ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಆಗಬೇಕೆಂದ ಆದಿತ್ಯ ಠಾಕ್ರೆಗೆ ಕರ್ನಾಟಕದ ಸಚಿವರ ಖಡಕ್ ತಿರುಗೇಟು
ಬೆಳಗಾವಿ, ಡಿಸೆಂಬರ್ 09: ಬೆಳಗಾವಿಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆ ಮತ್ತೆ ಕಾವು ಪಡೆದುಕೊಳ್ಳುತ್ತಿದ್ದು, ಶಿವಸೇನೆ ನಾಯಕ ಆದಿತ್ಯ ಠಾಕ್ರೆ ನೀಡಿರುವ ಹೇಳಿಕೆ ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಆಗಬೇಕು ಎಂದು ಆದಿತ್ಯ ಠಾಕ್ರೆ ಒತ್ತಾಯಿಸಿದ್ದು, ಶಿವಸೇನೆ ನಾಯಕನ ಮಾತಿಗೆ ಕರ್ನಾಟಕದ ಸಚಿವ ಖಡಕ್ ತಿರುಗೇಟು ನೀಡಿದ್ದಾರೆ.
ಬೆಳಗಾವಿ ಎಂದಿಗೂ ನಮ್ಮದು, ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲವೇ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಶಿವಸೇನೆ ನಾಯಕನಿಗೆ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಗಡಿ ವಿವಾದ ಇತ್ಯರ್ಥ ಆಗುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಬೆಳಗಾವಿ ನಮ್ಮದು, ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಬೆಳಗಾವಿ ಕರ್ನಾಟಕದ ಪ್ರಮುಖ ಭಾಗ. ಸುವರ್ಣ ಸೌಧ ಕಟ್ಟಿರುವ ಭಾಗ ಬಿಟ್ಟು ಕೊಡಲು ಸಾಧ್ಯವಾ? ಎಂದು ಪ್ರಶ್ನಿಸಿದರು.
ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶವನ್ನು ಕೇಂದ್ರಾಡಳಿತ ಮಾಡಲು ಸಾಧ್ಯವಿಲ್ಲ. ಇಂತಹ ಹೇಳಿಕೆಯನ್ನು ನಾವು ಒಪ್ಪಲ್ಲ, ಆದಿತ್ಯ ಠಾಕ್ರೆಗೆ ಮಾಹಿತಿ ಕೊರತೆ ಇರಬೇಕು. ಅವರು ಗೊತ್ತಿಲ್ಲ ಅಂದರೆ ಓದಿ ತಿಳಿದುಕೊಳ್ಳಲಿ, ಕನ್ನಡಿಗರು ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಆದಿತ್ಯ ಠಾಕ್ರೆ ಅವರಿಗೆ ತಿರುಗೇಟು ಕೊಟ್ಟರು.

ಶಿವಸೇನೆ ನಾಯಕ ಆದಿತ್ಯ ಠಾಕ್ರೆ ವಾದವೇನು..?
ಬೆಳಗಾವಿಯಲ್ಲಿ ವಾರ್ಷಿಕ ಸಮಾವೇಶ ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಗೆ ಕರ್ನಾಟಕ ಸರ್ಕಾರ ಅನುಮತಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ವಿಧಾನ ಭವನದ ಆವರಣದಲ್ಲಿ ಮಾತನಾಡಿದ ಆದಿತ್ಯ ಠಾಕ್ರೆ, ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯ ಸಂಭ್ರಮಾಚರಣೆ ನಡೆಯುತ್ತಿದೆ. ಮತ್ತೊಂದೆಡೆ, ಬೆಳಗಾವಿಯ ಪರಿಸ್ಥಿತಿಯನ್ನು ನೋಡಿ. ನೆರೆಯ ಈ ಪ್ರದೇಶದಲ್ಲಿ ಮರಾಠಿ ಭಾಷಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದಿದ್ದರು. ಅಲ್ಲದೇ ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಆಗಬೇಕು ಎಂದಿದ್ದರು.












Click it and Unblock the Notifications