ಬಳ್ಳಾರಿ; ಕುಂಟನಾಳ ಗ್ರಾಮದಲ್ಲಿ ವಾಂತಿ-ಬೇಧಿ, ಡಿಹೆಚ್‍ಓ ಭೇಟಿ
ಬಳ್ಳಾರಿ, ಏಪ್ರಿಲ್ 05; ಬಳ್ಳಾರಿಯ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಕುಂಟನಾಳ ಗ್ರಾಮದಲ್ಲಿ ವಾಂತಿ, ಬೇಧಿ ಪ್ರಕರಣಗಳು ವರದಿಯಾದ ಹಿನ್ನಲೆಯಲ್ಲಿ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್. ಎಲ್. ಜನಾರ್ಧನ ಭೇಟಿ ನೀಡಿದರು, ಜನರ ಆರೋಗ್ಯವನ್ನು ವಿಚಾರಿಸಿದರು.
ಗ್ರಾಮದಲ್ಲಿ ಕಲುಷಿತ ನೀರು ಸೇವೆನೆಯಿಂದ ಅಥವಾ ಆಹಾರದ ಪ್ರತಿಕೂಲ ಪರಿಣಾಮದಿಂದ ವಾಂತಿ, ಭೇದಿ ಕಂಡುಬರುವ ಸಾಧ್ಯತೆಯಿದ್ದು, ಸಾರ್ವಜನಿಕರು ಕುಡಿಯುವ ನೀರನ್ನು ಕನಿಷ್ಠ 20 ನಿಮಿಷಗಳ ಕಾಲ ಕುದಿಸಿದ ನಂತರ ಆರಿಸಿ, ಸೋಸಿ ಕುಡಿಯಿರಿ ಎಂದು ಜನರಿಗೆ ಸಲಹೆ ನೀಡಿದರು. ಡಿಹೆಚ್‌ಓ ಜೊತೆ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ವೀರೇಂದ್ರ ಕುಮಾರ್, ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಚಿತ್ರಾ, ವೈದ್ಯಾಧಿಕಾರಿ ಡಾ. ನಾರಾಯಣ್ ಬಾಬು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಮುಂತಾದವರಿದ್ದರು.

ಕುಂಟನಾಳ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ತಾಲೂಕು ಆರೋಗ್ಯಾಧಿಕಾರಿ ಡಾ. ಮೋಹನ ಕುಮಾರಿ ನೇತೃತ್ವದಲ್ಲಿ ತುರ್ತು ಚಿಕಿತ್ಸಾ ಕೇಂದ್ರವನ್ನು ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಆರಂಭಿಸಲಾಗಿದೆ. ದಿನದ 24 ಗಂಟೆ ವೈದ್ಯಕೀಯ ತಂಡ ಕರ್ತವ್ಯ ನಿರ್ವಹಿಸುತ್ತಿದ್ದು, ಯಾರಿಗಾದರೂ ವಾಂತಿ, ಬೇಧಿ ಕಂಡುಬಂದಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಿರಿ ಮತ್ತು ಅಗತ್ಯವೆನಿಸಿದರೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಿಕೊಡಲು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.
ನೀರು ಪೂರೈಕೆ; ಈಗಾಗಲೇ ಗುಣಮುಖರಾದವರ ಮನೆಗಳಿಗೆ ತೆರಳಿ ಗ್ರಾಮ ಪಂಚಾಯತಿಯವರು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಶುದ್ಧೀಕರಿಸಿದ ನೀರನ್ನು ಕುಡಿಯಲು ಹಾಗೂ ತಾತ್ಕಾಲಿಕವಾಗಿ ನಳದ ನೀರು ಕುಡಿಯದಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಗ್ರಾಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ನೇತೃತ್ವದಲ್ಲಿ ಜಿಲ್ಲಾ ಕಾಲರಾ ನಿಯಂತ್ರಣ ತಂಡ 5 ನೀರಿನ ಮೂಲಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಯೋಗಾಲಯದ ವರದಿ ಬಂದ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

ಜನರ ಆರೋಗ್ಯದ ಹಿತದೃಷ್ಟಿಯಿಂದ ಗ್ರಾಮದಲ್ಲಿ ಈಗಾಗಲೇ ಜಾಗೃತಿಗಾಗಿ ಗ್ರಾಮ ಪಂಚಾಯತಿಯ ತಾಜ್ಯ ವಿಲೇವಾರಿ ವಾಹನದ ಮೂಲಕ ಮೈಕಿಂಗ್ ಕೈಗೊಳ್ಳಲಾಗಿದ್ದು, ಜಿಲ್ಲಾ ಐಇಸಿ ತಂಡ ಹಾಗೂ ರೂಪನಗುಡಿ ಸಮುದಾಯ ಅರೋಗ್ಯ ಕೇಂದ್ರದ ಕ್ಷೇತ್ರ ಸಿಬ್ಬಂದಿಯವರ ತಂಡವು ಮನೆ-ಮನೆಗೆ ಭೇಟಿ ನೀಡಿ ಕೈತೊಳೆಯುವ ವಿಧಾನ ಕುರಿತು ಪ್ರಾತ್ಯಕ್ಷತೆ ನೀಡಲಾಗುತ್ತಿದೆ.
1 ಪ್ಯಾಕೆಟ್ ಓಆರ್‍ಎಸ್ ಪುಡಿಯನ್ನು 1 ಲೀಟರ್ ಶುದ್ದ ನೀರಿಗೆ ಮಿಶ್ರಣ ಮಾಡಿ ದ್ರಾವಣ ತಯಾರಿಸಿ 24 ಗಂಟೆಯೊಳಗೆ ಬಳಸುವ ಕುರಿತು ಮಾಹಿತಿ ನೀಡುವ ಮೂಲಕ ಕರಪತ್ರ ವಿತರಣೆಯನ್ನು ಮಾಡಲಾಗುತ್ತಿದೆ. ಜನರು ಮುಂಜಾಗೃತೆಗಾಗಿ ಊಟದ ಮೊದಲು ಮತ್ತು ಶೌಚದ ಕೈಗಳನ್ನು ಸಾಬೂನು ಮತ್ತು ನೀರಿನಿಂದ 45 ಸೆಕೆಂಡ್‍ಗಳ ಕಾಲ ತೊಳೆದುಕೊಂಡ ನಂತರ ಆಹಾರ ಸೇವಿಸಿ ಎಂದು ಮಾಹಿತಿ ನೀಡಲಾಗುತ್ತಿದೆ.
ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಿರಿ, ಮಲ, ಮೂತ್ರ ವಿಸರ್ಜನೆಗಾಗಿ ಶೌಚಾಲಯ ಬಳಸಿ, ಬಿಸಿಯಾದ ಆಹಾರ ಮಾತ್ರ ಸೇವಿಸಿ, ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಿರಿ, ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಂಡು ನೊಣಗಳು ಉಂಟಾಗದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
18 ಜನರು ಅಸ್ವಸ್ಥ; ಬಳ್ಳಾರಿ ತಾಲೂಕಿನ ಕುಂಟನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಮಾಡಿ ಇದುವರೆಗೂ 18 ಜನರು ಅಸ್ವಸ್ಥಗೊಂಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಅಧಿಕಾರಿಗಳು ಗ್ರಾಮದ ಹೊರ ವಲಯದಲ್ಲಿ ಹರಿಯುವ ವೇದಾವತಿ ನದಿ ನೀರನ್ನು ಮೊದಲು ಪರಿಶೀಲನೆ ನಡೆಸಿದರು. ಮಾ.27ರಂದು 3, ಮಾ.28ರಂದು ಒಬ್ಬರು, ಮಾರ್ಚ್ 29ರಂದು ಇಬ್ಬರು, ಮಾರ್ಚ್ 30ರಂದು ಮೂವರು, ಮಾರ್ಚ್ 31ರಂದು ನಾಲ್ವರು ಅಸ್ವಸ್ಥಗೊಂಡಿದ್ದರು. ಗ್ರಾಮದಲ್ಲಿ ರೈತರೇ ಹೆಚ್ಚಿದ್ದು, ಜಮೀನುಗಳ ಸಮೀಪದಲ್ಲಿನ ಕಲುಷಿತ ನದಿ ನೀರನ್ನು ಕುಡಿದಿದ್ದರಿಂದ ಅಸ್ವಸ್ಥಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.












Click it and Unblock the Notifications