ಬಳ್ಳಾರಿಯಲ್ಲಿ ಅಕ್ಷಯ ತೃತೀಯದಂದು ನಾಲ್ಕು ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಬಳ್ಳಾರಿ, ಏಪ್ರಿಲ್ 28: ಲಾಕ್ ಡೌನ್ ನಡುವೆಯೂ ಬಾಲ್ಯ ವಿವಾಹ ಮಾಡಲು ಮುಂದಾಗಿರುವ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆ ಒಂದೇ ದಿನ ಬಳ್ಳಾರಿಯಲ್ಲಿ ನಾಲ್ಕು ಜೋಡಿ ಬಾಲ್ಯ ವಿವಾಹ ಪತ್ತೆಯಾಗಿದೆ.
ನಿನ್ನೆ ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಬಳ್ಳಾರಿ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ನಡೆಯುತ್ತಿದ್ದ ಎರಡು ನಿಶ್ಚಿತಾರ್ಥ ಕಾರ್ಯಕ್ರಮ ಹಾಗೂ ಎರಡು ಬಾಲ್ಯ ವಿವಾಹವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಡೆದಿದೆ.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಮೂಲದ 17 ವರ್ಷದ ಯುವತಿಗೆ ಬೆಳಗ್ಗೆ 5 ಗಂಟೆಗೆ ತರಾತುರಿಯಲ್ಲಿ ನಿಶ್ಚಿತಾರ್ಥ ಮಾಡಿ ಮುಗಿಸಿದ್ದಾರೆ. ಇನ್ನೊಂದೆಡೆ ಬಳ್ಳಾರಿ ಗಾಂಧಿನಗರ ಮೂಲದ 16 ವರ್ಷದ ಬಾಲಕಿಗೆ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದ ಸಮಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ರಕ್ಷಿಸಿದ್ದಾರೆ. ಈ ಇಬ್ಬರು ಬಾಲಕಿಯರೊಂದಿಗೆ ಮದುವೆಯಾಗಲು ಮುಂದಾಗಿದ್ದವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದರೊಂದಿಗೆ ಜಿಲ್ಲೆಯ ಸಂಡೂರು ತಾಲೂಕು ಹಾಗೂ ಬಳ್ಳಾರಿ ತಾಲೂಕಿನ ಯಾಳ್ಪಿ ಗ್ರಾಮದಲ್ಲಿ ನಡೆಯಬೇಕಿದ್ದ ಎರಡು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹಾಗೂ ಬಳ್ಳಾರಿ ಗಾಂಧಿನಗರ ಮೂಲದ ಇಬ್ಬರು ಬಾಲಕಿಯರನ್ನು ರಕ್ಷಣೆ ಮಾಡಿ ನಗರದ ಶಾಂತಿಧಾಮದಲ್ಲಿ ಇರಿಸಲಾಗಿದೆ. ಮದುವೆ ಮಾಡಲು ಮುಂದಾಗಿದ್ದ ಕುಟುಂಬಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications