'ಕೈ' ಕಾರ್ಯಕರ್ತರ ಮೇಲೆ ಬಿಜೆಪಿ ಮಾಜಿ ಶಾಸಕನ ಬೆಂಬಲಿಗರಿಂದ ಗೂಂಡಾಗಿರಿ
ಬೆಳಗಾವಿ, ಮೇ 11: ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಮಾಜಿ ಶಾಸಕನ ಬೆಂಬಲಿಗರು ಥಳಿಸಿರುವ ಘಟನೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಜುನೆಯಲ್ಲಿ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ, ಎಂಎಲ್ ಸಿ ಎಂ.ಡಿ. ಲಕ್ಷ್ಮಿ ನಾರಾಯಣ ಪರವಾಗಿ ಪ್ರಚಾರಕ್ಕೆ ತೆರಳಿದ್ದಾಗ ಕಾಂಗ್ರೆಸ್ ಕಾರ್ಯಕರ್ತ ರಾಜು ಗುಂಜಿಕರಗೆ ಬಿಜೆಪಿ ಕಾರ್ಯಕರ್ತರು ಥಳಿಸಿದ್ದಾರೆ.
ಮಾಜಿ ಶಾಸಕ ಅಭಯ್ ಪಾಟೀಲ್ ಬೆಂಬಲಿಗರ ಗೂಂಡಾಗಿರಿ ಖಂಡಿಸಿ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲ, ಅಭಯ್ ಪಾಟೀಲ್ ಬೆಂಬಲಿಗರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಲು ಮುಂದಾಗಿದ್ದಾರೆ.

2013ರ ಚುನಾವಣೆಯಲ್ಲಿ ಎಂಇಎಸ್ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಭಾಜಿ ಪಾಟೀಲ್ ಇಲ್ಲಿ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಸಂಭಾಜಿ ಪಾಟೀಲ್ 54,426 ಮತಗಳನ್ನು ಪಡೆದರೆ ಬಿಜೆಪಿಯ ಅಭಯ್ ಪಾಟೀಲ್ 47,894 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ನ ಅನಿಲ್ ಎಂ ಪೋತೆದಾರ್ 20,536 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.

ಈ ಬಾರಿ ಬಿಜೆಪಿಯಿಂದ ಕಳೆದ ಬಾರಿ ಸೋತಿದ್ದ ಎರಡು ಬಾರಿಯ ಶಾಸಕ ಅಭಯ್ ಪಾಟೀಲ್ ಕಣದಲ್ಲಿದ್ದಾರೆ. ಅವರು ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಹೊರಟಿದ್ದಾರೆ. ಕಾಂಗ್ರೆಸ್ ಅಳೆದೂ ತೂಗಿ, ನೇಕಾರ ಸಮುದಾಯದ ಎಂ.ಡಿ. ಲಕ್ಷ್ಮೀನಾರಾಯಣ ಅವರನ್ನು ಕಣಕ್ಕಿಳಿಸಿದೆ.
ಒಟ್ಟಿನಲ್ಲಿ ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿಗೆ ಗೆಲ್ಲುವ ಅವಕಾಶಗಳು ಹೆಚ್ಚಿವೆ, ಆದರೆ ಕಿರಣ್ ಸಾಯನಾಕ್ ಮತ್ತು ಎಂ.ಡಿ ಲಕ್ಷ್ಮೀನಾರಾಯಣ ಗೆದ್ದರೂ ಅಚ್ಚರಿ ಇಲ್ಲ.












Click it and Unblock the Notifications