ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರವೀಂದ್ರನಾಥ್ ಪರ ನಿಂತ ಮೀಸಲು ಪೊಲೀಸ್ ಪಡೆ

By Prasad
|
Google Oneindia Kannada News

ಬೆಂಗಳೂರು, ಮೇ 28 : ಕಾಫಿ ಶಾಪ್ ನಲ್ಲಿ ಯುವತಿಯ ಅಶ್ಲೀಲ ಫೋಟೋ ತೆಗೆದು ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಎಡಿಜಿಪಿ ರವೀಂದ್ರನಾಥ್ ಅವರನ್ನು ವರ್ಗಾವಣೆ ಮಾಡಿದ್ದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರವೀಂದ್ರನಾಥ್ ಅವರ ಪರವಾಗಿ ಕೋರಮಂಗಲದಲ್ಲಿ ಬೀದಿಗಿಳಿದು ಬುಧವಾರ ಪ್ರತಿಭಟಿಸುತ್ತಿರುವ ಕೆಎಸ್ಆರ್‌ಪಿ ಸಿಬ್ಬಂದಿ, ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ರವಿಕಾಂತೇಗೌಡ ಮುಂತಾದ ಹಿರಿಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ರವೀಂದ್ರನಾಥ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

KSRP stands in support of ADGP Ravindranath

ಔರಾದ್ಕರ್ ಮತ್ತು ರವಿಕಾಂತೇಗೌಡ ವಿರುದ್ಧ ಧಿಕ್ಕಾರ ಕೂಗಿದ ಕೆಎಸ್ಆರ್‌ಪಿ ಸಿಬ್ಬಂದಿ, ರವೀಂದ್ರನಾಥ್ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಇಬ್ಬರೂ ಕೂಡಲೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪ್ರತಿಭಟನೆ ತೀವ್ರಗೊಂಡು ಪೊಲೀಸ್ ವಾಹನಕ್ಕೆ ಕಲ್ಲು ತೂರಿದ್ದಲ್ಲದೆ, ಟೈರುಗಳಿಗೆ ಬೆಂಕಿ ಹಚ್ಚಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು.

ಸ್ಥಳಕ್ಕೆ ಡಿಸಿಪಿ ಹರ್ಷ, ಡಿಐಜಿ ಸೋನಿಯಾ ನಾರಂಗ್, ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್ ಮುಂತಾದವರು ಆಗಮಿಸಿ ಕೆಎಸ್ಆರ್‌ಪಿ ಸಿಬ್ಬಂದಿಗಳ ಆಕ್ರೋಶ ಶಮನ ಮಾಡಲು ಯತ್ನಿಸಿದರು. ಆದರೆ, ಕೆಎಸ್ಆರ್‌ಪಿ ಸಿಬ್ಬಂದಿ ಯಾವುದೇ ಮನವಿಗೂ ಬಗ್ಗದಿದ್ದರಿಂದ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿತ್ತು. [ಫೋಟೋ ಕ್ಲಿಕ್ಕಿಸಿದ ಎಡಿಜಿಪಿ]

ರಸ್ತೆ ಮಧ್ಯದಲ್ಲಿಯೇ ಕೆಎಸ್ಆರ್‌ಪಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದುದರಿಂದ, ಕೋರಮಂಗಲದಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿತ್ತು, ಸಾರ್ವಜನಿಕರು ಪರದಾಡುವಂತಾಯಿತು. ವಾಹನ ಸಂಚಾರ ಸುಗಮಗೊಳಿಸಲು ಪೊಲೀಸರು ಭಾರೀ ಹರಸಾಹಸ ಪಡುತ್ತಿದ್ದರು. ವಾಹನ ಸಂಚಾರದ ದಿಕ್ಕನ್ನು ಕೂಡ ಬದಲಾಯಿಸಲಾಯಿತು.

ರವೀಂದ್ರನಾಥ್ ಅವರ ವಿರುದ್ಧ ಹೂಡಲಾಗಿರುವ ದೂರನ್ನು ಹಿಂಪಡೆಯಬೇಕು ಮತ್ತು ಅವರನ್ನು ಕೆಎಸ್ಆರ್‌ಪಿಯಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಸಿಬ್ಬಂದಿ ಆಗ್ರಹಿಸುತ್ತಿದ್ದಾರೆ. ಪೊಲೀಸರಿಗೆ ಕಗ್ಗಂಟಾಗಿರುವ ಈ ಪ್ರಕರಣವನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಯುತ್ತಿದೆ.

ಈ ಪ್ರಕರಣ ಇತ್ಯರ್ಥವಾಗುವವರೆಗೆ, ನಿರಪರಾಧಿಯಾದ ತನ್ನನ್ನು ಬಂಧಿಸಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ರವೀಂದ್ರನಾಥ್ ಅವರು ಔರಾದ್ಕರ್ ಅವರನ್ನು ಒತ್ತಾಯಿಸಿದ್ದಾರೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಒಳಗೊಳಗೇ ಕುದಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಿರುವ ಈ ಪ್ರಕರಣ ಭಾರೀ ಕಗ್ಗಂಟಾಗಿ ಪರಿಣಮಿಸಿದೆ.

English summary
Karnataka State Reserve Police personnel have stood in support of ADGP Ravindranath, who has been accused of taking indecent photo of a woman in a coffee shop. KSRP demanding resignation of Raghavendra Auradkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X