ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯರಿಂದ ಹೊಸ ಘೋಷಣೆಗಳು, ಅವು ಯಾವುವು?-ಮಾಹಿತಿ ತಿಳಿಯಿರಿ
ಬೆಳಗಾವಿ, ಡಿಸೆಂಬರ್, 15: ಬೆಳಗಾವಿಯಲ್ಲಿ ಅಧಿವೇಶನದ ವೇಳೆ ಅಭಿವೃದ್ಧಿ ಕುರಿತ ಚರ್ಚೆಗೆ ಉತ್ತರ ಕೊಡುವ ವೇಳೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಘೋಷಣೆಗಳನ್ನು ಘೋಷಣೆ ಮಾಡಿದ್ದಾರೆ. ಹಾಗಾದರೆ ಘೋಷಣೆಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಂಜುಂಡಪ್ಪ ವರದಿ ಸಲ್ಲಿಕೆಯಾಗಿ 21 ವರ್ಷಗಳಾದವು. ನಂಜುಂಡಪ್ಪನವರ ವರದಿಯನ್ನಾಧರಿಸಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಇದುವರೆಗೆ 61,330 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಿದೆ. ಸುಮಾರು 42,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ನಂಜುಂಡಪ್ಪನವರ ವರದಿಯನ್ನಾಧರಿಸಿ ನೀಡಲಾಗುವ ವಿಶೆಷ ಅಭಿವೃದ್ಧಿ ಯೋಜನೆಯಡಿಯೇ 32433.43 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದರು.

ಇದರ ಜೊತೆಯಲ್ಲಿ ಬಯಲು ಸೀಮೆ ಅಭಿವೃದ್ಧಿ ಮಂಡಳಿ ವತಿಯಿಂದಲೂ ಅನುದಾನಗಳನ್ನು ಒದಗಿಸಲಾಗಿದೆ. ಇಷ್ಟೆಲ್ಲ ಮಾಡಿದರೂ ಮಾನವ ಅಭಿವೃದ್ಧಿ ಸೂಚ್ಯಂಕವು ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸುತ್ತಿಲ್ಲ. ಶಿಕ್ಷಣ, ಆರೋಗ್ಯ, ಆದಾಯಗಳಿಕೆ ಮುಂತಾದವುಗಳಲ್ಲಿ ಹಿನ್ನಡೆಯನ್ನು ಈ ಜಿಲ್ಲೆಗಳು ಅನುಭವಿಸುತ್ತಿವೆ.
ಹಾಗಾಗಿ ವಿಶೇಷವಾಗಿ ನಂಜುಂಡಪ್ಪನವರ ವರದಿಯ ಅನುಷ್ಠಾನ ಹಾಗೂ ಅದರ ಫಲಶ್ರುತಿಯನ್ನು ಅಧ್ಯಯನ ಮಾಡಲು ನುರಿತ ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ಕಮಿಟಿಯನ್ನು ರಚಿಸಲಾಗುವುದು ಎಂದರು.
1. ನಂಜುಂಡಪ್ಪನವರ ವರದಿಯ ಅನುಷ್ಠಾನ ಹಾಗೂ ಅದರ ಫಲಶ್ರುತಿಯನ್ನು ಅಧ್ಯಯನ ಮಾಡಲು ನುರಿತ ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ಕಮಿಟಿಯನ್ನು ರಚಿಸಲಾಗುವುದು
2 ಸಹಕಾರ ಬ್ಯಾಂಕ್‌ಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ, ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ನಮ್ಮ ಸರ್ಕಾರ ತೀರ್ಮಾನಿಸಿದೆ. ಇದರಿಂದ ಸಾಲಮನ್ನಾ ಮಾಡುವ ಕುರಿತು ನಾವು ನಮ್ಮ ಮ್ಯಾನಿಫೆಸ್ಟೊದಲ್ಲಿ ಹೇಳಿಲ್ಲ.
ಬಿಜೆಪಿಯವರು 2018ರ ತಮ್ಮ ಮ್ಯಾನಿಫೆಸ್ಟೊದಲ್ಲಿ "ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿ ಇರುವ 1 ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು" ಎಂದು ಹೇಳಿದ್ದರು. ಆದರೆ ಬಿಜೆಪಿಯವರು ಈ ಕುರಿತು ಏನಾದರೂ ಮಾಡಿದರಾ? ನಯಾಪೈಸೆ ಬಿಡುಗಡೆ ಮಾಡಿದರಾ? ಹೇಳಿ ಎಂದು ಪ್ರಶ್ನಿಸುವ ಮೂಲಕ ಗುಡುಗಿದರು.
ಯಡಿಯೂರಪ್ಪನವರು 2019ರ ಆಗಸ್ಟ್‌ನಲ್ಲಿ ಅತೀವೃಷ್ಟಿಯ ಕಾರಣಕ್ಕೆ ಬೆಳೆ ಹಾನಿಯಾಗಿತ್ತು. ಆಗ ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ಏನು ಹೇಳಿದರು ಗೊತ್ತಾ? "ಕೇಳಿದಷ್ಟು ಹಣ ಕೊಡಲು ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ". ಎಂದು ಹೇಳಿದ್ದರು ಅಂತಾ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪನವರು ಈ ರೀತಿ ಹೇಳಿದ್ದು ಇದೇ ಮೊದಲಲ್ಲ. 2009ರಲ್ಲಿ ವಿಧಾನಪರಿಷತ್ತಿನಲ್ಲಿ ನಮ್ಮ ವಿರೋಧ ಪಕ್ಷದ ನಾಯಕರಾಗಿದ್ದ ವಿ.ಎಸ್ ಉಗ್ರಪ್ಪ ಮುಂತಾದ ನಮ್ಮ ಪಕ್ಷದವರು ಸಾಲ ಮನ್ನಾ ಮಾಡಿ ಎಂದು ಆಗ್ರಹಿಸಿದ್ದಾಗಲೂ ಯಡಿಯೂರಪ್ಪನವರು ಇದೇ ಮಾತುಗಳನ್ನಾಡಿದ್ದರು. ಯಡಿಯೂರಪ್ಪನವರು ಹೇಳಿದ್ದ ಮಾತುಗಳಿವು.
ಮತಕ್ಕಾಗಿ ಇತರ ಪಕ್ಷಗಳವರು ಹೇಳಿದಂತೆ ನಾನು ಕೂಡ ರೈತರ ಕೃಷಿ ಮನ್ನಾ ಮಾಡುತ್ತೇನೆಂದು ಚುನಾವಣೆಯ ಸಂದರ್ಭದಲ್ಲಿ ಆಶ್ವಾಸನೆ ನಿಡಿದ್ದೆ. ಆದರೆ ಇದು ಸಾಧ್ಯವಿಲ್ಲ ಎಂಬುದು ಈಗ ಅರ್ಥವಾಗುತ್ತಿದೆ, ಸಾಲ ಮನ್ನಾ ಮಾಡಲು ಹಣ ಎಲ್ಲಿದೆ? ಎಂದು ವಿರೋಧ ಪಕ್ಷದ ಸದಸ್ಯರನ್ನೇ ಪ್ರಶ್ನಿಸಿದ್ದರು ಎಂದು ವಾಗ್ದಾಳಿ ಮಾಡಿದರು.
"ರೈತರ ಸಾಲ ಮನ್ನಾ ಮಾಡಲು ನಾನು ಸಿದ್ಧನಿದ್ದೇನೆ. ಆದರೆ ಬೊಕ್ಕಸದಲ್ಲಿ ಹಣದ ಕೊರತೆ ಇದೆ. ಆದ್ದರಿಂದ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ" ಎಂದಿದ್ದರು. ಜೊತೆಗೆ "ವಿಧಾನಸೌಧದಲ್ಲಿ ಕೂತು ನಾನು ನೋಟ್ ಪ್ರಿಂಟ್ ಮಾಡುತ್ತಿಲ್ಲ". ಎಂದಿದ್ದರು ಎಂದು ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದರು.
3. ಉತ್ತರ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲು ಹಾಗೂ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಸಲುವಾಗಿ ಬೆಳಗಾವಿ ಸಮೀಪ ಸುಮಾರು 2000 ಹೆಕ್ಟೇರ್ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ, 500 ಎಕರೆ ಪ್ರದೇಶದಲ್ಲಿ ಫೌಂಡ್ರಿ ಕ್ಲಸ್ಟರ್ ಅನ್ನು ಸ್ಥಾಪಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಏರೋಸ್ಪೇಸ್ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುವುದು.
4. ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕಾ ಕ್ಲಸ್ಟರ್ ಅನ್ನು ಸ್ಥಾಪಿಸಲಾಗುತ್ತಿದ್ದು, ಈಗಾಗಲೇ 19 ಘಟಕಗಳು 1255 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಸುಮಾರು 2450 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ. ಅಲ್ಲದೇ, ಧಾರವಾಡದ ಸಮೀಪ ಸುಮಾರು 3,000 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲಾಗುತ್ತದೆ.
5. ರಾಯಚೂರಿನಲ್ಲಿ ಹತ್ತಿ ಉತ್ಪಾದನೆಯು ಹೆಚ್ಚಿರುವುದರಿಂದ, ಈ ಜಿಲ್ಲೆಯಲ್ಲಿ ಆರ್ಥಿಕ ಅಭಿವೃದ್ಧಿ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ದೃಷ್ಠಿಯಿಂದ ಹತ್ತಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಒತ್ತು ನೀಡಲಾಗುವುದು.
6. ವಿಜಯಪುರದಲ್ಲಿ ಉತ್ಪಾದನಾ ಕ್ಲಸ್ಟರ್ ಅನ್ನು ಅಂದಾಜು 1500 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುವುದು.
7. ಉತ್ತರ ಕರ್ನಾಟಕವು ಸಮೃದ್ಧ ಪ್ರವಾಸೋದ್ಯಮಗಳ ತಾಣವಾಗಿದೆ. ಐತಿಹಾಸಿಕ ಮಹತ್ವವಿರುವ ಈ ತಾಣಗಳು ಅಂತರರಾಷ್ಟ್ರೀಯವಾಗಿಯೂ ಮಹತ್ವ ಪಡೆದಿವೆ. ಆದರೆ ಇದಕ್ಕೆ ಸಾಕಷ್ಟು ಮಹತ್ವ ನೀಡದೆ ಹಿನ್ನಡೆಯನ್ನು ಅನುಭವಿಸುತ್ತಿದೆ. ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕ್ರಮವಹಿಸುತ್ತೇವೆ.
8. ಧಾರವಾಡದಲ್ಲಿರುವ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯನ್ನು ಉನ್ನತೀಕರಿಸಲಾಗುವುದು. ಇದನ್ನು 'Centre of excellence for water management''ಯನ್ನಾಗಿ ಬದಲಾಯಿಸಿ ಇದರ ಮೂಲಕ ಜಲ ಶಿಕ್ಷಣ ನೀಡುವುದಷ್ಟೆ ಅಲ್ಲ, ಉತ್ತರ ಕರ್ನಾಟಕದ ಮಣ್ಣಿನ ಸವುಳು- ಜವುಳು ಸಮಸ್ಯೆಯನ್ನು ನಿರ್ವಹಿಸಲಾಗುವುದು. ಹಾಗೂ ರೈತರ ಆದಾಯ ಹೆಚ್ಚಳದ ಕಡೆಗೆ ಒತ್ತು ನೀಡಲಾಗುವುದು ಎಂದು ಘೋಷಣೆ ಮಾಡಿದರು.












Click it and Unblock the Notifications