ನರೇಂದ್ರ ದಾಬೋಲ್ಕರ್ ಹತ್ಯೆಗೆ ಬೆಳಗಾವಿಯಿಂದ ಬೈಕ್ ಕಳವು!
ಬೆಳಗಾವಿ, ಜೂನ್ 13 : ಮಹಾರಾಷ್ಟ್ರದ ನರೇಂದ್ರ ದಾಬೋಲ್ಕರ್ ಹತ್ಯೆ ಮಾಡಲು ಬೆಳಗಾವಿಯಿಂದ ಬೈಕ್ ಕಳವು ಮಾಡಲಾಗಿತ್ತು ಎಂಬುದು ಎಸ್‌ಐಟಿ ತನಿಖೆ ವೇಳೆ ಬಹಿರಂಗವಾಗಿದೆ. 2013ರ ಆಗಸ್ಟ್ 20ರಂದು ದಾಬೋಲ್ಕರ್ ಹತ್ಯೆ ನಡೆದಿತ್ತು.
ಪತ್ರಕರ್ತೆ ಗೌರಿ ಲಂಕೇಶ್, ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ವಾಸುದೇವ ಸೂರ್ಯವಂಶಿಯನ್ನು ವಿಚಾರಣೆ ನಡೆಸುತ್ತಿದೆ. ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಬಗ್ಗೆ ಈತ ಮಾಹಿತಿ ನೀಡಿದ್ದಾನೆ.
ಮೆಕಾನಿಕ್ ಆಗಿದ್ದ ಸೂರ್ಯವಂಶಿ ಬೈಕ್ ಲಾಕ್ ತೆಗೆಯುವುದರಲ್ಲಿ ನಿಪುಣನಾಗಿದ್ದ. ಆದ್ದರಿಂದ, ಅವನಿಗೆ ಬೈಕ್ ಕಳವು ಮಾಡುವ ಹೊಣೆ ನೀಡಲಾಗಿತ್ತು. 2013ರ ಜನವರಿಯಲ್ಲಿ ಬೆಳಗಾವಿಗೆ ಬಂದಿದ್ದ ಸೂರ್ಯವಂಶಿ ಬೈಕ್ ಕಳವು ಮಾಡಿಕೊಂಡು ಹೋಗಿದ್ದ.

ಆರೋಪಿ ಕಳವು ಮಾಡಿದ ಮೊದಲ ಬೈಕ್ ಇದಾಗಿತ್ತು. ಇದನ್ನು ಬಳಸಿಕೊಂಡು ಆರೋಪಿಗಳು 2013ರ ಆಗಸ್ಟ್ 20ರಂದು ನರೇಂದ್ರ ದಾಬೋಲ್ಕರ್ ಹತ್ಯೆ ಮಾಡಿದ್ದರು. ಬಳಿಕ ಸೂರ್ಯವಂಶಿ ಹುಬ್ಬಳ್ಳಿ, ದಾವಣಗೆರೆಯಲ್ಲಿ ಬೈಕ್ ಕಳವು ಮಾಡಿದ್ದ. ಅವುಗಳನ್ನು ಗೌರಿ, ಕಲಬುರ್ಗಿ ಹತ್ಯೆಗೆ ಬಳಕೆ ಮಾಡಲಾಗಿತ್ತು.
ನರೇಂದ್ರ ದಾಬೋಲ್ಕರ್ ಹತ್ಯೆ ಮಾಡಲು ಬೆಳಗಾವಿಯಿಂದ ಬೈಕ್ ಕಳವು ಮಾಡಲಾಗಿತ್ತು ಎಂಬ ಮಾಹಿತಿಯನ್ನು ಮಹಾರಾಷ್ಟ್ರದ ಎಸ್‌ಐಟಿಗೆ ತಿಳಿಸಲಾಗಿದೆ. ಇದರಿಂದಾಗಿ ಹತ್ಯೆ ಪ್ರಕರಣದ ಮತ್ತೊಂದು ಆಯಾಮದ ತನಿಖೆ ಆರಂಭವಾಗುವ ನಿರೀಕ್ಷೆ ಇದೆ.
ಅಮೋಲ್ ಕಾಳೆ ಸಂಚು ರೂಪಿಸಿದ್ದು : ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್, ಎಂ.ಎಂ.ಕಲಬುರ್ಗಿ ಅವರ ಹತ್ಯೆಗೆ ಸಂಚು ರೂಪಿಸಿದ್ದು ಅಮೋಲ್ ಕಾಳೆ. ರಾಜ್ಯದ ಯುವಕರಿಂದಲೇ ಗೌರಿ, ಎಂ.ಎಂ.ಕಲಬುರ್ಗಿ ಅವರ ಹತ್ಯೆ ಮಾಡಿಸಲು ಕಾಳೆ ಗಣೇಶ್ ಮಿಸ್ಕಿನ್ ಮತ್ತು ಪ್ರವೀಣ್ ಚತುರ್‌ನನ್ನು ಸಂಪರ್ಕಿಸಿದ್ದ ಎಂಬ ಮಾಹಿತಿ ಸಿಕ್ಕಿದೆ.












Click it and Unblock the Notifications