19 ಶಾಸಕರನ್ನು ಕಾಪಾಡ್ಕೊಳ್ಳಿ ಮೊದ್ಲು, ಆಮೇಲೆ ಬೇರೆಯವ್ರ ಬಗ್ಗೆ ಮಾತಾಡಿ: HDKಗೆ ಸಚಿವ ನಾಗೇಂದ್ರ ಹೀಗೆ ಹೇಳಿದ್ದೇಕೆ?
ಬಳ್ಳಾರಿ, ಅಕ್ಟೋಬರ್, 25: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷದಲ್ಲಿರುವ 19 ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ, ಆದರೆ ನಮ್ಮ ಕೆಲಸದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಚಿವ ನಾಗೇಂದ್ರ ಬಳ್ಳಾರಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.
CM Siddaramaiah: ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ಖಳನಾಯಕ: ಸಿದ್ದರಾಮಯ್ಯ ಹೇಳಿದಿಷ್ಟು!
ಕೃತಕ ಅಭಾವ ಸೃಷ್ಟಿ ಮಾಡುವ ಮೂಲಕ ಕರೆಂಟ್ ಖರೀದಿ ಮಾಡುತ್ತಿದ್ದಾರೆ ಎಂದಿದ್ದ ಕುಮಾರಸ್ವಾಮಿಗೆ ಸಚಿವ ನಾಗೇಂದ್ರ ತಿರುಗೇಟು ನೀಡಿದ್ದಾರೆ. ಮಾಜಿ ಸಿಎಂ ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಇರುವ19 ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ, ರಾಜ್ಯಾಧ್ಯಕ್ಷರ ಗೊಂದಲವಿದೆ. ಹೀಗೆ ಅವರ ಪಕ್ಷದಲ್ಲೇ ಹಲವು ಸಮಸ್ಯೆಗಳಿವೆ. ಅದನ್ನು ಬಗೆಹರಿಸುವುದು ಬಿಟ್ಟು ಬೇರೆ ಏನೇನೋ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಕೃತಕ ಅಭಾವ ಹೇಗೆ ಸೃಷ್ಟಿ ಮಾಡುತ್ತಾರೆ? ಕರೆಂಟ್ ಹಿಡಿದಿಟ್ಟುಕೊಳ್ಳವಷ್ಟು ಸಣ್ಣ ವಸ್ತುವೇ?, ಜಲ, ಸೋಲಾರ್, ವಿಂಡ್ ಪವರ್ ಯಾವುದೇ ವಿದ್ಯುತ್ ಹಿಡಿದಿಟ್ಟುಕೊಳ್ಳಲು ಆಗಲ್ಲ, ಅದನ್ನು ಕೊಡಲೇಬೇಕು. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾದವರು. ಅವರಿಗೆ ಅನುಭವ ಇದೆ. ಹೀಗೆ ಮಾತನಾಡಬಾರದು ಎಂದರು.

ಸರ್ಕಾರ ಸ್ಪೀಡಾಗಿ ನಡೆಯುತ್ತಿದೆ, ಅದಕ್ಕೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಮೇಘಾಲಯ, ಹಿಮಾಚಲ ಪ್ರದೇಶದಿಂದ ವಿದ್ಯುತ್ ಖರೀದಿ ಮಾಡಿ ಜನರಿಗೆ ವಿದ್ಯುತ್ ಕೊಡುತ್ತೇವೆ. ರೈತರಿಗೆ ತೊಂದರೆಯಾಗುತ್ತಿರುವ ಹಿನ್ನಲೆ ಸಿಎಂ ಸಿದ್ದರಾಮಯ್ಯ ಅವರು ವಿದ್ಯುತ್ ಖರೀದಿಗೆ ಮುಂದಾಗಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ವಿರುದ್ಧ ಎಚ್‌ಡಿಕೆ ಆಕ್ರೋಶ
ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ? ಅದರಲ್ಲಿ ಬೇನಾಮಿಗಳು ಎಷ್ಟು? ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆ? ಅವೆಲ್ಲಾ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆಯ ನಾಟಕವೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಬಹಿರಂಗ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿರುವ ಮಾತಿಗೆ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕನಕಪುರ ತಾಲ್ಲೂಕು ರಾಮನಗರ ಕ್ಷೇತ್ರದಲ್ಲಿಯೇ ಉಳಿಯಬೇಕು ಎಂದು ಹೇಳಿದ್ದಾರೆ.
ಖಜಾನೆ ತುಂಬಿಸಿಕೊಳ್ಳುವ ಹುನ್ನಾರ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ ಸೇರಿಸುವೆ ಎಂದು ನೀಡಿರುವ ಹೇಳಿಕೆ ಸರಿಯಲ್ಲ. ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಅಷ್ಟೇ ಅಲ್ಲ ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು ಆಗುವುದಿಲ್ಲ, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ ಎನ್ನುವ ಇವರು. ಇಷ್ಟು ದಿನ ಶಾಸಕರಾಗಿ, ಸಚಿವರಾಗಿ ಉಪ ಮುಖ್ಯಮಂತ್ರಿ ಆಗಿ ಮಾಡಿದ್ದೇನು? ತಮ್ಮ ಜೇಬು ತುಂಬಿಸಿಕೊಂಡಿದ್ದು, ತಮ್ಮ ಮನೆಯನ್ನು ಉದ್ಧಾರ ಮಾಡಿಕೊಂಡಿದ್ದಷ್ಟೇ. ಇಷ್ಟಕ್ಕೂ ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ? ಅದರಲ್ಲಿ ಬೇನಾಮಿಗಳು ಎಷ್ಟು? ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆ? ಅವೆಲ್ಲಾ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆಯ ನಾಟಕ ಎಂದು ಕುಟುಕಿದರು.
ಈಗಾಗಲೇ ಕನಕಪುರಕ್ಕೆ ಒಂದು ಮೆಡಿಕಲ್ ಕೊಟ್ಟಿದ್ದರೂ ರಾಮನಗರ ಮೆಡಿಕಲ್ ಕಾಲೇಜನ್ನು ಕದ್ದು ಒಯ್ಯವುದರ ಹಿಂದೆಯೂ ಇದೇ ದುಷ್ಟ ತಂತ್ರ ಅಡಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಶ್ನಿಸಿದ್ದಾರೆ.
ಕನಕಪುರಕ್ಕೆ 52 ಕೀ.ಮೀ. ದೂರದಲ್ಲಿದೆ ಬೆಂಗಳೂರು. 25 ಕೀ.ಮೀ. ದೂರದಲ್ಲಿದೆ ರಾಮನಗರ. ಜನರಿಗೆ ಯಾವುದು ಅನುಕೂಲ? ದಿನ ಬೆಳಗಾದರೆ ಕನಕಪುರದವರು ಬೆಂಗಳೂರಿಗೆ ಅಲೆಯಬೇಕೆ? ಉಪ ಮುಖ್ಯಮಂತ್ರಿಗಳ ಒಳ ಉದ್ದೇಶದ ಬಗ್ಗೆ ಅನೇಕ ಅನುಮಾನಗಳು ಸಹಜವಾಗಿಯೇ ಮೂಡುತ್ತವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
2006-2007ರಲ್ಲಿ ಕನಕಪುರ ಹೇಗಿತ್ತು ಎಂದು ಡಿಕೆಶಿ ಅವರು ನೆನಪು ಮಾಡಿಕೊಳ್ಳಬೇಕು. ಆಗಲೇ ಪಟ್ಟಣದ ಡಬಲ್ ರಸ್ತೆ ನಿರ್ಮಾಣ, ಕನಕಪುರ ಹೆಬ್ಬಾಗಿಲಿನಲ್ಲಿರುವ ಸೇತುವೆ ನಿರ್ಮಾಣಕ್ಕೆ ಯೋಜನೆ ಕೊಟ್ಟವನು ನಾನು. ಸಂಗಮದಲ್ಲಿ ಪ್ರವಾಹ ಬಂದಾಗಲೆಲ್ಲಾ ಅನೇಕರು ಹಗ್ಗ ಕಟ್ಟಿಕೊಂಡು ರಸ್ತೆ ದಾಟಲು ಹೋಗಿ ಸಾವನ್ನಪ್ಪುತ್ತಿದ್ದರು. ಇದನ್ನು ತಪ್ಪಿಸಲು ಅಲ್ಲಿ ಸೇತುವೆ ನಿರ್ಮಿಸಿ ಮಹದೇಶ್ವರ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಯೋಜನೆಗೆ ಇದೇ ಡಿ.ಕೆ.ಶಿವಕುಮಾರ್ ಅವರು 2006ರಲ್ಲಿಯೇ ವಿರೋಧ ಮಾಡಿದ್ದರು ಎಂದರು.
ನದಿಯಲ್ಲಿ ಜನರು ಕೊಚ್ಚಿಕೊಂಡು ಹೋಗಿ ಸತ್ತರೂ ಪರವಾಗಿಲ್ಲ. ಆದರೆ, ಇವರ ರಿಯಲ್ ಎಸ್ಟೇಟ್ ವ್ಯವಹಾರ ಸರಗವಾಗಿ ಸಾಗಬೇಕು. ಸದ್ಯ ಬೆಂಗಳೂರಿನಿಂದ ಕನಕಪುರಕ್ಕೆ ಸುರಂಗ ಕೊರೆಸುವೆ ಎಂದು ಹೇಳಲಿಲ್ಲ. ಅದೇ ನಮ್ಮ ಪುಣ್ಯ ಎಂದು ಮಾಜಿ ಮುಖ್ಯಮಂತ್ರಿ ಅವರು ವ್ಯಂಗ್ಯವಾಡಿದ್ದಾರೆ.
ಕನಕಪುರ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರ ಪಾಲಾದ ಮೇಲೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ಮತ್ತೊಂದು ಮೆಡಿಕಲ್ ಕಾಲೇಜ್ ಮಂಜೂರು ಮಾಡಿದ್ದೆ. ಆದರೆ, ಇದೇ ಮಹಾನುಭಾವರೇ ಮೈತ್ರಿ ಸರ್ಕಾರವನ್ನು ತೆಗೆದ ಪರಿಣಾಮ ಆ ಯೋಜನೆ ನೆನೆಗುದಿಗೆ ಬಿತ್ತು. ಅದರ 350 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವೂ ಅಲ್ಲಿಯೇ ಉಳಿಯಿತು. ಉಪ ಮುಖ್ಯಮಂತ್ರಿ ಆದವರು ಆ ಯೋಜನೆಯನ್ನು ಪೂರ್ಣಗೊಳಿಸಬೇಕೆ? ಅಥವಾ ರಾಮನಗರ ಮೆಡಿಕಲ್ ಕಾಲೇಜ್ ಅನ್ನು ಹೈಜಾಕ್ ಮಾಡಲು ಹುನ್ನಾರ ನಡೆಸಬೇಕೇ? ಎಂದು ಡಿ.ಕೆ.ಶಿವಕುಮಾರ್ ಅವರ ಕಾಲೆಳೆದಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳ ಜನರ ಬಹುಕಾಲದ ಕನಸು. ಆ ಕನಸನ್ನು ನಾನು ನನಸು ಮಾಡಿದ್ದೇನೆ. ಈಗ ತಮ್ಮ ಸ್ವಾರ್ಥಕ್ಕಾಗಿ ರಾಮನಗರ ಜಿಲ್ಲೆ ಜನರ ಬೆನ್ನಿಗೆ ಚೂರಿ ಹಾಕಿ ಕನಕಪುರದ ಜನರ ಹಿತಕ್ಕೆ ಕೊಡಲಿ ಪೆಟ್ಟು ಹಾಕುವ ಹುನ್ನಾರ ನಡೆದಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕನಕಪುರ ಸೇರಿ 4 ವಿಧಾನಸಭೆ ಕ್ಷೇತ್ರಗಳ ಜನರೂ ಒಟ್ಟಾಗಿ ಒಂದೇ ಜಿಲ್ಲೆಯಲ್ಲಿ ಉಳಿಯಲಿದ್ದಾರೆ. ಡಿ.ಕೆ.ಶಿವಕುಮಾರ್ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.












Click it and Unblock the Notifications