ಸ್ಟೀಲ್ ಫ್ಲೈ ಓವರ್ ಸಭೆ, ಸರ್ಕಾರದಿಂದ ಡ್ರಾಮಾ : ಸುರೇಶ್ ಕುಮಾರ್

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25: ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಉದ್ದೇಶಿತ ಉಕ್ಕಿನ ಮೇಲ್ಸೇತುವೆ (ಸ್ಟೀಲ್ ಬ್ರಿಡ್ಜ್) ನಿರ್ಮಾಣ ಸಂಬಂಧ ಜನಪ್ರತಿನಿಧಿಗಳ ಜತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಕರೆದಿದ್ದ ಸಭೆ ದೊಡ್ಡ ಡ್ರಾಮಾ, ಈ ಯೋಜನೆ ನಿಷ್ಪ್ರಯೋಜಕ ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.

ಸಭೆ ನಂತರ ತಮ್ಮ ಪ್ರತಿಕ್ರಿಯೆಯನ್ನು ಸುರೇಶ್ ಕುಮಾರ್ ಅವರು ಫೇಸ್ ಬುಕ್ ನಲ್ಲಿ ವ್ಯಕ್ತಪಡಿಸಿದ್ದು, ಅವರ ಪುಟದಿಂದ ಆಯ್ದ ಸಾಲುಗಳು ಈ ಕೆಳಗಿನಂತಿದೆ:

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ರವರು ಬೆಂಗಳೂರಿನ ಶಾಸಕ-ಸಂಸದರ ಸಭೆಯನ್ನು, ವಿವಾದಕ್ಕೆ ಈಡಾಗಿರುವ ಸ್ಟೀಲ್ ಫ್ಲೈ ಓವರ್ ಕುರಿತು ಚರ್ಚಿಸಲು (?) ಕರೆದಿದ್ದರು.

ಆದರೆ, ಇದೊಂದು ಪ್ರಹಸನವಾಗಿ ಪರಿವರ್ತನೆಯಾಯಿತು. ಸ್ಟೀಲ್ ಫ್ಲೈ ಓವರ್ ಗೆ ಸಕಾರಣವಾಗಿ ವಿರೋಧಿಸುವವರಿಗೆ ಕ್ಷಣ-ಕ್ಷಣವೂ ಅಡ್ಡ ಹಾಕುತ್ತಿದ್ದರು.‌

Steel Flyover Meet : Suresh Kumar Terms meeting with Government as waste and Drama

ರಾಜ್ಯಸಭಾಸದಸ್ಯ ರಾಜೀವ್ ಚಂದ್ರಶೇಖರ್ ರವರು ಪ್ರಮುಖ ಅಂಶಗಳನ್ನು ಮಂಡಿಸುತ್ತಿದ್ದಾಗ "ನಿಮ್ಮ ಸಂಸ್ಥೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ನೀವು ಇಲ್ಲಿ ಮಾತನಾಡಬಾರದು" ಎಂದು ಜಾರ್ಜ್ ಸಾಹೇಬರು ಅಡ್ಡ ಹಾಕಿದರು. ಆಗ ನಾವೆಲ್ಲ, ಹಾಗಿದ್ದರೆ ಅವರನ್ನು ಈ ಸಭೆಗೆ ಏಕೆ ಕರೆದಿದ್ದೀರಿ? ಎಂದು ಕೇಳಿದಾಗ ಸಾಹೇಬರು ನಿರುತ್ತರರಾದರು.

ಲೋಕಸಭಾ ಸದಸ್ಯ ಪಿ ಸಿ ಮೋಹನ್ ರವರು ವಿಮಾನ ನಿಲ್ದಾಣಕ್ಕೆ ಇರುವ ಪರ್ಯಾಯ ಮಾರ್ಗ ಕುರಿತು ಬಹಳ ಚೆನ್ನಾಗಿ ವಿಷಯ ತಿಳಿಸಿದರು. ಆದರೆ, ಪ್ರತಿ ಮಾತಿಗೂ ಜಾರ್ಜ್ ರವರು ಪ್ರವೇಶಿಸಿ ಅಡ್ಡ ಹಾಕುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿತ್ತು.

ಪರ್ಯಾಯ ಪರಿಹಾರ: ನನ್ನ ಸರದಿ ಬಂದಾಗ ಸ್ಟೀಲ್ ಫ್ಲೈ ಓವರ್ ಬದಲಿಗೆ ಬಳ್ಳಾರಿ ರಸ್ತೆಯಲ್ಲಿ ನಾವು ಮಾಡಬಹುದಾದ ಪರ್ಯಾಯ ಪರಿಹಾರ ಕ್ರಮಗಳ ಬಗ್ಗೆ ಪ್ರಸ್ತಾಪಿಸುತ್ತಾ, ವಿಪರೀತ ವಾಹನ ಬಾಹುಳ್ಯ ಎದುರಿಸುತ್ತಿರುವ 'ವಿಂಡ್ಸರ್ ಮ್ಯಾನರ್ ಜಂಕ್ಷನ್' ಹಾಗೂ "ಕಾವೇರಿ ಜಂಕ್ಷನ್' ಗಳಲ್ಲಿ ಸಣ್ಣ ಫ್ಲೈ ಓವರ್ ಗಳನ್ನು ನಿರ್ಮಿಸಿದರೆ ಬಳ್ಳಾರಿ ರಸ್ತೆಯ ಬಹಳಷ್ಟು ಸಮಸ್ಯೆ ನಿವಾರಣೆ ಆಗುತ್ತದೆ ಎಂದು ನನ್ನ ಅನಿಸಿಕೆ ಎಂದು ಹೇಳುತ್ತಿದ್ದಂತೆಯೇ ಸಿಟ್ಟಿಗೆದ್ದ ಸಾಹೇಬರು ಮ್ಯಾಜಿಕ್ ಬಾಕ್ಸ್ ಎಂದು ಜೋರಾಗಿ (ಒಂದು ರೀತಿಯಿಂದ) ಕೂಗಿದರು.

ಜಾರ್ಜ್ ರವರ ಎಡಬಿಡದ ಈ ವರ್ತನೆಯಿಂದ ನಮ್ಮ ತಾಳ್ಮೆಯೂ ಕಟ್ಟೆ ಒಡೆಯಿತು. ಭಾರಿ ಗೊಂದಲದ ವಾತಾವರಣ ನಿರ್ಮಾಣವಾಗಿ, ಅವರು ನಮ್ಮ ಅನಿಸಿಕೆಗಳನ್ನೇ ಕೇಳಲು ತಯಾರಿಲ್ಲದ ಕಾರಣ ಅನಿವಾರ್ಯವಾಗಿ ಸಭೆಯಿಂದ ಹೊರಗೆ ಬರಬೇಕಾಯಿತು.

ಬಿಜೆಪಿಯ ಎಲ್ಲಾ ಶಾಸಕರು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದೆವು. ಮೊದಲೇ ಒಂದು ಮಾತು ಸ್ಪಷ್ಟಗೊಳಿಸಿದೆವು. "ನಾವ್ಯಾರೂ ನಗರದ ಅಭಿವೃದ್ಧಿ ಕಾರ್ಯಗಳಿಗೆ ವಿರುದ್ಧವಿಲ್ಲ. ಆದರೆ ಈ ಫ್ಲೈ ಓವರ್ ಬಗ್ಗೆ ಸಹಜವಾಗಿ ಎದ್ದಿರುವ ಸಂಗತಿಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ" ಎಂದು ಸ್ಪಷ್ಟ ಪಡಿಸಿದೆವು.

ಒಟ್ಟಿನಲ್ಲಿ ಇಂದಿನ ಸಭೆ ಹಿಂದೆ ರಾಜ್ಯದ ನೀರಾವರಿ ಸಚಿವರಾಗಿದ್ದ ದಿ. ನಂಜೇಗೌಡರ ಪ್ರಸಿದ್ಧ ಮಾತನ್ನು ನೆನಪಿಸಿತು. ಹಳ್ಳಿಯಲ್ಲಿ ಒಬ್ಬ ತನ್ನಕ್ಕನಿಗೆ ಹೇಳಿದನಂತೆ; " ಅಕ್ಕಾ, ನಾನು ಜಾತ್ರೆಗೆ ಹೋಗಬೇಕು ಎಂದು ಈಗಾಗಲೇ ನಿಶ್ಚಯಿಸಿದ್ದೇನೆ. ನೀನು ಹೋಗು ಎಂದರೂ ಹೋಗುತ್ತೇನೆ, ಬ್ಯಾಡ ಎಂದರೂ ಹೋಗುತ್ತೇನೆ. ಈಗ ಏನ್ಮಾಡಲಿ ಹೇಳು". ಹಾಗೆಯೇ ಸರಕಾರ ಶತಾಯಗತಾಯ ಸ್ಟೀಲ್ ಫ್ಲೈ ಓವರನ್ನು ನಿರ್ಮಿಸಿಯೇ ತೀರುತ್ತೇನೆ. ಈಗ ಏನು ಮಾಡಲಿ ಎಂದು ಕೇಳುವುದಕ್ಕೆ ನಮ್ಮೀ ಸಭೆ ಕರೆದಂತಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP spokesperson and MLA S Suresh Kumar said the entire meeting was a "drama" which was being played for the public gallery by the government. The Congress have decided upon the date, the time and are not ready to reason over the construction of the steel bridge. What is the point of such a meeting?
Please Wait while comments are loading...