ಬೆಳಗಾವಿ ಜನರಿಗೆ ಮತ್ತೆ ಹುಲಿ ಕಾಟ, ಹಸು ಬಲಿ
ಬೆಳಗಾವಿ, ಜ.21 : ಬೆಳಗಾವಿ ಜನರು ಮತ್ತೆ ಹುಲಿಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಹಸುವೊಂದನ್ನು ಕೊಂದು ತಿಂದಿದೆ. ಹುಲಿಯನ್ನು ಹಿಡಿಯಲು ಬೋನು ಇಡಲು ಅರಣ್ಯ ಇಲಾಖೆ ಸಿಬ್ಬಂದಿ ನಿರ್ಧರಿಸಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ನರಭಕ್ಷಕ ಹುಲಿ ಗುಂಡಿಗೆ ಬಲಿಯಾಗಿತ್ತು. ನಂತರ ಖಾನಾಪುರ ತಾಲೂಕಿನ ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಕಾಣಿಸಿಕೊಂಡು ಮರೆಯಾಗಿತ್ತು. ಬುಧವಾರ ಮುಂಜಾನೆ ಮತ್ತೊಂದು ಹುಲಿ ಬಂದಿದ್ದು, ಹಸುವನ್ನು ಬಲಿ ಪಡೆದಿದೆ. [ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]

ಜಾಂಬೋಟಿ ಅರಣ್ಯ ಪ್ರದೇಶದ ಅಂಚಿನಲ್ಲಿರುವ ರಾಮಚಂದ್ರ ವಾಡ್ಕರ್ ಎಂಬುವವರ ಮನೆ ಬಳಿ ಬಂದಿದ್ದ ಹುಲಿ ಬುಧವಾರ ಮುಂಜಾನೆ ಹಸುವನ್ನು ಮನೆ ಮುಂದೆಯೇ ಕೊಂದು ತಿಂದಿದೆ. ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. [ಬೆಳಗಾವಿಯ ನರಭಕ್ಷಕ ಹುಲಿ ಗುಂಡೇಟಿಗೆ ಬಲಿ]
ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಬೋನನ್ನು ಇಟ್ಟು ಹುಲಿಯನ್ನು ಸೆರೆಹಿಡಿಯಲು ಯೋಜನೆ ರೂಪಿಸಿದ್ದಾರೆ. ಬೆಳ್ಳಂಬೆಳಗ್ಗೆ ಹುಲಿಯನ್ನು ಕಂಡ ಜನರು ಆತಂಕಗೊಂಡಿದ್ದು, ಅದನ್ನು ಹಿಡಿಯಿರಿ ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. [ಖಾನಾಪುರದಲ್ಲಿ ಮತ್ತೊಂದು ಹುಲಿ ಪ್ರತ್ಯಕ್ಷ]
ಕೇಂದ್ರ ಸರ್ಕಾರ 2014ರ ಹುಲಿ ಗಣತಿಯ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿತ್ತು. ಅದರ ಮಾಹಿತಿಯಂತೆ ಭಾರತದಲ್ಲಿ 2,226 ಹುಲಿಗಳು ಅಸ್ತಿತ್ವದಲ್ಲಿವೆಯಂತೆ. ಕರ್ನಾಟಕದಲ್ಲಿ ಹೆಚ್ಚು ಹುಲಿಗಳಿದ್ದು, 406 ಹುಲಿಗಳು ರಾಜ್ಯದಲ್ಲಿವೆ ಎಂದು ವರದಿ ಹೇಳಿತ್ತು.
ಅಂದಹಾಗೆ ಖಾನಾಪುರ ತಾಲೂಕಿನ ಕೊಂಗಳಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಡಿಸೆಂಬರ್ 29ರಂದು ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಗುಂಡಿಕ್ಕಿ ಕೊಂದು ಹಾಕಿದ್ದರು. ಡಿಸೆಂಬರ್ ತಿಂಗಳಿನಲ್ಲಿ ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ಈ ಹುಲಿ ಮಹಿಳೆಯನ್ನು ಕೊಂದಿತ್ತು.












Click it and Unblock the Notifications