ಕಿಡಿಕಾರಿ ಸಿದ್ದರಾಮಯ್ಯಗೆ ಲೆಟರ್ ಬರೆದ ರೆಬೆಲ್‌ಸ್ಟಾರ್
ಬೆಳಗಾವಿ, ಜುಲೈ, 08 : ಹಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಅಂಬರೀಶ್ ನಡುವಿನ ರಾಜಕೀಯ ಗುದ್ದಾಟ ಈಗ ಬೀದಿಗೆ ಬಂದಿದೆ,
ಒಂದೆಡೆ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದರೆ, ಇನ್ನೊಂದೆಡೆ ವಸತಿ ಸಚಿವ ಅಂಬರೀಶ್ ಮುಖ್ಯಮಂತ್ರಿ ಕಚೇರಿಗೆ ಬುಧವಾರ ಪತ್ರ ಬರೆದಿದ್ದು ಎಲ್ಲಾ ವಿಚಾರಗಳಲ್ಲೂ ಸಿದ್ದರಾಮಯ್ಯ ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ[ಸಚಿವ ಅಂಬರೀಷ್ ಅವರೇ ಏನ್ರೀ ಇದು ಉಡಾಫೆ ಮಾತು?]

ಪತ್ರದಲ್ಲಿ ಏನಿದೆ?
'2 ವರ್ಷದಿಂದ ನಿಮ್ಮಲ್ಲಿ ವಿಶ್ವಾಸ, ನಂಬಿಕೆ, ನಿಷ್ಠೆ ಇಟ್ಟಿದ್ದೆ. ನೀವು ವಹಿಸಿದ್ದ ಎಲ್ಲಾ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿಕೊಂಡು ಬಂದಿದ್ದೇನೆ. ಆದರೆ ತಮ್ಮಿಂದ ನನಗೆ ಯಾವುದೇ ನಿರೀಕ್ಷಿತ ಸಹಕಾರ ದೊರೆತಿಲ್ಲ. ಮಂಡ್ಯ ಜಿಲ್ಲಾ ರಾಜಕೀಯ ವಿಷಯಗಳಲ್ಲೂ ನನ್ನನ್ನು ನಿರ್ಲಕ್ಚ್ಯ ಮಾಡಿದ್ದೀರಿ.
ಮಂಡ್ಯ ಡಿಸಿಸಿ ಅಧ್ಯಕ್ಷ ಚುನಾವಣಾ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ನೇಮಕಾತಿ ವೇಳೆ ನನ್ನ ಮಾತಿಗೆ ಯಾವುದೇ ಮನ್ನಣೆ ದೊರೆತಿಲ್ಲ. ಈ ಬೆಳವಣಿಗೆಗೆ ನಿಮ್ಮ ಸಹಕಾರ ಇರದಿದ್ದಕ್ಕೆ ಬೇಸರವಾಗಿದೆ ಎಂದು ಅಂಬರೀಶ್ ಪತ್ರದಲ್ಲಿ ಬರೆದಿದ್ದಾರೆ.
ಸಿದ್ದರಾಮಯ್ಯ ಪ್ರತಿಕ್ರಿಯೆ
ಅಂಬರೀಶ್ ಪತ್ರಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂಬರೀಶ್ ಯಾಕೆ ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಇದು ಪಕ್ಷದ ಆಂತರಿಕ ವಿಚಾರ. ಇದನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ ಎಂದು ಬೆಳಗಾವಿಯಲ್ಲಿ ಹೇಳಿಕೆ ನೀಡುವ ಮೂಲಕ ಪತ್ರದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಈ ಪತ್ರ ವಿಚಾರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಪತ್ರ ಬರೆದು ಬೆಂಗಳೂರಿಗೆ ಸಚಿವ ಅಂಬರೀಶ್ ಆಗಮಿಸಿದ್ದು ಕರ್ನಾಟಕ ಕಾಂಗ್ರೆಸ್ ನಲ್ಲಿ ಎದ್ದಿರುವ ಭಿನ್ನಮತವನ್ನು ಹೈಕಮಾಂಡ್ ಯಾವ ರೀತಿ ಶಮನ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications