ಸಿದ್ದರಾಮಯ್ಯ ಕನಸು ಮತ್ತು ಕಾಳಜಿಯ ಮೇಳಕ್ಕೆ ಬೆಳಗಾವಿಯಲ್ಲಿ ಚಾಲನೆ
ಬೆಳಗಾವಿ, ಡಿಸೆಂಬರ್ 25: ಬೆಳಗಾವಿಯಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ 'ಅಸ್ಮಿತೆ ವ್ಯಾಪಾರ ಮೇಳ-2024' ಉದ್ಘಾಟಿಸಲಿದ್ದಾರೆ. ಡಿಸೆಂಬರ್ 26 ರಿಂದ ಜನವರಿ 4ರ ತನಕ ಈ ಮೇಳ ನಡೆಯಲಿದೆ. ಇಂತಹ ಮೇಳ ಸಿದ್ದರಾಮಯ್ಯ ಅವರ ಕನಸು ಮತ್ತು ಕಾಳಜಿಯಾಗಿದೆ. ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಇದನ್ನು ಸಾಕಾರಗೊಳಿಸಿದ್ದು, ಮೇಳಕ್ಕೆ ಚಾಲನೆ ಸಿಗಲಿದೆ.
ಕರ್ನಾಟಕ ಸರ್ಕಾರ ಮಹಿಳೆಯರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳಾ ಸ್ವ-ಸಹಾಯ ಗುಂಪಿನಲ್ಲಿ ತಯಾರು ಮಾಡಿದ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಬೆಳಗಾವಿಯಲ್ಲಿ ಮೇಳ ಆಯೋಜಿಸಲಾಗಿದೆ. ಈ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ 'ಅಸ್ಮಿತೆ ವ್ಯಾಪಾರ ಮೇಳ-2024' ಎಂದು ಹೆಸರು ನೀಡಲಾಗಿದೆ. ಬೆಳಗಾವಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕನಸಿನ ಮತ್ತು ಕಾಳಜಿಯ ಈ ಮೇಳವನ್ನು ಗುರುವಾರ ಉದ್ಘಾಟಿಸಲಿದ್ದಾರೆ.

ಅಸ್ಮಿತೆ ವ್ಯಾಪಾರ ಮೇಳ: ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರು ಮಾಡಿದ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಗುರುವಾರ ಚಾಲನೆ ಸಿಗಲಿದೆ. ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಮತ್ತು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮತ್ತು ಬೆಳಗಾವಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಜಂಟಿಯಾಗಿ ಈ ಮೇಳವನ್ನು ಆಯೋಜನೆ ಮಾಡಿವೆ.
ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಡಿಸೆಂಬರ್ 26ರ ಗುರುವಾರ ಈ ಮೇಳಕ್ಕೆ ಚಾಲನೆ ಸಿಗಲಿದೆ. ಡಿಸೆಂಬರ್ 26 ರಿಂದ ಜನವರಿ 4ರ ತನಕ ಮೇಳ ನಡೆಯಲಿದೆ. ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರು ಮಾಡಿದ ಉತ್ಪನ್ನಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ. ಹೆಚ್ಚು ಜನರು ಮೇಳಕ್ಕೆ ಆಗಮಿಸಿ, ಉತ್ಪನ್ನಗಳನ್ನು ಖರೀದಿ ಮಾಡಿ, ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಬೆಂಬಲವನ್ನು ನೀಡಲಿದ್ದಾರೆ ಎಂಬ ನಿರೀಕ್ಷೆ ಇದೆ.
ಮಹಿಳಾ ಸ್ವ-ಸಹಾಯ ಸಂಘದ ಉತ್ಪನ್ನಗಳ ಮಾರಾಟಕ್ಕೆ ಹಳ್ಳಿ ಸಂತೆ, ತಾಲ್ಲೂಕು ಮಟ್ಟದಲ್ಲಿ ಮಾಸಿಕ ಸಂತೆ, ಜಿಲ್ಲಾ ವಸ್ತು ಪ್ರದರ್ಶನ ಮಾರಾಟ ಮೇಳ ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುವ ಮೇಳಗಳನ್ನು ಆಯೋಜಿಸುವ ಮೂಲಕ ಮಾರುಕಟ್ಟೆ ಒದಗಿಸಲು ಪ್ರಯತ್ನಿಸಲಾಗುತ್ತಿದೆ.
ಬೆಳಗಾವಿಯಲ್ಲಿ ಕಳೆದ 3 ವರ್ಷಗಳಿಂದ ಈ ಮಾದರಿ ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ ಪ್ರತಿ ದಿನ ಸಂಜೆ 6.30 ರಿಂದ 9 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಮೇಳದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲು ಅವಕಾಶವಿದೆ. ಈ ಬೃಹತ್ ಮೇಳದಲ್ಲಿ ಒಟ್ಟು 150 ಮಳಿಗೆಗಳಿವೆ. 10 ಆಹಾರ ಮಳಿಗೆಗಳು ಮತ್ತು 50 ಖಾದಿ ಉತ್ಪನ್ನಗಳ ಮಳಿಗೆಗಳೂ ಇವೆ.
ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಬೆಳಗ್ಗೆ 10.30 ರಿಂದ ರಾತ್ರಿ 9.30 ರವರೆಗೆ ಪ್ರದರ್ಶನ, ಮಾರಾಟ ನಡೆಯಲಿದೆ. ಚನ್ನಪಟ್ಟಣದ ಮರದ ಗೊಂಬೆ, ಕೊಪ್ಪಳದ ಕಿನ್ನಾಳ ಆಟದ ಸಾಮಾನು, ಮೊಳಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು, ರೇಷ್ಮೆ ಸೀರೆಗಳು, ವಿವಿಧ ಅಕರ್ಷಣೆಯ ಬಟ್ಟೆಗಳು, ನಾರಿನ ಉತ್ಪನ್ನದ ಬ್ಯಾಗ್‌ಗಳು, ಮಸಾಲಾ ಉತ್ಪನ್ನಗಳು, ಸಿರಿ ಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಖಾದಿ ಉತ್ಪನ್ನಗಳು, ಬಾಳೆ ನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಔಷಧಿಯುತ ಉತ್ಪನ್ನಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ಲಭ್ಯವಿದೆ.
ಈಗಾಗಲೇ ಕರ್ನಾಟಕ ಸರ್ಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ 50 ಅಕ್ಕ ಕೆಫೆಗಳನ್ನು ಒಂದೇ ಮಾದರಿ, ವಿನ್ಯಾಸದಡಿ ಅನುಷ್ಠಾನಗೊಳಿಸುತ್ತಿದೆ. 1200 ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ. ಅಕ್ಕ-ಕೆಫೆ ಕಾರ್ಯಕ್ರಮದ ಭಾಗವಾಗಿ ಈ ಮೇಳದ ಮೈದಾನದಲ್ಲಿನ ಆಹಾರ ಕೋರ್ಟ್ ಅನ್ನು 'ಅಕ್ಕ-ಕೆಫೆ' ಶೀರ್ಷಿಕೆಯಡಿ ತಯಾರು ಮಾಡಲಾಗಿದೆ.
ಈ ಆಹಾರ ಮಳಿಗೆಗಳಲ್ಲಿ ಉತ್ತರ ಕರ್ನಾಟಕದ ಗಿರ್ಮಿಟ್/ ಮಂಡಕ್ಕಿ, ಮೆಣಸಿನಕಾಯಿ ಬಜ್ಜಿ, ಜೋಳದ ಖಡಕ್ ರೊಟ್ಟಿ, ಹೋಳಿಗೆ, ಮಂಗಳೂರು ನೀರು ದೋಸೆ ಮತ್ತು ಮಾಂಸಹಾರಿ ಆಹಾರಗಳಾದ ಬಂಬೂ ಬಿರಿಯಾನಿ ಮುಂತಾದವುಗಳು ಲಭ್ಯವಿರಲಿದೆ. ಒಮ್ಮೆ ಮೇಳಕ್ಕೆ ಭೇಟಿ ಕೊಡಿ.












Click it and Unblock the Notifications