ಈ ಬಾರಿ ಅದ್ಧೂರಿ ಕಿತ್ತೂರು ಉತ್ಸವ: ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ
ಬೆಳಗಾವಿ, ಅಕ್ಟೋಬರ್ 17: ನಗರದಲ್ಲಿ ಕಿತ್ತೂರು ಉತ್ಸವನ್ನು ಅದ್ಧೂರಿಯಾಗಿ ನಡೆಸಲು ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಿತ್ತೂರು ಉತ್ಸವ ಹಾಗೂ ಚನ್ನಮ್ಮನ ವಿಜಯೋತ್ಸವದ 200 ವರ್ಷಾಚರಣೆ ಹಿನ್ನೆಲೆಯಲ್ಲಿ ಇದೇ ಪ್ರಥಮ ಬಾರಿಗೆ ಬೆಳಗಾವಿ ನಗರದಲ್ಲಿ ಬೃಹತ್ ಸಂಗೀತ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ರಾಷ್ಟ್ರೀಯ ಗಾಯಕರಾದ ಕುನಾಲ್ ಗಾಂಜಾವಾಲಾ ಅವರು ಈ ಬಾರಿಯ ಕಿತ್ತೂರು ಉತ್ಸವದ ಹಿಂದಿನ ದಿನವಾದ ಅಕ್ಟೋಬರ್ 22 ರಂದು ಸಂಜೆ 4 ಗಂಟೆಗೆ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ರಸಮಂಜರಿ ನಡೆಸಿಕೊಡಲಿದ್ದಾರೆ.

ಅದೇ ವೇದಿಕೆಯಲ್ಲಿ ಕನ್ನಡದ ಖ್ಯಾತ ಹಾಸ್ಯ ಕಲಾವಿದ, ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾಗಿರುವ ಸಾಧು ಕೋಕಿಲ ಅವರು ಮತ್ತು ಜೀ ಕನ್ನಡ ತಂಡದವರು ಹಾಡು ಹಾಗೂ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಆಕ್ಸಿಜೆನ್ ಡ್ಯಾನ್ಸ್ ಗ್ರೂಪ್ ವತಿಯಿಂದ ನೃತ್ಯೋತ್ಸವ
ಆಕ್ಸಿಜೆನ್ ಡ್ಯಾನ್ಸ್ ಗ್ರೂಪ್ ವತಿಯಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರೇಖಾ ಹೆಗಡೆ ಮತ್ತು ತಂಡದವರಿಂದ ನೃತ್ಯ ರೂಪಕ ಹಾಗೂ ಪ್ರಕಾಶ್ ಚಂದನ್ನವರ ತಂಡದಿಂದ ಜೋಗತಿ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಲ್ಲದೇ ಫೈರ್ ಶೋ ಹಾಗೂ ಶಾಡೋ ಆ‌್ಯಕ್ಟ್ ವಿಶೇಷ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ.

ಎಲ್ಲರಿಗೂ ಉಚಿತ ಪ್ರವೇಶವಿದ್ದು, ಯುವಕ/ಯುವತಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಚೆನ್ನಮ್ಮನ ವಿಜಯ ಜ್ಯೋತಿಗೆ ಅದ್ಧೂರಿ ಸ್ವಾಗತ
ಈ ಬಾರಿ 200ನೇ ಚೆನ್ನಮ್ಮನ ವಿಜಯೋತ್ಸವ ಹಿನ್ನೆಲೆಯಲ್ಲಿ ಮೂರು ದಿನ ಅದ್ಧೂರಿಯಾಗಿ ಕಿತ್ತೂರು ಉತ್ಸವನ್ನು ಆಚರಿಸಲಾಗುತ್ತಿದೆ. ಈಗಾಗಲೇ ಬೆಳಗಾವಿಗೆ ಆಗಮಿಸಿದ ಚೆನ್ನಮ್ಮನ ವಿಜಯ ಜ್ಯೋತಿಯನ್ನು ಜಿಲ್ಲಾಡಳಿತ ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದೆ.
ಅಕ್ಟೋಬರ್ 1ರಂದು ಬೆಂಗಳೂರಿನ ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ವಿಜಯ ಜ್ಯೋತಿಯು ರಾಜ್ಯದ ವಿವಿಧೆಡೆ ಸಂಚರಿಸಿ ಖಾನಾಪುರ ಮಾರ್ಗವಾಗಿ ಬೆಳಗಾವಿಗೆ ಆಗಮಿಸಿತು. ನಿನ್ನೆ ಅಕ್ಟೋಬರ್ 16 ಸಂಜೆ ಭಾರೀ ಮಳೆಯ ನಡುವೆಯೂ ಬಹಳ ಸಂಭ್ರಮದಿಂದ ಜ್ಯೋತಿಯನ್ನು ಜಿಲ್ಲಾಡಳಿತ ಬರಮಾಡಿಕೊಂಡಿದೆ. ಗಣ್ಯರು ವಿಜಯ ಜ್ಯೋತಿಗೆ ಪೂಜೆ ಸಲ್ಲಿಸಿ, ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಇಲ್ಲಿಂದ ಚೆನ್ನಮ್ಮನ ಜನ್ಮಭೂಮಿ ಕಾಕತಿಗೆ ಜ್ಯೋತಿಯನ್ನು ಬೀಳ್ಕೊಡಲಾಗಿದೆ.












Click it and Unblock the Notifications