ಹೊಸಪೇಟೆಯಲ್ಲಿ ಅಪರೂಪದ ಘಟನೆ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ!
ಹೊಸಪೇಟೆ, ಡಿಸೆಂಬರ್ 11: ಆ ದಂಪತಿ ಮದುವೆಯಾಗಿ ಆರು ವರ್ಷಗಳೇ ಕಳೆದಿದ್ದವು. ಮಕ್ಕಳಿಲ್ಲದೇ ಕೊರಗುತ್ತಿದ್ದ ಕುಟುಂಬದಲ್ಲಿ ಈಗ ಸಂತಸ ಮನೆ ಮಾಡಿದೆ. ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡಿದ್ದು, ಮಹಾ ತಾಯಿ ಮಡಿಲಿಗೆ ಮೂರು ಪುಟ್ಟ ಕಂದಮ್ಮಗಳು ನಗುತಿವೆ.
ಶುಕ್ರವಾರ ಹೆರಿಗೆ ನೋವಿನಿಂದ ಉಮಾ ಎಂಬ ಮಹಿಳೆ ವಿಜಯನಗರ ಜಿಲ್ಲೆ ಹೊಸಪೇಟೆಯ ಅಂಜುಮಾನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ತ್ರಿವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ. ಹೊಸಪೇಟೆ ಮೂಲದ ಉಮಾ ಎಂಬುವವರು ಶುಕ್ರವಾರ ಮಧ್ಯಾಹ್ನ 1 ಗಂಟೆ ವೇಳೆಗೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಂಜುಮಾನ್ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಅತಿಕಾಹಿನ, ಡಾ. ಸುರೇಖಾ, ಡಾ. ಬಾಲಚಂದ್ರನ್ ಯಶಸ್ವಿ ಹೆರಿಗೆ ಮಾಡಿಸಿದ್ದು ಅಪರೂಪದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ವಿ.ನಾಗಲಾಪುರದ ಪ್ರಕಾಶ ಮತ್ತು ಉಮಾ ದಂಪತಿಗೆ ಮದುವೆಯಾಗಿ ಐದರಿಂದ ಆರು ವರ್ಷಗಳೆ ಕಳೆದಿದ್ದವು. ಹಾಗಿದ್ದರೂ ಮಕ್ಕಳು ಇರಲಿಲ್ಲ. ಮಕ್ಕಳಿಲ್ಲದೇ ಕೊರಗುತ್ತಿದ್ದ ದಂಪತಿಗೆ ಈಗ ಮೂವರು ಮಕ್ಕಳು ಜನಿಸಿರುವುದು ಸಂತಸ ಮೂಡಿಸಿದೆ.

ಹೊಸಪೇಟೆಯಲ್ಲಿ ಅಪರೂಪದ ಘಟನೆ
ಮಕ್ಕಳ ತೂಕ ಕಡಿಮೆ:
ಶುಕ್ರವಾರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಉಮಾ ಅವರು ಆರೋಗ್ಯವಾಗಿದ್ದಾರೆ. ಆದರೆ ಮಕ್ಕಳ ತೂಕದಲ್ಲಿ ಕಡಿಮೆ ಇರುವುದು ಗೊತ್ತಾಗಿದೆ. ಇವರು ಬಡ ಕುಟುಂಬಕ್ಕೆ ಸೇರಿದ ಹಿನ್ನೆಲೆ ಮಕ್ಕಳಿಗೆ ಹೆಚ್ಚುವರಿ ಚಿಕಿತ್ಸೆ ನೀಡುವುದಕ್ಕಾಗಿ ಬಳ್ಳಾರಿಯ ಓಪಿಡಿಗೆ ಕಳುಹಿಸಿ ಕೊಡಲಾಗಿದೆ. ಉಮಾ ಅವರಿಗೆ ಜನಿಸಿದ ತ್ರಿವಳಿ ಮಕ್ಕಳಲ್ಲಿ ಒಂದು ಮಗು 1 ಕೆಜಿ 800 ಗ್ರಾಂ, ಇನ್ನೊಂದು ಮಗು 1 ಕೆಜಿ 700 ಗ್ರಾಂ ಹಾಗೂ ಮತ್ತೊಂದು ಮಗು 1 ಕೆಜಿ 200 ಗ್ರಾಂ ಇದೆ ಎಂದು ಅಂಜುಮಾನ್ ಆಸ್ಪತ್ರೆ ವೈದ್ಯೆ ಅತಿ ಕಾಹಿನ್ ತಿಳಿಸಿದ್ದಾರೆ.
ಅಂಜುಮಾನ್ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ:
ಸದ್ಯ ತೂಕ ಕಡಿಮೆ ಇರುವುದರಿಂದ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ನೀಡುವುದಕ್ಕಾಗಿ ಬಳ್ಳಾರಿಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ ತ್ರಿವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಉಮಾ ಅವರು, ಹೊಸಪೇಟೆಯ ಅಂಜುಮಾನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವರ ವರ:
ಬಳ್ಳಾರಿ ಮೂಲದ ಉಮಾ ಮತ್ತು ಪ್ರಕಾಶ್ ದಂಪತಿ ಆರು ವರ್ಷಗಳ ಹಿಂದೆ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. ಇಷ್ಟು ವರ್ಷ ಕಳೆದರೂ ದಂಪತಿಗೆ ಮಕ್ಕಳಿಲ್ಲ ಎಂಬ ನೋವು ಕಾಡುತ್ತಿತ್ತು. ಇದರ ಮಧ್ಯೆ ಶುಕ್ರವಾರ ಏಕಕಾಲಕ್ಕೆ ಮೂವರು ಮಕ್ಕಳು ಜನಿಸಿರುವುದು ನಮಗೆ ಸಂತಸವಾಗಿದೆ. ಆದರೆ ಮಕ್ಕಳ ತೂಕ ಕಡಿಮೆಯಿರುವುದು ಸ್ವಲ್ಪ ಆತಂಕ ಮೂಡಿಸಿದೆ. ಮೂರು ಮಕ್ಕಳು ಆರೋಗ್ಯವಾಗಿರಲಿ. ಇದು ದೇವರೇ ನೀಡಿದ ವರ ಎನ್ನುವುದು ಕುಟುಂಬ ಸದಸ್ಯರ ಮಾತಾಗಿದೆ.












Click it and Unblock the Notifications