ಬೆಳಗಾವಿ: ಪತ್ನಿ, ಪುತ್ರನ ಜೊತೆ ಉದ್ಯಮಿ ಆತ್ಮಹತ್ಯೆ
ಬೆಳಗಾವಿ. ಮೇ,29: ಹಣಕಾಸಿನ ವಿಷಯದಲ್ಲಿ ವ್ಯಾಪಾರಿಯೊಬ್ಬರ ಕುಟುಂಬವೊಂದು ವಂಚನೆ ಮಾಡಿದ್ದರಿಂದ ಮನನೊಂದ ಹುಬ್ಬಳ್ಳಿ ಮೂಲದ ಉದ್ಯಮಿಯೊಬ್ಬರು ವಿಷ ಸೇವಿಸಿ, ಪತ್ನಿ ಮತ್ತು ಪುತ್ರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯ ಲಿಂಗರಾಜ ನಗರದ ನಿವಾಸಿ ಮಹಾಂತೇಶ ಮಲ್ಲಿಕಾರ್ಜುನ ಧವನ್(45), ಪತ್ನಿ ಶೋಭಾ (38) ಹಾಗೂ ಪುತ್ರ ಅಮೋಘ (12) ಬೆಳಗಾವಿಯ ಗಾಂಧಿನಗರದಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ.
ಏನಿದು ಘಟನೆ:
ಮಹಾಂತೇಶ ಅವರ ಮಗ ಅಮೋಘನಿಗೆ ಉಸಿರಾಟದ ಸಮಸ್ಯೆ ಇತ್ತು. ಮಗನಿಗೆ ಚಿಕಿತ್ಸೆ ನೀಡಲು ನಾವು ಗೋವಾಗೆ ಹೋಗುತ್ತಿದ್ದೇವೆ ಎಂದು ಮನೆಯವರಿಗೆ ತಿಳಿಸಿದ್ದ ಮಹಾಂತೇಶ ಕುಟುಂಬ ಬೆಳಗಾವಿಯ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ತಂಗಿದ್ದರು.
ರಾತ್ರಿ ವೇಳೆ ಶೋಭಾ ಸಹೋದರನಿಗೆ ಕರೆ ಮಾಡಿ ನಮ್ಮ ಬದುಕು ಮುಗಿಯಿತು ನಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಸಹೋದರ ಕೂಡಲೇ ಶೋಭಾರಿಗೆ ಕರೆ ಮಾಡಿದರೂ ಶೋಭಾ ಕರೆ ಸ್ವೀಕರಿಸಿಲ್ಲ ಎನ್ನಲಾಗಿದೆ. ಕೂಡಲೇ ಅವರು ಬೆಳಗಾವಿ ಕಂಟ್ರೋಲ್ ರೂಮಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಇನ್‌ಸ್ಪೆಕ್ಟರ್ ಸಂಜೀವ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸಂಜಿವ್ ಕುಮಾರ್ ತಂಗಿದ್ದ ಹೊಟೇಲ್‌ನ ಕೊಠಡಿಯ ಬಾಗಿಲನ್ನು ಬಡಿದರೂ ತೆರೆಯಲಿಲ್ಲ. ಬಾಗಿಲನ್ನು ಒಡೆದು ಒಳಗೆ ನೋಡಿದಾಗ ಮೂವರು ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆತ್ಮಹತ್ಯೆ ಮಾಡುವ ಮುನ್ನಾ ಮಹಾಂತೇಶ ಅವರು ಮರಣ ಪತ್ರ ಬರೆದಿದ್ದು ಮರಣಕ್ಕೆ ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿರುವ ಶ್ರೀ ಸಿಲ್ವರ್ ಪ್ಯಾಲೇಸ್ ಮಲೀಕರಾದ ನಿತಿನ್ ಪಟಾಡಿಯಾ, ಆದರ್ಶ ಪಟಾಡಿಯಾ ಮತ್ತು ಅವರ ತಂದೆ ಸುರೇಶ್ ಪಟಾಡಿಯಾ ಕಾರಣ ಎಂದು ಬರೆದ್ದಾರೆ. ಇವರು ಹಣಕಾಸಿನ ವಿಚಾರದಲ್ಲಿ ವಂಚನೆ ಮಾಡಿ ವಿಶ್ವಾಸದ್ರೋಹ ಮಾಡಿರುವ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿದ್ದೇವೆ ಎಂದು ಇಂಗ್ಲಿಷ್‌ನಲ್ಲಿ ಮರಣ ಪತ್ರ ಟೈಪ್ ಮಾಡಿ ಸಹಿ ಮಾಡಿದ್ದಾರೆ. [ಬೆಳಗಾವಿ : ಶಿಕ್ಷಕರಿಗೆ ರಜಾ, ಕಳ್ಳರಿಗೆ ಮಜಾ!]
ನಿತಿನ್ ಪಟಾಡಿಯಾ ನೀಡಿರುವ ಪೊಟ್ಯಾಶಿಯಂ ಸಯನೈಡ್‌ನಲ್ಲಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಅಂತ್ಯ ಸಂಸ್ಕಾರವನ್ನು ಹುಬ್ಬಳ್ಳಿಯಲ್ಲಿ ನೇರವರೆಸಿಸ ಎಂದು ಮರಣ ಪತ್ರದಲ್ಲಿ ತಿಳಿಸಿದ್ದಾರೆ.
ತಂದೆ ಮಕ್ಕಳು ನಾಪತ್ತೆ:
ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ನಿತಿನ್,ಆದರ್ಶ, ಸುರೇಶ್ ಪಟಾಡಿಯಾ ನಾಪತ್ತೆಯಾಗಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದು ಇವರ ಬಂಧನವಾದ ಬಳಿಕವಷ್ಟೇ ನಿಜವಾದ ಘಟನೆ ಏನು ಎಂಬುದು ಬಹಿರಂಗವಾಗಬೇಕಿದೆ.
ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಮಹಾಂತೇಶ ಅವರು ಸುಮಾರು 18 ವರ್ಷಗಳಿಂದ ಧಾರವಾಡದ ಬೇಲೂರಿನಲ್ಲಿ ಕೈಗಾರಿಕೆಗಳ ವಾಲ್ವ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಆರ್ಥಿಕವಾಗಿ ಸದೃಢವಾಗಿಯೇ ಇದ್ದ ಮಹಾಂತೇಶ ಅವರಿಗೆ ತಂದೆ ಮಕ್ಕಳು ದೊಡ್ಡ ಮೊತ್ತದ ಹಣವನ್ನು ನೀಡದೇ ವಂಚಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications