ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೀಟನಾಶಕ ಸೇವಿಸಿ ಬೆಳಗಾವಿಯಲ್ಲಿ ರೈತ ಆತ್ಮಹತ್ಯೆ

By Prasad
|
Google Oneindia Kannada News

ಬೆಳಗಾವಿ, ನ. 27 : ಕಬ್ಬಿಗೆ ಬೆಂಬಲ ಬೆಲೆ ಘೋಷಿಸಲು ಮತ್ತು ನಷ್ಟ ಹೊಂದಿದ ಹತ್ತಿ ಬೆಳೆಯುವ ರೈತರಿಗೆ ಪರಿಹಾರ ಒದಗಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬೆಳಗಾವಿ ಜಿಲ್ಲೆಯ ರೈತನೊಬ್ಬ ಸುವರ್ಣ ವಿಧಾನಸೌಧದೆದುರಿಗೇ ಕೀಟನಾಶಕ ಸೇವಿಸಿ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹತ್ತಿ ಬೆಳೆಗೆ ಸಿಂಪಡಿಸುವ ಕೀಟನಾಶಕ ಸೇವಿಸಿದ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕನವಾಡಿ ಗ್ರಾಮದ ವಿಠಲ ಅರಭಾವಿ (50) ಎಂಬಾತ ಸಾವಿಗೀಡಾಗಿದ್ದರಿಂದ ರೈತರ ಪ್ರತಿಭಟನೆಯ ನಡುವೆ ಸೂತಕದ ಛಾಯೆ ಮೂಡಿದೆ. ವಿಧಾನಸೌಧದ ಮುಂದೆಯೆ ಕೀಟನಾಶಕ ಸೇವಿಸಿದ್ದ ವಿಠಲನನ್ನು ಕೂಡಲೆ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವಿಗೀಡಾಗಿದ್ದಾನೆ. (ರೈತ ಆತ್ಮಹತ್ಯೆ : ಸರ್ಕಾರಕ್ಕೆ ಪ್ರತಿಪಕ್ಷಗಳ ಗುದ್ದು)

10 ಲಕ್ಷ ರು. ಪರಿಹಾರ : ಆತ್ಮಹತ್ಯೆ ಮಾಡಿಕೊಂಡಿರುವ ರೈತ ವಿಠಲ ಅರಭಾವಿ ಕುಟುಂಬಕ್ಕೆ ಕಾಂಗ್ರೆಸ್ ಸರಕಾರ 10 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿಬಂದ ಬಳಿಕ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, ರೈತ ಈ ರೀತಿ ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಸಂತಾಪ ವ್ಯಕ್ತಪಡಿಸಿದರು.

Farmer commits suicide by consuming pesticide in Belgaum

ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕು, ಬೆಳೆ ವಿಮೆ ಮಾಡಿಸಬೇಕು, ದೋಷಪೂರಿತ ಹತ್ತಿ ಬೀಜದಿಂದ ರೈತರಿಗೆ ಉಂಟಾಗುವ ನಷ್ಟ ಪರಿಹಾರ ಒದಗಿಸಬೇಕು ಎಂಬ ಮುಂತಾದ ಬೇಡಿಕೆಗಳನ್ನು ಇಟ್ಟುಕೊಂಡು, ಸುವರ್ಣ ವಿಧಾನಸೌಧದ ಎದಿರು ಬೃಹತ್ ಪೆಂಡಾಲ್ ಹಾಕಿಕೊಂಡು, ಚಳಿ ಗಾಳಿಯನ್ನು ಲೆಕ್ಕಿಸದೆ ನೂರಾರು ರೈತರು ಹಗಲಿರುಳು ಧರಣಿ ನಡೆಸುತ್ತಿದ್ದಾರೆ. [ಸದನದಲ್ಲಿ ಏನು ನಡೆದಿದೆ?]

ಚಿತ್ರದಲ್ಲಿ ಕಾಣುವಂತೆ ರೈತರ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಅವರ ನೇತೃತ್ವದಲ್ಲಿ ಸರಕಾರದ ವಿರುದ್ಧ ಪ್ರತಿಭಟನೆಗಿಳಿದಿರುವ ನೂರಾರು ರೈತರು ಪ್ರತಿಭಟನೆಗಿಳಿದಿದ್ದಾರೆ. ರೈತ ಮುಖಂಡರು ಮೈಕ್ ಮುಂದೆ ನಿಂತುಕೊಂಡು ಸಿದ್ದರಾಮಯ್ಯ ಅವರ ಸರಕಾರದ ವಾಗ್ದಾಳಿ ನಡೆಸುತ್ತಿದ್ದಾರೆ. ಸರಕಾರ ಸ್ಪಂದಿಸದ ಕಾರಣ ಮೂವರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳಿರುವ ವಿಠಲ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. [ಅಧಿವೇಶನ ಸುಸೂತ್ರವಾಗಿ ನಡೆಯುವುದೆ]

ಆತ್ಮಹತ್ಯೆಗೆ ಕಾರಣವೇನು? : ಅರಭಾವಿಯ ರೈತರು ಹೇಳುವ ಪ್ರಕಾರ, ಮಾಜಿ ಶಾಸಕ ಮುರುಗೇಶ್ ನಿರಾಣಿ ಅವರ ಒಡೆತನಕ್ಕೆ ಸೇರಿದ ಮುಧೋಳದಲ್ಲಿರುವ ಸಕ್ಕರೆ ಕಂಪನಿಗೆ ವಿಠಲ ಅರಭಾವಿ 120 ಟನ್ ನಷ್ಟು ಕಬ್ಬು ಮಾರಿದ್ದ. ಆದರೆ, ನಿರಾಣಿಯವರು ಸಂಪೂರ್ಣ ಹಣ ನೀಡದೆ ಅರ್ಧದಷ್ಟು ಮಾತ್ರ ಹಣ ನೀಡಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸರಕಾರ ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸದಿರುವುದೇ ಇದಕ್ಕೆ ಕಾರಣ ಎಂಬುದು ಅವರ ಆರೋಪ.

ಮುರುಗೇಶ್ ನಿರಾಣಿ ಸ್ಪಷ್ಟನೆ : "ವಿಠಲ ಅರಭಾವಿ ಅರ್ಧದಷ್ಟು ಮಾತ್ರ ಕಬ್ಬು ಬೆಳೆಯನ್ನು ಕಾರ್ಖಾನೆಗೆ ಒದಗಿಸಿದ್ದ. ಆದ್ದರಿಂದ ಅರ್ಧದಷ್ಟು ಮಾತ್ರ ಹಣವನ್ನು ಆತನಿಗೆ ಒದಗಿಸಲಾಗಿದೆ. ಖಾಸಗಿ ಕಂಪನಿಗಳು ನೀಡುವ ದರದಂತೆ ರೈತರಿಗೆ ಹಣವನ್ನು ನೀಡಲಾಗುತ್ತಿದೆ. ರೈತ ವಿಠಲ ಅರಭಾವಿಗೆ ಪೂರ್ತಿ ಹಣ ನೀಡಿದ್ದಕ್ಕೆ ನಮ್ಮಲ್ಲಿ ದಾಖಲೆಗಳಿವೆ. ಬೇಕಿದ್ದರೆ ಅವನ್ನು ನೀಡುತ್ತೇನೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ" ಎಂದು ನಿರಾಣಿ ಅವರು ಸ್ಪಷ್ಟಪಡಿಸಿದ್ದಾರೆ.

ರೈತರ ಆತ್ಮಹತ್ಯೆಗೆ ನೇರವಾಗಿ ಸಿದ್ದರಾಮಯ್ಯನೇ ಕಾರಣ : ರೈತರು ಮಾಡಿಕೊಳ್ಳುತ್ತಿರುವ ಆತ್ಮಹತ್ಯೆಗೆ ನೇರವಾಗಿ ಸಿದ್ದರಾಮಯ್ಯನವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಡಿವಿ ಸದಾನಂದ ಗೌಡ ಅವರು ಆರೋಪಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಕೂಡಲೆ ಸರಕಾರ 10 ಲಕ್ಷ ರು. ಪರಿಹಾರ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.

English summary
A farmer from Kankanawadi village, Raibhag taluk, Belgaum district has committed suicide by consuming pesticide in front of Suvarna Vidhana Soudha in Belgaum on 27th Nov. The farmer Vittal Arabhavi (50) was rushed to KLE hospital, but could not survive. Hundreds of farmers from all parts of Karnataka are protesting against govt demanding support prize to sugarcane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X