ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ಕೊಟ್ಟ ಲಕ್ಷ್ಮಣ ಸವದಿ!
ಬೆಳಗಾವಿ, ಏಪ್ರಿಲ್ 27; ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆಯಿಂದ ಅಸಮಾಧಾನಗೊಂಡು ಪಕ್ಷ ಬಿಟ್ಟು ಹಲವರು ಕಾಂಗ್ರೆಸ್ ಸೇರಿದ್ದಾರೆ. ಆದರೆ ಮಾಜಿ ಸಚಿವ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಥಣಿ ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಯಡಿಯೂರಪ್ಪ ಲಕ್ಷ್ಮಣ ಸವದಿ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದಾರೆ. ಜಗದೀಶ್ ಶೆಟ್ಟರ್ ರೀತಿ ಲಕ್ಷ್ಮಣ ಸವದಿ ಸೋಲಿಸಬೇಕು ಎಂದು ಬಹಿರಂಗಾಗಿ ಕರೆ ನೀಡಿದ್ದಾರೆ.

ಅಥಣಿಯಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, "ಇನ್ನೂ ವಿಧಾನ ಪರಿಷತ್ ಅವಧಿ 5 ವರ್ಷ 2 ತಿಂಗಳು ಇದ್ದರೂ ಸಹ ಲಕ್ಷ್ಮಣ ಸವದಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಶೆಟ್ಟರ್ ಸೋಲಿಸುವ ಜವಾಬ್ದಾರಿ ನನ್ನದು. ಲಕ್ಷಣ ಸವದಿ ಸೋಲಿಸುವ ಜವಾಬ್ದಾರಿ ನಿಮ್ಮದು" ಎಂದು ಜನರಿಗೆ ಕರೆ ನೀಡಿದ್ದರು.
ತಿರುಗೇಟು ನೀಡಿದ ಲಕ್ಷ್ಮಣ ಸವದಿ; ಯಡಿಯೂರಪ್ಪ ಮಾತಿಗೆ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. "ಈ ಬಗ್ಗೆ ಹೇಳಲು ಬಿ. ಎಸ್. ಯಡಿಯೂರಪ್ಪಗೆ ನೈತಿಕ ಹಕ್ಕಿಲ್ಲ. ಆ ಪಕ್ಷ ಬಿಎಸ್‌ವೈಎನ್ನು ಸಿಎಂ, ವಿಪಕ್ಷ ನಾಯಕರನ್ನಾಗಿ ಮಾಡಿತ್ತು. ಆದರೆ ಯಡಿಯೂರಪ್ಪ ಅಧಿಕಾರದ ಆಸೆಗಾಗಿ ಕೆಜೆಪಿ ಸ್ಥಾಪಿಸಿದ್ದರು" ಎಂದು ವಾಗ್ದಾಳಿ ನಡೆಸಿದರು.

"ನನ್ನನ್ನು ಸೋಲಿಸುವುದು, ಗೆಲ್ಲಿಸುವುದು ನನ್ನ ಕ್ಷೇತ್ರದ ಜನರ ಕೈಯಲ್ಲಿದೆ. ಕಾಂಗ್ರೆಸ್ಗೆ ಹೊಸದಾಗಿ ಸಾಕಷ್ಟು ಜನರು ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋದವರಿಂದ ಹಾನಿಯಾಗಲ್ಲ. ನನ್ನ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆಗೆ ಚುನಾವಣೆ ಬಳಿಕ ನಾನು ಉತ್ತರ ಕೊಡ್ತೇನೆ. ನನ್ನ ಕ್ಷೇತ್ರದ ಮತದಾರರು ಕೂಡ ತಕ್ಕ ಉತ್ತರ ಕೊಡುತ್ತಾರೆ" ಎಂದು ಲಕ್ಷ್ಮಣ ಸವದಿ ಹೇಳಿದರು.
ಯಡಿಯೂರಪ್ಪ ತಮ್ಮ ಭಾಷಣದಲ್ಲಿ, "ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ಬಿಜೆಪಿ ಸರ್ಕಾರ ರಚಿಸುವುದು ಅಷ್ಟೇ ಸತ್ಯ. 25 ರಿಂದ 30 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಗೆಲ್ಲುವುದು ಅಷ್ಟೇ ಸತ್ಯ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಹೇಳಿದ್ದರು.
ರಮೇಶ್ ಜಾರಕಿಹೊಳಿ ಅಥಣಿಯಲ್ಲಿ ತಮ್ಮ ಆಪ್ತ ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದರು. ಅಥಣಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. 2018ರ ಚುನಾವಣೆಯಲ್ಲಿ ಸೋತರು ಸಚಿವ ಸ್ಥಾನ ನೀಡಿ, ಎಂಎಲ್‌ಸಿ ಮಾಡಿದ ಬಿಜೆಪಿ ಬಿಟ್ಟು ಹೋಗಿದ್ದಾರೆ ಎಂಬುದು ಯಡಿಯೂರಪ್ಪ ಅಸಮಾಧಾನಕ್ಕೆ ಕಾರಣವಾಗಿದೆ.
ಸೋಲಿಸಲು ಪಣ; ಅಥಣಿಯ ಚುನಾವಣೆ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ಪ್ರತಿಷ್ಠೆಯಾಗಿದೆ. ಮಹೇಶ್ ಕುಮಟಳ್ಳಿ ಗೆಲ್ಲಿಸಿ, ಸವದಿ ಸೋಲಿಸಲು ರಮೇಶ್ ಜಾರಕಿಹೊಳಿ ತಂತ್ರ ರೂಪಿಸಿದ್ದಾರೆ. ಲಕ್ಷ್ಮಣ ಸವದಿ ರಾಜಕೀಯ ಜೀವನ ಅಂತ್ಯಗೊಳಿಸುವುದು ನನ್ನ ಗುರಿ ಎಂದು ಹೇಳಿ ಜಾರಕಿಹೊಳಿ ಅಖಾಡಕ್ಕೆ ಇಳಿಸಿದ್ದಾರೆ. ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲೆಯಲ್ಲಿ ಸಾಧ್ಯವಾದಷ್ಟು ಕ್ಷೇತ್ರಗಳನ್ನು ಬಿಜೆಪಿಗೆ ಗೆದ್ದುಕೊಡುವುದು ಅವರ ಮುಂದಿರುವ ಸವಾಲಾಗಿದೆ.
ಅಥಣಿಯಲ್ಲಿ ಮಂಗಳವಾರ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ, "ಲಕ್ಷ್ಮಣ ಸವದಿ ಯಡಿಯೂರಪ್ಪ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದರು. ಈಗ ಸವದಿಯನ್ನು ಅಥಣಿಯಲ್ಲಿ ಸೋಲಿಸಿ ಮನೆಗೆ ಕಳಿಸಲು ನಾನು ಸಿದ್ಧನಿದ್ದೇನೆ" ಎಂದು ಹೇಳಿದರು.












Click it and Unblock the Notifications