ಮೂರು ಬಾರಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ, ಒಂದು ಬಾರಿ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಬೆಳಗಾವಿಯಲ್ಲಿ ಕರ್ನಾಟಕ ವಿಧಾನಸಭೆ ಅಧಿವೇಶನ ನಡೆಯುವಾಗ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಮಹಾಮೇಳವ ಆಯೋಜನೆ ಮಾಡುತ್ತಿದ್ದರು.
ಪುತ್ರನ ಸಾವು : ಸಂಭಾಜಿ ಪಾಟೀಲ್ ಪುತ್ರ ಸಾಗರ್ (28) ರೈಲಿನಿಂದ ಬಿದ್ದು 2018ರ ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದರು. ಡಿಸೆಂಬರ್ 3ರಂದು ಬೆಂಗಳೂರಿನಿಂದ ಬೆಳಗಾವಿಗೆ ವಾಪಸ್ ಆಗುವಾಗ ಶ್ರೀರಾಮಪುರ ಬಳಿ ಶೌಚಕ್ಕೆ ತೆರಳಿದ್ದರು.
ವಾಪಸ್ ಬಂದು ರೈಲು ಹತ್ತುವಾಗ ಕಾಲುಜಾರಿ ಬಿದ್ದು ಮೃತಪಟ್ಟಿದ್ದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣದ ವಿಚಾರಣೆಗಾಗಿ ಅವರು ಬೆಂಗಳೂರಿಗೆ ಬಂದಿದ್ದರು.












Click it and Unblock the Notifications