ಮರಾಠಿಗರ ವೋಟಿನ ಮುಂದೆ ಕನ್ನಡಾಭಿಮಾನ ಸೋತು ಹೋಯಿತೇ?: ಕರವೇ
ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಮರಾಠಿಗರಿಂದ ಹಲ್ಲೆ ಪ್ರಕರಣದ ವಿಚಾರವಾಗಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗನ ಮೇಲೆ ಆಗಿರುವ ದೌರ್ಜನ್ಯದ ವಿರುದ್ಧ ಬೆಳಗಾವಿ ರಾಜಕಾರಣಿಗಳೇ ತುಟಿ ಬಿಚ್ಚುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ. ಮತ್ತೊಂದೆಡೆ ಇದೇ ಜಿಲ್ಲೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೂ ಮರಾಠಿಗರನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಖಂಡನೆ ವ್ಯಕ್ತವಾಗುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಈ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ಬಸ್ ನಿರ್ವಾಹಕರು ಮರಾಠಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ತಡವಾಗಿಯಾದರೂ ಮಾಧ್ಯಮಗಳಿಗೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪ್ರತಿಕ್ರಿಯೆಯನ್ನು ಗಮನಿಸಿದೆ. ತಾವು ಸೌಹಾರ್ದ, ಸೋದರತ್ವದ ಅಗತ್ಯದ ಬಗ್ಗೆ ಹೇಳಿದ್ದೀರಿ. ನಾವೆಲ್ಲರೂ ಭಾರತೀಯರು ಎಂದು ಒತ್ತಿ ಹೇಳಿದ್ದೀರಿ. ಇದೆಲ್ಲವೂ ಒಳ್ಳೆಯ ಮಾತುಗಳೇ ಹೌದು. ಕನ್ನಡಿಗರು ಮೊದಲಿನಿಂದಲೂ ಸೌಹಾರ್ದಪ್ರಿಯರು, ಕಾಲು ಕೆರೆದುಕೊಂಡು ಯಾರೊಂದಿಗೂ ಜಗಳಕ್ಕೆ ನಿಲ್ಲುವವರಲ್ಲ. ಇದೆಲ್ಲ ಮಾತುಗಳು ಭಾಷೆಯ ಹೆಸರಿನಲ್ಲಿ ಪುಂಡಾಟಿಕೆ ಮಾಡುವ ಭಾಷಾಂಧ ಮರಾಠಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ನೀವೇ ಬಹಿರಂಗವಾಗಿ ಹೇಳಿದಂತೆ ಬಸ್ ನಿರ್ವಾಹಕರ ಮೇಲೆ ಅಲ್ಲಿನ ಸಿಪಿಐ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ರಾತ್ರೋರಾತ್ರಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ನೀವೇ ಹೇಳುವಂತೆ ಸಿಪಿಐ ತಪ್ಪು ಎಸಗಿದ್ದಾರೆ. ಹೀಗಿರುವಾಗ ಸಿಪಿಐ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ನಿರ್ವಾಹಕರ ಮೇಲೆ ದಾಖಲಾದ ಪ್ರಕರಣವನ್ನು ಯಾಕೆ ಇನ್ನೂ ರದ್ದುಪಡಿಸಿಲ್ಲ. ಈ ಕಣ್ಣೊರೆಸುವ ಮಾತುಗಳನ್ನು ಯಾಕೆ ಆಡುತ್ತಿದ್ದೀರಿ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ನನ್ನ ಕ್ಷೇತ್ರದಲ್ಲಿ ಮರಾಠಿಗರು ನನಗೆ ಮತ ನೀಡಿ ಗೆಲ್ಲಿಸಿದ್ದಾರೆ ಎಂದು ನಿಮ್ಮ ಮಾಧ್ಯಮ ಹೇಳಿಕೆಯಲ್ಲಿ ಹೇಳಿದ್ದೀರಿ. ಕನ್ನಡಿಗರು ನಿಮಗೆ ಮತ ನೀಡಿಲ್ಲವೇ? ಅವರು ನಿಮ್ಮ ಗೆಲುವಿಗೆ ಕಾರಣರಲ್ಲವೇ? ಕೇವಲ ಮರಾಠಿಗರ ಮತಗಳಿಂದ ನೀವು ಗೆದ್ದಿದ್ದೀರೆ? ಸರಿಯನ್ನು ಸರಿ, ತಪ್ಪನ್ನು ತಪ್ಪು ಎಂದು ಹೇಳಲು ಇಷ್ಟೆಲ್ಲ ಸರ್ಕಸ್ ಮಾಡಬೇಕಿಲ್ಲ. ನಿಮ್ಮ ಮೌನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಎದ್ದ ನಂತರ ನಿರ್ವಾಹಕರ ಮೇಲಿನ ಹಲ್ಲೆಯನ್ನು ಖಂಡಿಸಿದ್ದೀರಿ. ನೀವು ಯಾರನ್ನೋ ಓಲೈಸಲು ಒದ್ದಾಡುತ್ತಿದ್ದೀರಿ ಎಂಬುದು ಸ್ಪಷ್ಟವಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾಷಾಭಿಮಾನಿಗೆ ಕನ್ನಡ ಏಕೆ ಕಾಣಲಿಲ್ಲ?: ಬೆಳಗಾವಿಯಲ್ಲಿ ಘಟನೆ ನಡೆದ ಬಾಳೇಕುಂದ್ರಿಯಲ್ಲೇ ಮರಾಠಿಗರ ಒಂದು ಕಾರ್ಯಕ್ರಮವೊಂದರಲ್ಲಿ ತಾವು ಭಾಗವಹಿಸಿದ್ದನ್ನು ಗಮನಿಸಿದೆ. ಆ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಒಂದಕ್ಷರ ಕನ್ನಡವಿಲ್ಲ. ನಾನೂ ಕೂಡ ಭಾಷಾಭಿಮಾನಿ ಎಂದು ಹೇಳಿಕೊಳ್ಳುವ ತಾವು, ಬ್ಯಾನರ್‌ನಲ್ಲಿ ಕನ್ನಡವೇಕಿಲ್ಲ ಎಂದು ಪ್ರಶ್ನೆ ಮಾಡಿದ್ದೀರಾ? ಖಂಡಿತ ಇಲ್ಲ ಎಂದು ಟೀಕಿಸಿದ್ದಾರೆ.
ಮರಾಠಿಗರ ಓಟಿನೆದುರು ನಿಮ್ಮ ಭಾಷಾಭಿಮಾನ ಸೋತು ಹೋಗಿರಬಹುದು. ಬೆಳಗಾವಿಯೇನಾದರೂ ಮಹಾರಾಷ್ಟ್ರಕ್ಕೆ ಸೇರಿದರೆ "ಜೈಮಹಾರಾಷ್ಟ್ರ" ಎಂಬ ಘೋಷಣೆ ಕೂಗುವವರಲ್ಲಿ ನಾನೇ ಮೊದಲಿಗಳು ಎಂದು ನೀವು ಹಿಂದೆ ಹೇಳಿದ್ದಿರಿ ಅಲ್ಲವೇ? ಮಾನ್ಯ ಸಚಿವರೇ, ನಿಮ್ಮ ರಾಜಕಾರಣ ಬದಿಗಿಟ್ಟು ಕನ್ನಡಿಗರ ಸ್ವಾಭಿಮಾನದ ವಿಷಯ ಬಂದಾಗ, ನ್ಯಾಯ-ಅನ್ಯಾಯದ ಪ್ರಶ್ನೆ ಬಂದಾಗ ಧೈರ್ಯವಾಗಿ ಮಾತನಾಡಿ. ವಿಶ್ವಮಾನವತೆಯ ಪಾಠವನ್ನು ಭಾಷಾಂಧ ಮರಾಠಿಗರಿಗೆ ಹೇಳಿ. ಕನ್ನಡಿಗರು ಹುಟ್ಟುತ್ತಲೇ ವಿಶ್ವಮಾನವರು, ಅವರಿಗೆ ಈ ಪಾಠದ ಅಗತ್ಯವಿಲ್ಲ ಎಂದು ಕಿವಿಮಾತು ಹೇಳಿದ್ದಾರೆ.

ತಮಗೆ ನಿಜವಾದ ಕಳಕಳಿ ಇದ್ದರೆ, ದೌರ್ಜನ್ಯಕ್ಕೆ ಒಳಗಾದ ಬಸ್ ನಿರ್ವಾಹಕನ ಮೇಲಿನ ಸುಳ್ಳು ದೂರನ್ನು ಈ ಕೂಡಲೇ ರದ್ದುಪಡಿಸಬೇಕು. ತಪ್ಪು ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಕೂಡಲೇ ಸೂಚನೆ ನೀಡಬೇಕು. ಸೋದರತೆ, ಸೌಹಾರ್ದ ತೋರುವುದೆಂದರೆ ಅಮಾಯಕ ಕನ್ನಡಿಗನ ಮೇಲೆ ಪೋಕ್ಸೋ ಕೇಸ್ ಹೂಡಿ, ದೌರ್ಜನ್ಯ ಎಸಗಿದ ಸಮಾಜಘಾತಕರನ್ನು ರಕ್ಷಿಸುವುದಲ್ಲ ಎಂದು ಕಿಡಿಕಾರಿದ್ದಾರೆ.












Click it and Unblock the Notifications