ಗೃಹಲಕ್ಷ್ಮಿಯಿಂದ ಅತ್ತೆ-ಸೊಸೆ ಜಗಳ ಅಂದೋರಿಗೆ ಸಿಎಂ ಮುಟ್ಟಿ ನೋಡ್ಕೊಳ್ಳೋ ಉತ್ತರ!
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಜಾರಿಯಾದರೆ ಅತ್ತೆ ಹಾಗೂ ಸೊಸೆ ನಡುವೆ ಜಗಳ ಶುರುವಾಗುತ್ತದೆ ಎಂದು ಹಲವರು ಕುಹಕವಾಡಿದ್ದರು. ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಗೃಹಲಕ್ಷ್ಮಿ ಹಣವನ್ನು ಕೂಡಿಸಿಟ್ಟು ಅತ್ತೆಯರು ಸೊಸೆಯರಿಗೆ ಬಳೆ ಅಂಗಡಿ ಹಾಕಿಕೊಟ್ಟಿದ್ದಾರೆ, ಟೈಲರಿಂಗ್ ಮೆಷಿನ್ ಕೊಡಿಸಿದ್ದಾರೆ. ಇಂಥವು ನೂರಾರು ಉದಾಹರಣೆಗಳಿವೆ ಎಂದು ಕೌಂಟರ್ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಜಾರಿಯಾದರೆ ಅತ್ತೆ ಸೊಸೆ ಜಗಳ ಆಗ್ತದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆದರು. ಆದರೆ ಅವರ ಬಾಯಿ ಮುಚ್ಚಿಸು ಹಲವು ನಿದರ್ಶನಗಳು ನಮ್ಮ ಮುಂದಿವೆ ಎಂದಿದ್ದಾರೆ.

ಸವದತ್ತಿಯಲ್ಲಿ ಮಾತನಾಡಿದ ಸಿಎಂ, ಶಕ್ತಿ ಯೋಜನೆಯಿಂದಾಗಿ ಇದುವರೆಗೂ ರಾಜ್ಯದಲ್ಲಿ ಮಹಿಳೆಯರು 300 ಕೋಟಿ ಉಚಿತ ಟ್ರಿಪ್ ಮಾಡಿದ್ದಾರೆ. ಇವರಲ್ಲಿ ಲಕ್ಷಾಂತರ ಮಂದಿ ತಾಯಿ ರೇಣುಕಾ ಯಲ್ಲಮ್ಮನ ದರ್ಶನ ಕೂಡ ಪಡೆದಿದ್ದಾರೆ. ದೇವರು-ಧರ್ಮ ತಮಗೆ ಮಾತ್ರ ಸೇರಿದ್ದು ಎಂದು ಬಿಜೆಪಿಯವರು ಭಯಂಕರ ಮಾತನಾಡ್ತಾರಲ್ಲಾ? ಆದರೆ ಇದುವರೆಗೂ ದೇವಿಯ ಭಕ್ತರಿಗೆ ನಾವು ಮಾಡಿದಂತ ಕಾರ್ಯಕ್ರಮವನ್ನು ಬಿಜೆಪಿಯವರು ಏಕೆ ಮಾಡಲಿಲ್ಲ? ಎಂದು ಗುಡುಗಿದ್ದಾರೆ.
ದೇವರು-ಧರ್ಮದ ಹೆಸರಲ್ಲಿ ದೇಶವನ್ನು, ರಾಜ್ಯವನ್ನು ಒಡೆಯುವ ಬಿಜೆಪಿಯನ್ನು ಮೊದಲು ದೂರ ಇಡಿ. ಇಲ್ಲದಿದ್ದರೆ ನಮ್ಮ ನಾಡೂ ಉಳಿಯಲ್ಲ, ದೇಶವೂ ಉಳಿಯಲ್ಲ. ತಾಯಿ ಯಲ್ಲಮ್ಮ ಶಕ್ತಿ ದೇವತೆ. ಯಾವ ದೇವರೂ ಕೂಡ ಮನುಷ್ಯರನ್ನು ಧರ್ಮದ ಕಾರಣಕ್ಕೆ ದ್ವೇಷಿಸಿ ಎಂದು ಹೇಳುವುದಿಲ್ಲ. ದೇವರ ಹೆಸರಲ್ಲಿ ದ್ವೇಷ ಮಾಡಿ ಎಂದು ಹೇಳುವುದು ಬಿಜೆಪಿ ಮಾತ್ರ. ತಾಯಿ ರೇಣುಕಾ ಯಲ್ಲಮ್ಮ ಯಾವ ಮನುಷ್ಯರನ್ನು ದ್ವೇಷಿಸಿ ಎಂದು ಹೇಳುವುದಿಲ್ಲ ತಾನೆ? ಎಂದು ಪ್ರಶ್ನಿಸಿದ್ದಾರೆ.
ತಾಯಿ ರೇಣುಕಾ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ನಾವು ರೆಡಿ. ನಿಮ್ಮ ಸಹಕಾರ ಅಗತ್ಯ. ಕ್ಷೇತ್ರದಲ್ಲಿ ಅನಧಿಕೃತವಾಗಿ ಮಳಿಗೆಗಳನ್ನು ಹಾಕಬೇಡಿ. ಅನಧಿಕೃತವಾಗಿ ಇರುವವರಿಗೆ ಬೇರೆ ವ್ಯವಸ್ಥೆ ಮಾಡೋಣ. ಆದರೆ ಅಕ್ರಮವಾಗಿ ಯಾರೂ ಮಳಿಗೆ ಹಾಕದೆ ಸಹಕರಿಸಿ ಎಂದು ಮನವಿ ಮಾಡುತ್ತೇನೆ. ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರವಾಸೋದ್ಯಮ ಮಂಡಳಿ ಹಾಗೂ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆ ನಡೆಸಲಾಗಿದೆ. ಈ ಕ್ಷೇತ್ರಕ್ಕೆ ಸುಮಾರು ಎರಡು ಕೋಟಿ ಭಕ್ತಾದಿಗಳು ವರ್ಷಕ್ಕೆ ಭೇಟಿ ನೀಡುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ತಂಗುದಾಣದ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಈ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಕ್ಷೇತ್ರದಲ್ಲಿ 1,087 ಎಕರೆ ಪ್ರದೇಶ ಲಭ್ಯವಿದ್ದು, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವ ಉದ್ದೇಶಕ್ಕೆ ಈ ಪ್ರದೇಶವನ್ನು ಬಳಸಿಕೊಳ್ಳಲಾಗುವುದು. ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯಿರುವಂತೆ ರಾಸುಗಳಿಗೂ ಮೇವು ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications