ಬೆಳಗಾವಿ ಎಸಿ ಕಚೇರಿ ಕಂಪ್ಯೂಟರ್, ಪ್ರಿಂಟರ್ ಹೊತ್ತೊಯ್ದ ರೈತರು: ಕಾರಣ ಇಲ್ಲಿದೆ
ಬೆಳಗಾವಿ, ಆಗಸ್ಟ್ 22: ಜಮೀನು ಪಡೆದು ಪರಿಹಾರ ನೀಡಲು ವರ್ಷಗಟ್ಟಲೆ ವಿಳಂಬ ಮಾಡಿದ ಕಾರಣ ರೈತರು ಜಿಲ್ಲಾಧಿಕಾರಿ ಕಚೇರಿಯನ್ನು ಜಪ್ತಿ ಮಾಡಿ ಪ್ರಿಂಟರ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತೊಯ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನ್ಯಾಯಾಲಯದ ಆದೇಶದ ಮೇರೆಗೆ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಉಪವಿಭಾಗಧಿಕಾರಿ ಕಚೇರಿಯ ವಸ್ತುಗಳನ್ನು ರೈತರು ತೆಗೆದುಕೊಂಡು ಹೋಗಿದ್ದಾರೆ.
ಬೆಳಗಾವಿ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿಗೆ ಜಿಲ್ಲೆಯ ನೂರಾರು ರೈತರು ಜಮೀನುಗಳನ್ನು ನೀಡಿದ್ದರು. ಜಿಲ್ಲೆಯ ಅಭಿವೃದ್ಧಿಗೆ ಸ್ಪಂದಿಸಿದ ರೈತರು ಅಧಿಕಾರಿಗಳು ನಿಗದಿಪಡಿಸಿದ ಬೆಲೆಗೆ ಒಪ್ಪಿ ತಮ್ಮ ಜಮೀನುಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದರು. ಅದರಂತೆ ಕಳೆದ 2008ರಲ್ಲಿ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿ ನಡೆದಿದ್ದು, ರೈತರು ಒಂದಲ್ಲ..ಎರಡಲ್ಲ.. ಹತ್ತಲ್ಲ..ನೂರಲ್ಲ.. ಬರೋಬ್ಬರಿ 270 ಎಕರೆ ಜಮೀನುಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದರು.

ಈ ಸಮಯದಲ್ಲಿ ಪ್ರತಿ ಎಕರೆಗೆ ಜಿಲ್ಲಾಡಳಿತದಿಂದ ಕೇವಲ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಉತ್ತಮ ಜಮೀನುಗಳನ್ನೇ ನೀಡಿದ್ದ ರೈತರು ಹೆಚ್ಚಿನ ಪರಿಹಾರ ನೀಡುವಂತೆ ಕೋರಿ 2011ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಬೆಳಗಾವಿಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ ರೈತರು ದಾವೆ ಹೂಡಿದ್ದರು.
ರೈತರು ದಾಖಲಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರತಿ ಗುಂಟೆಗೆ ₹40 ಸಾವಿರದಂತೆ ಪರಿಹಾರ ನೀಡುವಂತೆ ಸುಮಾರು ಏಳು ವರ್ಷಗಳ ಬಳಿಕ ಅಂದರೆ 2018 ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದಿಂದ ಇಸಕಾಲಕ್ಕೆ ಪರಿಹಾರ ಸಿಗದೇ ಇದ್ದಾಗ ರೈತರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.
ರೈತರಿಗೆ ತಕ್ಷಣವೇ ನ್ಯಾಯಯುತ ಪರಿಹಾರ ನೀಡುವಂತೆ 2021ರಲ್ಲಿ ಮತ್ತೊಮ್ಮೆ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆಗಲೂ ಪರಿಹಾರ ನೀಡದಿದ್ದರಿಂದ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ವಸ್ತು ಜಪ್ತಿ ಮಾಡುವಂತೆ ಸ್ವತಃ ನ್ಯಾಯಾಲಯವೇ ಸೂಚನೆ ನೀಡಿತ್ತು. ಆದರೆ ನ್ಯಾಯಾಲಯ ಆದೇಶ ಹೊರಡಿಸಿ ಮೂರು ವರ್ಷ ಕಳೆದರೂ ರೈತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ.

2008ರಲ್ಲಿ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿಗೆ ಜಮೀನು ಕೊಟ್ಟ ಇನ್ನೂ 20 ರೈತರಿಗೆ 8 ಕೋಟಿ ಪರಿಹಾರ ಬಾಕಿ ಇದೆ. ಈ ಬಗ್ಗೆ ಮನವಿ ಮಾಡಿದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ ನ್ಯಾಯವಾದಿಗಳ ಸಮ್ಮುಖದಲ್ಲೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಉಪವಿಭಾಗಧಿಕಾರಿ ಕಚೇರಿಯ ವಸ್ತುಗಳನ್ನು ರೈತರು ಹೊತ್ತೊಯ್ದಿದ್ದಾರೆ. ಕಂಪ್ಯೂಟರ್, ಕುರ್ಚಿಗಳು, ಪ್ರಿಂಟರ್ ಸೇರಿದಂತೆ ವಿವಿಧ ವಸ್ತುಗಳನ್ನು ರೈತರು ಜಪ್ತಿ ಮಾಡಿದ್ದಾರೆ.












Click it and Unblock the Notifications