ಮಹಾಮೇಳಾವ್‌ಗೆ ಬ್ರೇಕ್: ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ ಎಂಇಎಸ್ ಕಾರ್ಯಕರ್ತರು
ಬೆಳಗಾವಿ, ಡಿಸೆಂಬರ್ 19: ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ವಿರೋಧಿಸುವ ಹಿನ್ನೆಲೆಯಲ್ಲಿ ಎಂಇಎಸ್ ಕಾರ್ಯಕರ್ತರು ಮಹಾಮೇಳಾವ್ ಹಮ್ಮಿಕೊಂಡಿದ್ದರು. ಇದಕ್ಕೆ ಪೋಲಿಸ್ ಇಲಾಖೆಯು ಬ್ರೇಕ್ ಹಾಕಿದೆ. ಇದರ ಬೆನ್ನಲ್ಲೇ ಎಂಇಎಸ್ ಪುಂಡರು ಸಾಮಾಜಿಕ ಮಾಧ್ಯಮಗಳಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ಪೋಲಿಸ್ ಇಲಾಖೆ ವಿರುದ್ಧ ಎಂಇಎಸ್ ಕಾರ್ಯಕರ್ತರು ಕೆಂಡ ಕಾರುತ್ತಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರನ್ನು ಬಂಧಿಸುವ ಮೂಲಕ ಕರ್ನಾಟಕ ಸರ್ಕಾರವು ಪ್ರಜಾಪ್ರಭುತ್ವದ ಹತ್ಯೆ ಮಾಡಿದೆ ಎಂಬ ಪೋಸ್ಟ್‌ಗಳನ್ನು ಹಾಕಿದ್ದಾರೆ.
ನಿರ್ಬಂಧದ ನಡುವೆಯು ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿದ್ದ ಮಹಾಮೇಳಾವ್‌ನಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಎಂಇಎಸ್ ಕಾರ್ಯಕರ್ತರು ಮತ್ತು ವಿವಿಧ ರಾಜಕೀಯ ಪಕ್ಷದ ಮುಖಂಡರನ್ನು ಜಿಲ್ಲಾ ಪೋಲಿಸರು ತಡೆದು ಚೆಕ್ ಪೋಸ್ಟ್‌ನಿಂದ ವಾಪಸ್ ಕಳುಹಿಸಿದ ಘಟನೆ ಜರುಗಿದೆ.

ಸೋಮವಾರ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಿಪ್ಪಾಣಿ ತಾಲೂಕಿನ ಕೊಗ್ನೋಳಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಎಂಇಎಸ್ ಕಾರ್ಯಕರ್ತರನ್ನು ಜಿಲ್ಲೆಗೆ ಪ್ರವೇಶಿಸದಂತೆ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಖಾಕಿ ಪಡೆ ತಡೆಯೊಡ್ಡಿದೆ. ಇದರಿಂದ ಕೋಪಗೊಂಡ ಎಂಇಎಸ್ ಕಾರ್ಯಕರ್ತರು ಬೆಳಗಾವಿ, ನಿಪ್ಪಾಣಿ, ಬೀದರ್, ಬಾಲ್ಕಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಘೋಷಣೆ ಕೂಗಿದ್ದಾರೆ. ಈ ಮೂಲಕ ಕರ್ನಾಟಕ ಸರ್ಕಾರ ಮತ್ತು ಪೋಲಿಸ್ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೇದಿಕೆ ತೆರವು
ಮಹಾಮೇಳಾವ್ ನಡೆಸಲು ಅನುಮತಿ ನೀಡಲಾಗಿರಲಿಲ್ಲ. ಆದರೂ ಸಹ ನಗರದ ವ್ಯಾಕ್ಸಿನ್ ಡಿಪೋ ಬಳಿ ಪೆಂಡಾಲ್ ಹಾಕಿ ಎಂಇಎಸ್ ಪುಂಡರು ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸಿದರು. ಈ ಮಾಹಿತಿ ಪಡೆದ ಎಡಿಜಿಪಿ ಅಲೋಕ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪೆಂಡಾಲ್ ಹಾಕುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಪೆಂಡಾಲ್ ನಿರ್ಮಿಸಲು ತಂದಿದ್ದ ಕುರ್ಚಿ, ಟೇಬಲ್ಗಳನ್ನು ಸೀಜ್ ಮಾಡಿ, ಯಾರು ಪೆಂಡಾಲ್ ನಿರ್ಮಿಸಲು ಹೇಳಿದ್ದಾರೋ ಅವರ ಸ್ಟೇಟ್‌ಮೆಂಟ್ ತೆಗೆದುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೆಕ್ಷನ್ 144 ಜಾರಿ
ನಗರದ ಟಿಳಕವಾಡಿ ಬಳಿಯ ವ್ಯಾಕ್ಸಿನ್ ಡಿಪೋ ಬಳಿ ನಿರ್ಬಂಧ ನಡುವೆಯೂ ಮಹಾಮೇಳಾವ್‌ಗೆ ತಯಾರಿ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಹಾಮೇಳಾವ್ ಆಯೋಜನೆ ಕುರಿತು ಟಿಳಕವಾಡಿ ಪೋಲಿಸ್ ಠಾಣೆಗೆ ನೀಡಲಾಗಿರುವ ಅರ್ಜಿಯನ್ನು ಸಹ ತಿರಸ್ಕರಿಸಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಸಭೆ ಸಮಾರಂಭ ಮಾಡಲು ಅವಕಾಶ ನೀಡಲಾಗುವುದಿಲ್ಲ, ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಡಿಜಿಪಿ ಅಲೋಕ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications