Flood Compensation: ₹5,00,000 ಇದ್ದ ಪರಿಹಾರವನ್ನು 1 ಲಕ್ಷಕ್ಕೆ ಇಳಿಸಿದ್ದು ಸಿದ್ದರಾಮಯ್ಯ ಸರ್ಕಾರ: ಗಂಭೀರ ಆರೋಪ
ಬೆಳಗಾವಿ, ಜುಲೈ, 21: ಅತಿವೃಷ್ಟಿ ಪರಿಹಾರ ಕಾರ್ಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬೇಕಾಬಿಟ್ಟಿ ವರ್ತನೆ ತೋರುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆಕ್ರೊಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಭಾನುವಾರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನಸಾಮಾನ್ಯರ ಮೇಲೆ ನಿಜವಾದ ಕಾಳಜಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ರಾಜ್ಯದಲ್ಲಿ ಅತಿವೃಷ್ಟಿ ತೀವ್ರವಾಗಿದ್ದರೂ, ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಅತ್ಯಂತ ಕಡಿಮೆ ಮೊತ್ತದ ಪರಿಹಾರ ಘೋಷಿಸುತ್ತಿದೆ ಎಂದು ಆರೋಪ ಮಾಡಿದರು.

ಉಸ್ತುವಾರಿ ಸಚಿವರು ಸ್ವಕ್ಷೇತ್ರಕ್ಕೆ ಸೀಮಿತ: ರಾಜ್ಯ ಸರ್ಕಾರದ ಎಲ್ಲಾ ಉಸ್ತುವಾರಿ ಸಚಿವರುಗಳು ತಮ್ಮ ತಮ್ಮ ಸ್ವಕ್ಷೇತ್ರಗಳಿಗೆ ಸೀಮಿತವಾಗಿ ಬಿಟ್ಟಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರದಲ್ಲಿ ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅತಿವೃಷ್ಟಿ ಸಂತ್ರಸ್ತರಿಗೆ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದರು. ಆದರೆ ಈಗ ಸಿದ್ದರಾಮಯ್ಯ ಸರ್ಕಾರ ಅದನ್ನು ಒಂದು ಲಕ್ಷಕ್ಕೆ ಇಳಿಸಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮನೆಯೊಳಗೆ ನೀರು ನುಗ್ಗಿ ಹನಿಗೊಳಗಾದರೆ 10 ಸಾವಿರ ರೂಪಾಯಿ ಇದ್ದ ಪರಿಹಾರ ಮೊತ್ತವನ್ನು 5,000 ರೂಪಾಯಿಗೆ ಇಳಿಕೆ ಮಾಡಿದ್ದಾರೆ. ಇದು ಜನಸಾಮಾನ್ಯರ ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಇರುವ ಕಾಳಜಿ ಎಂಥದ್ದು ಎಂಬುದನ್ನು ತೋರ್ಪಡಿಸುತ್ತಿದೆ ಎಂದು ಪ್ರಲ್ಹಾದ್ ಜೋಶಿ ತರಾಟೆಗೆ ತೆಗೆದುಕೊಂಡರು.
ಅಧಿಕಾರಕ್ಕಾಗಿ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿ, ಈಗ ಅರ್ಧಂಬರ್ಧ ಗ್ಯಾರೆಂಟಿಗಳನ್ನು ನೀಡಿದೆ. ಅದನ್ನು ಸರಿದೂಗಿಸಲು ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಿ ಜನಸಾಮಾನ್ಯರ ಬದುಕಿಗೆ ಬರೆ ಎಳೆದಿದೆ. ಇನ್ನು ರಾಜ್ಯದಲ್ಲಿ ಶತಾಯ ಗತಾಯ ಅಧಿಕಾರಕ್ಕೆ ಬರಲೆಂದು ಮುಂದಾಲೋಚನೆ ಇಲ್ಲದೆ ಸುಳ್ಳು ಭರವಸೆಗಳನ್ನು ನೀಡಿದ ಕಾಂಗ್ರೆಸ್, ಇದೀಗ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳನ್ನು ನಿಭಯಿಸಲಾಗದೆ ಪರದಾಡುತ್ತಿದೆ ಎಂದು ಟೀಕಿಸಿದರು.
ಜಾತಿ ವ್ಯವಸ್ಥೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಜಾತಿ ವ್ಯವಸ್ಥೆ ದೇವರ ಸೃಷ್ಟಿಯಲ್ಲ. ಸ್ವಾರ್ಥಿ ಮನುಷ್ಯರ ಸೃಷ್ಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆ ಕಲಿಯಲು ಅವಕಾಶ ಸಿಕ್ಕ ಕೆಲವರು ಮಾತ್ರ ಆರ್ಥಿಕವಾಗಿ ಮೇಲೆ ಬಂದರು. ವಿದ್ಯೆಯ ಅವಕಾಶ ಇಲ್ಲದವರು ಕುಲ ಕಸುಬನ್ನಷ್ಟೇ ಮಾಡಿಕೊಂಡು ಹಿಂದುಳಿದರು. ಶೋಷಿತ ಸಮುದಾಯಗಳ ವಿಮೋಚನೆಗೆ ಹೋರಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣದಿಂದಲೇ ಮೇದಾವಿಯಾದರು ಎಂದು ವಿವರಿಸಿದರು.
ಶತಮಾನಗಳ ಕಾಲ ಗುಲಾಮಗಿರಿ ಇದ್ದುದರಿಂದ ತಳಸಮುದಾಯಗಳು ಹಿಂದೆ ಉಳಿದವು. ಈಗಲೂ ಶಿಕ್ಷಣದ ಕೊರತೆಯಿಂದ ಆ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಸ್ವಾಭಿಮಾನ ಬೆಳೆಸಿಕೊಂಡು ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಬೇಕು ಎಂದರು.
ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದರು. ಎಸ್‌ಸಿ ಅಥವಾ ಎಸ್‌ಟಿ ಸಮುದಾಯಗಳ ಜನಸಂಖ್ಯೆ ರಾಜ್ಯದಲ್ಲಿ ಶೇಕಡ 24ರಷ್ಟು ಇದ್ದಾರೆ. ಈ ಜನಸಂಖ್ಯೆಗೆ ಸಮವಾಗಿ ಅಭಿವೃದ್ಧಿ ಆಯವ್ಯಯದ ಶೇಕಡ 24ರಷ್ಟು ಹಣವನ್ನು ಈ ಸಮುದಾಯಗಳ ಏಳಿಗೆಗಾಗಿ ಮೀಸಲಿಟ್ಟಿದ್ದು ನಮ್ಮ ಸರ್ಕಾರ. ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ. ಭೋವಿ ಸಮುದಾಯದ ಪ್ರತಿನಿಧಿಯನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡಿದ್ದು ನಮ್ಮ ಸರ್ಕಾರ ಎಂದರು.
ಭೋವಿ ಅಭಿವೃದ್ಧಿ ನಿಗಮವನ್ನು ಭೋವಿ-ವಡ್ಡರ ಅಭಿವೃದ್ಧಿ ನಿಮಗವಾಗಿ ಮರುನಾಮಕರಣ ಮಾಡುಬೇಕು ಎನ್ನುವ ಬೇಡಿಕೆ ಇದೆ. ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು. ಸಿದ್ಧರಾಮೇಶ್ವರ ಅಧ್ಯಯನ ಪೀಠಕ್ಕಾಗಿ ಬೇಡಿಕೆ ಇದೆ. ಈ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದರು.
ಈ ವೇಳೆ ಸಚಿವರಾದ ಶಿವರಾಜ್ ತಂಗಡಗಿ, ಡಿ.ಸುಧಾಕರ್, ಸತೀಶ್ ಜಾರಕಿಹೊಳಿ, ಶಾಸಕರಾದ ರಘುಮೂರ್ತಿ, ವೀರೇಂದ್ರ ಪಪ್ಪಿ, ಹೆಚ್.ವಿ.ವೆಂಕಟೇಶ್, ಶ್ರೀನಿವಾಸ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದರಾದ ಚಂದ್ರಣ್ಣ ಸೇರಿ ಹಲವು ಮಂದಿ ಸಮಾಜದ ಮುಖಂಡರು ಮತ್ತು ಸಮುದಾಯದ ಶ್ರೀಗಳು ಹಾಗೂ ನಾನಾ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications