ಬೆಳಗಾವಿ ಅಧಿವೇಶನದಲ್ಲಿ ಕನ್ನಡ ಡಿಂಡಿಮ
ಬೆಳಗಾವಿ, ನ. 28 : ಬೆಳಗಾವಿ ಸುರ್ವಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಸಭೆ ಅಧಿವೇಶನದ ಮೂರನೇ ದಿನಾದ ಕಲಾಪದಲ್ಲಿ ಕನ್ನಡದ ಬಗ್ಗೆ ಚರ್ಚೆ ನಡೆಯಿತು. ಕನ್ನಡ, ಕರ್ನಾಟಕದ ಬಗ್ಗೆ ಯಾರು ಹಗುರವಾಗಿ ಮಾತನಾಡುವುದನ್ನು ಸಹಿಸಲಾಗದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿಯಲ್ಲಿ ಸೋಮವಾರ ನಡೆದ ಮಹಾ ಮೇಳವ ಕಾರ್ಯಕ್ರಮದಲ್ಲಿ ಸದನದ ಸದಸ್ಯರೊಬ್ಬರು ಸರ್ಕಾರದ "ಶವಯಾತ್ರೆ ಮಾಡುವುದಾಗಿ ಲೇವಡಿ ಮಾಡಿದ್ದಾರೆ" ಎಂಬ ಪತ್ರಿಕಾ ವರದಿಗಳನ್ನು ಆಧರಿಸಿ ಜೆಡಿಎಸ್ ಶಾಸಕ ವೈ. ಎಸ್. ವಿ. ದತ್ತ ಅವರ ಶೂನ್ಯ ವೇಳೆಯಲ್ಲಿ ಘಟನೆ ಕುರಿತು ಸದನದಲ್ಲಿ ಪ್ರಸ್ತಾಪಿಸಿದರು. (ಕರ್ನಾಟಕದ ಶವಯಾತ್ರೆ ಮಾಡುತ್ತೇನೆಂದ ಭಂಡ ಸಂಭಾಜಿ)

ಇದಕ್ಕೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಕರ್ನಾಟಕ ರಾಜ್ಯ, ಕನ್ನಡ ಭಾಷೆ, ಸದನ ಹಾಗೂ ಸದನದ ಸದಸ್ಯರ ಕುರಿತು ಲಘುವಾಗಿ ಮಾತನಾಡುವುದು ಯಾರಿಗೂ ಶೋಭೆ ತರುವಂತಹುದಲ್ಲ, ಇಂತಹ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಅಗತ್ಯವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಸದನಕ್ಕೆ ಭರವಸೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಎಲ್ಲರೂ ಸಂಯಮ ಕಾಯ್ದುಕೊಳ್ಳಬೇಕು. ಯಾರೂ ಕರ್ನಾಟಕದ ಸಂಸ್ಕೃತಿಗೆ ಧಕ್ಕೆ ತರುವ ಮತ್ತು ಕನ್ನಡಿಗರ ಭಾವನೆಗಳ ಕೆರಳಿಸುವ ಪ್ರಯತ್ನ ಮಾಡಬಾರದು ಎಂದು ಮನವಿ ಮಡಿದರು. ಕನ್ನಡಿಗರು ಮತ್ತು ಇತರ ಭಾಷೆಯವರು ಪರಸ್ಪರ ಸೌಹಾರ್ದತೆ ಮತ್ತು ಸಹಕಾರದಿಂದ ಜೀವನ ನಡೆಸಬೇಕು ಎಂದರು. (ಆರೋಪ ಪ್ರತ್ಯಾರೋಪಗಳಿಗೆ ಅಧಿವೇಶನ ಬಲಿ)
ಮೊಕದ್ದಮೆ ಹಿಂಪಡೆಯಿರಿ : ಬೆಳಗಾವಿಯ ಹೃದಯ ಭಾಗದಲ್ಲಿ ಮರಾಠಿ ಧ್ವಜ ಹಾರಿಸಿದ ಎಂಇಎಸ್ ಕ್ರಮವನ್ನು ಖಂಡಿಸಿ, ಪ್ರತಿಭಟನೆ ನಡೆಸಿದ ಕನ್ನಡ ಕಾರ್ಯಕರ್ತರ ವಿರುದ್ಧ ದಾಖಲಿಸಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದರು. (ಕನ್ನಡ ಕಾರ್ಯಕರ್ತರಿಗೆ ಲಾಠಿ ಏಟು)
ಖೇಣಿಗೆ ಕನ್ನಡ ಪಾಠ : ಶಾಸಕ ಮತ್ತು ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಕನ್ನಡದಲ್ಲಿ ಪ್ರಶ್ನೆ ಕೇಳಿ ಎಂದು ಕನ್ನಡ ಪಾಠ ಮಾಡಿದರು. ಬುಧವಾರದ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಖೇಣಿ ಅಂಗನವಾಡಿ ಕೇಂದ್ರಗಳ ಕುರಿತು ಪ್ರಸ್ತಾಪಿಸಿ ಇಂಗ್ಲಿಷ್‌ನಲ್ಲಿ ಪ್ರಶ್ನೆ ಕೇಳಿದರು.
ಅದಕ್ಕೆ ಉತ್ತರ ನೀಡುತ್ತಿದ್ದಂತೆ ಖೇಣಿ ಮತ್ತೆ ಮತ್ತೆ ಉಪ ಪ್ರಶ್ನೆಗಳನ್ನು ಇಂಗ್ಲಿಷ್ ನಲ್ಲಿ ಕೇಳಿದರು. ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಉಮಾಶ್ರೀ "ನಮಗೆ ಇಂಗ್ಲಿಷ್ ಜ್ಞಾನದ ಕೊರತೆ ಇದೆ, ಕನ್ನಡದಲ್ಲಿ ಮಾತನಾಡಿ" ಎಂದು ಖೇಣಿ ಅವರಿಗೆ ಸೂಚನೆ ನೀಡಿದರು.












Click it and Unblock the Notifications