ಕನ್ನಡ v/s ಮರಾಠಿ ಕೇಸ್‌ಗೆ ಟ್ವಿಸ್ಟ್: ನಾವೂ ಕನ್ನಡಿಗರೇ, ಕೇಸ್ ವಾಪಸ್ ತಗೋತೀವಿ ಎಂದ ದೂರುದಾರರು
ಮರಾಠಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಬೆಳಗಾವಿಯಲ್ಲಿ ಕನ್ನಡಿಗ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಭಾಷಾ ಕಿಡಿ ಹೊತ್ತಿ ಉರಿಯುತ್ತಿದೆ. ಇಂದು ಕನ್ನಡ ವರ್ಸಸ್ ಮರಾಠಿ ಸ್ವರೂಪ ಪಡೆದುಕೊಂಡಿದ್ದು, ಕನ್ನಡಪರ ಹೋರಾಟಗಾರರು ಬೆಳಗಾವಿಗೆ ತೆರಳಿ ಬೃಹತ್ ಪ್ರತಿಭಟನೆಯೂ ಮಾಡುತ್ತಿದ್ದಾರೆ. ಈ ಹೊತ್ತಲ್ಲೇ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಬಸ್‌ನಲ್ಲಿ ಟಿಕೆಟ್ ವಿಚಾರಕ್ಕೆ ಶುರುವಾದ ವಾಗ್ದಾದವು ಭಾಷಾ ಜಗಳದ ಸ್ವರೂಪ ತಾಳಿದೆ. ಮರಾಠಿ ಮಾತನಾಡಲಿಲ್ಲ ಎಂದು ಕಂಡಕ್ಟರ್ ಮೇಲೆ ಕೆಲ ಪುಂಡರು ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಗಾಯಗೊಂಡ ಕಂಡಕ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಂದೆಡೆ ಕಂಡಕ್ಟರ್ ಮೇಲೆಯೇ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಲಾಗಿತ್ತು. ಇದು ಕೂಡ ಕನ್ನಡಿಗರನ್ನು ಮತ್ತಷ್ಟು ಕೆರಳಿಸಿತ್ತು. ಆದರೆ, ಇದೀಗ ದೂರುದಾರರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನಾವೂ ಕೂಡ ಕನ್ನಡಿಗರೇ, ಇದನ್ನು ಇಲ್ಲಿಗೆ ನಿಲ್ಲಿಸೋಣ ಎನ್ನುವ ಮೂಲಕ ಹೊಸ ತಿರುವು ನೀಡಿದ್ದಾರೆ.

ಬಸ್‌ನಲ್ಲಿ ಪ್ರಯಾಣಿಸಿದ್ದ ಬಾಲಕಿಯ ಪೋಷಕರು ಕಂಡಕ್ಟರ್ ಮೇಲೆಯೇ ಪೋಕ್ಸೋ ಕೇಸ್ ದಾಖಲಿಸಿದ್ದರು. ಈಗ ದಿಢೀರ್ ಉಲ್ಟಾ ಹೊಡೆದಿರುವ ಅವರು, ನಾವು ಕೂಡ ಕನ್ನಡಿಗರೇ, ಈ ವಿಚಾರವಾಗಿ ಕನ್ನಡಿಗರು ಹಾಗೂ ಮರಾಠಿಗರ ನಡುವೆ ದೊಡ್ಡ ಜಗಳ ನಡೆಯುತ್ತಿದೆ. ನಾವು ಕೂಡ ಕನ್ನಡಾಭಿಮಾನಿಗಳು, ಕನ್ನಡದ ಬಗ್ಗೆ ನಮಗೂ ಹೆಮ್ಮೆ ಇದೆ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಬಸ್‌ನಲ್ಲಿ ಟಿಕೆಟ್ ವಿಷಯಕ್ಕೆ ಆದ ಗಲಾಟೆಯನ್ನು ಕನ್ನಡ, ಮರಾಠಿ ಭಾಷೆ ಎಂದು ತಪ್ಪಾಗಿ ಬಿಂಬಿಸಿದ್ದಾರೆ. ನಾವು ಕಂಡಕ್ಟರ್ ವಿರುದ್ಧ ದಾಖಲಿಸಿದ್ದ ಪೋಕ್ಸೊ ಕೇಸ್ ವಾಪಸ್ ಪಡೆಯುತ್ತೇವೆ. ದಯವಿಟ್ಟು ಇದೆಲ್ಲ ಇಲ್ಲಿಗೇ ನಿಲ್ಲಲಿ ಎಂದು ಕೇಳಿಕೊಂಡಿದ್ದಾರೆ.
ನಮ್ಮ ಪುತ್ರ ಹಾಗೂ ಮಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದರು. ಆಗ ಬಸ್ನಲ್ಲಿ ಟಿಕೆಟ್ ವಿಚಾರಕ್ಕೆ ಗಲಾಟೆಯಾಗಿದೆ. ಅದನ್ನು ಕನ್ನಡ, ಮರಾಠಿಗರ ಗಲಾಟೆ ಅಂತ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಇದರಿಂದ ಮಹಾರಾಷ್ಟ್ರ, ಕರ್ನಾಟಕದ ನಡುವೆ ಜಗಳ ತಾರಕಕ್ಕೇರಿದೆ. ನಮ್ಮ ಭಾಷೆ ಮರಾಠಿ ಆಗಿದ್ದರೂ, ನಾವೂ ಕನ್ನಡಿಗರೇ. ಈ ಘಟನೆಯಿಂದ ನಮಗೂ ಬೇಸರವಾಗಿದೆ ಎಂದು ದೂರುದಾರರು ಸ್ಪಷ್ಟನೆ ನೀಡಿದ್ದಾರೆ.

ಕಂಡಕ್ಟರ್ ವಿರುದ್ಧ ದೂರು ದಾಖಲಿಸಿದ್ದನ್ನು ಖಂಡಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಸರ್ಕಾರಕ್ಕೆ ನೇರ ಎಚ್ಚರಿಕೆ ಕೊಟ್ಟಿದ್ದರು. ಕಂಡಕ್ಟರ್ ವಿರುದ್ಧ ದಾಖಲಾಗಿರುವ ಸುಳ್ಳು ಕೇಸ್ ಅನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಇಂದು ಬೆಳಗಾವಿಗೂ ತೆರಳಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರನ್ನು ವಶಕ್ಕೆ ಪಡೆದಿದ್ದು, ಬೆಳಗಾವಿ ನಿಗಿನಿಗಿ ಕೆಂಡವಾಗಿದೆ.
ಮರಾಠಿಯಲ್ಲಿ ಮಾತಾಡಲಿಲ್ಲ ಎಂಬ ಕಾರಣಕ್ಕೆ ಸಮಾಜಘಾತಕರಿಂದ ದೌರ್ಜನ್ಯಕ್ಕೆ ಒಳಗಾದ ಬಸ್ ನಿರ್ವಾಹಕ ಮಹದೇವಪ್ಪ ಅವರನ್ನು ಇಂದು ಆಸ್ಪತ್ರೆಯಲ್ಲಿ ಭೇಟಿ ಮಾಡಿದೆ. ಅವರ ಮೇಲಿನ ಸುಳ್ಳು ಕೇಸು ರದ್ದಾಗುವವರೆಗೂ ಕರವೇ ಸುಮ್ಮನಿರುವುದಿಲ್ಲ ಎಂದು ಟಿಎ ನಾರಾಯಣಗೌಡ ಕೂಡ ಎಚ್ಚರಿಸಿದ್ದಾರೆ.
ಬೆಳಗಾವಿಯಲ್ಲಿ ಬಸ್ ನಿರ್ವಾಹಕರು ಮರಾಠಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಡವಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಮರಾಠಿಗರು ನನಗೆ ಮತ ನೀಡಿ ಗೆಲ್ಲಿಸಿದ್ದಾರೆ ಎಂದು ನಿಮ್ಮ ಮಾಧ್ಯಮ ಹೇಳಿಕೆಯಲ್ಲಿ ಹೇಳಿದ್ದೀರಿ. ಕನ್ನಡಿಗರು ನಿಮಗೆ ಮತ ನೀಡಿಲ್ಲವೇ? ಅವರು ನಿಮ್ಮ ಗೆಲುವಿಗೆ ಕಾರಣರಲ್ಲವೇ? ಕೇವಲ ಮರಾಠಿಗರ ಮತಗಳಿಂದ ನೀವು ಗೆದ್ದಿದ್ದೀರೆ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications