ಅಧಿವೇಶನ : ಸೋಮವಾರ ಸದನದಲ್ಲಿ ಏನಾಯ್ತು?

ಬೆಳಗಾವಿ, ಡಿ.2 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಆರನೇ ದಿನದ ಕಲಾಪ ಆರಂಭವಾಗಿದೆ. ಎರಡು ದಿನಗಳ ಬಿಡುವಿನ ಬಳಿಕ ಆರಂಭವಾಗಿರುವ ಕಲಾಪದಲ್ಲಿ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲಾಗಿದೆ.

ಆರನೇ ದಿನದ ಕಲಾಪ ಆರಂಭವಾಗುತ್ತದ್ದಂತೆ ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಎಸ್.ಆರ್.ಹಿರೇಮಠ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಿದರು. "ದಾಖಲೆ ಇಲ್ಲದೇ ಹಿರೇಮಠ್ ಅವರು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಭ್ರಷ್ಟ, ಸಮಾಜದಿಂದ ನನ್ನನ್ನು ಬಹಿಷ್ಕರಿಸಬೇಕೆಂದು" ಹೇಳಿಕೆ ನೀಡಿದ್ದಾರೆ ಎಂದು ರಮೇಶ್ ಕುಮಾರ್ ಸದನಕ್ಕೆ ತಿಳಿಸಿದ್ದಾರೆ.

Belgaum winter session

ನನ್ನ ವಿರುದ್ಧ ಕೋರ್ಟ್ ನಲ್ಲಿ ಯಾವುದೇ ಪ್ರಕರಣವಿಲ್ಲ. ನಾನು ಶಾಸಕನಾಗಲು ಅರ್ಹತೆ ಪಡೆದಿದ್ದೇನೆ?. ನನ್ನ ವಿರುದ್ಧ ಹಿರೇಮಠ್ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ಹಕ್ಕುಚ್ಯುತಿ ನಿರ್ಣಯವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಹಕ್ಕು ಬಾದ್ಯತಾ ಸಮಿತಿಗೆ ಒಪ್ಪಿಸಿದ್ದಾರೆ. (ಹಿರೇಮಠ್ ವಿರುದ್ಧ ಕಾಂಗ್ರೆಸ್ ಶಾಸಕರ ಕೆಂಗಣ್ಣು!)

ಶೀಘ್ರವೇ ಪರಿಹಾರ ವಿತರಣೆ : ಎಂಡೋ ಸಲ್ಫಾನ್ ಸಂತ್ರಸ್ಥರಿಗೆ ಪರಿಹಾರ ನೀಡಲು ಕೈಗೊಂಡಿರುವ ಸಮೀಕ್ಷೆ ಕಾರ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ಣಗೊಂಡಿದ್ದು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಗತಿಯಲ್ಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ. ವಿರೋಧ ಪಕ್ಷದ ಸದಸ್ಯ ಗಣೇಶ್ ಕಾರ್ಣಿಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಂಡೋ ಪೀಡಿತರ ಬಗ್ಗೆ ಕೈಗೊಳ್ಳಲಾಗಿರುವ ಸರ್ವೇ ಕಾರ್ಯ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮುಗಿದ ಬಳಿಕ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು, ಇದಕ್ಕಾಗಿ 20 ಕೋಟಿ ರೂ. ಮೀಸಲಿಡಲಾಗುವುದು ಎಂದರು.

ಇ ತ್ಯಾಜ್ಯದಿಂದ ಲೋಹ ತೆಗೆಯಲು ಚಿಂತನೆ : ರಾಜ್ಯದಲ್ಲಿ ಉತ್ಪತ್ತಿಯಾಗುವ ಸಾವಿರಾರು ಟನ್ ಇ-ತಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಅದರಿಂದ ಚಿನ್ನ, ತಾಮ್ರಾ, ಬೆಳ್ಳಿ ಲೋಹಗಳನ್ನು ತೆಗೆಯಲು ಸರ್ಕಾರ ಪರಿಶೀಲನೆ ನಡೆಸಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದ್ದಾರೆ. ಶಿವಾನಂದ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 9118 ಟನ್ ಈ ತ್ಯಾಜ್ಯ ಸಂಗ್ರಹಣೆಯಾಗುತ್ತಿದೆ. ಇವುಗಳ ಸಂಸ್ಕರಣೆಗಾಗಿ ೩೦ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ವಿದೇಶಗಳಲ್ಲಿ ಈ ತಾಜ್ಯದಲ್ಲಿ ಅಡಗಿರುವ ಚಿನ್ನ, ಬೆಳ್ಳಿ, ತಾಮ್ರವನ್ನು ಬೇರ್ಪಡಿಸುತ್ತಾರೆ. ಇಂತಹ ತಂತ್ರಜ್ಞಾನ ಏಕೆ ಅಳವಡಿಸಿಕೊಳ್ಳಬಾರದು ಎಂದು ಪ್ರಶ್ನಿಸಿದರು. ಈ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವರು ತಿಳಿಸಿದರು.

ಆರ್ಥಿಕವಾಗಿ ಆಶಕ್ತವಾದ ಮಠಗಳಿಗೆ ಹಣ : ಸಮಾಜಕ್ಕೆ ಮಠಗಳು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಮತ್ತು ಅವುಗಳ ಆರ್ಥಿಕ ಸ್ಥಿತಿಗತಿಯನ್ನು ನೋಡಿ ಮಠಗಳಿಗೆ ಆರ್ಥಿಕ ಸಹಾಯ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಹಿಂದಿನ ಸರ್ಕಾರದಂತೆ ಮನಸೋಇಚ್ಛೆ ಮಠಗಳಿಗೆ ಅನುದಾನ ನೀಡುವುದಿಲ್ಲ. ಮಠಗಳ ಕಾರ್ಯಗಳನ್ನು ನೋಡಿ ಯಾವ ಜಾತಿಯ ಮಠವಾದರೂ ಅನುದಾನ ನೀಡುತ್ತೇವೆ ಎಂದು ವಿಧಾನಪರಿಷತ್ ಗೆ ಸಚಿವರು ಹೇಳಿದ್ದಾರೆ. ಮಠಗಳಿಗೆ ಅನುದಾನ ನೀಡುವ ಕುರಿತು ಬಿ.ಜೆ.ಪುಟ್ಟಸ್ವಾಮಿ ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು.

ಭಿತ್ತಿ ಪತ್ರವನ್ನು ಪ್ರಾಣಿಗಳು ಓದುತ್ತವೆಯೇ? : ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಸೋಮವಾರ ಚರ್ಚೆ ನಡೆಯಿತು. ಜೆಡಿಎಸ್ ನ ವೈ.ಎಸ್.ವಿ.ದತ್ತಾ, ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಚಿವ ರಮಾನಾಥ ರೈ, ಪ್ರಾಣಿ ಮತ್ತು ಅರಣ್ಯ ಸಂರಕ್ಷಣೆಗಾಗಿ ಸರ್ಕಾರ 28 ಕೋಟಿ ರೂ.ಗಳನ್ನು ಮೀಸಲಾಗಿಟ್ಟಿದೆ. 3 ಕೋಟಿ ವೆಚ್ಚದಲ್ಲಿ ಹೊಸ ಮೀಸಲು ಅರಣ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು. ದೀರ್ಘಾವಧಿ ಯೋಜನೆ ಜಾರಿ ಮತ್ತು ಭಿತ್ತಿಪತ್ರ ಮತ್ತು ಪ್ರಚಾರಕ್ಕಾಗಿ 10 ಕೋಟಿ ರೂ. ನೀಡಲಾಗಿದೆ ಎಂದರು. ಭಿತ್ತಿಪತ್ರವನ್ನು ಪ್ರಾಣಿಗಳು ಓದುತ್ತವೆಯೇ ಎಂದು ದತ್ತಾ ಪ್ರಶ್ನಿಸಿ ಸಚಿವರಿಗೆ ಇರುಸುಮುರುಸು ಉಂಟುಮಾಡಿದರು.

ಹೊಸ ತಾಲೂಕಿಗಾಗಿ ಜಟಾಪಟಿ : ಹೊಸ ತಾಲೂಕು ರಚನೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸದನದಲ್ಲಿ ಸೋಮವಾರ ಜಟಾಪಟಿ ನಡೆಯಿತು. ಜೇವರ್ಗಿ ತಾಲೂಕನ್ನು ವಿಭಜಿಸಿ ಯಮನಕರಡಿ ತಾಲೂಕು ರಚಿಸಬೇಕೆಂದು ಉಮೇಶ್ ಜಾದವ್ ಸದನಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೃಷ್ಣ ಭೈರೇಗೌಡ ಸರ್ಕಾರ ಗಮನ ಹರಿಸುತ್ತದೆ ಎಂದು ಒಂದು ಸಾಲಿನ ಉತ್ತರ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಗಮನಹರಿಸುತ್ತೇವೆ ಎಂಬ ಉತ್ತರ ಬೇಡ ಹೊಸ ತಾಲೂಕು ರಚನೆಗೆ ಕಾಲಮಿತಿ ನಿಗದಿ ಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸಚಿವರು ತಪ್ಪು ಉತ್ತರ ನೀಡಿದಾಗ : ಸಚಿವರು ಸದನಕ್ಕೆ ತಪ್ಪು ಉತ್ತರ ನೀಡಿ ಮುಜುಗರಕ್ಕೆ ಒಳಗಾದ ಪ್ರಸಂಗ ಸೋಮವಾರ ನಡೆಯಿತು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಾಸ ದೃಢೀಕರಣ ಪತ್ರವನ್ನು ಗ್ರಾಮ ಪಂಚಾಯಿತಿಗಳಿಂದ ನೀಡಲಾಗುತ್ತಿದೆಯೇ ಎಂದು ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಪ್ರಶ್ನಿಸಿದರು. ಕಂದಾಯ ಸಚಿವರ ಲಿಖಿತ ಹೇಳಿಕೆ ನೀಡಿದ ಕೃಷ್ಣಭೈರೇಗೌಡ ಇದು ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದರು. ಇದು ತಪ್ಪು ಉತ್ತರ ಎಂದು ಶಾಸಕ ಸಿ.ಟಿ.ರವಿ ಸದನದ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಹಿಂದೆ ಗ್ರಾಮ ಲೆಕ್ಕಿಗರು ವಾಸ ದೃಢೀಕರಣ ಪತ್ರ ನೀಡುತ್ತಿದ್ದರು ಸದ್ಯ ಅದನ್ನು ಪರಿಶೀಲನೆ ಮಾಡಿ ಎಂದು ಸಚಿವರಿಗೆ ಸೂಚನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+