ಬಳ್ಳಾರಿಯಲ್ಲಿ ಗ್ರಾ.ಪಂ ಸದಸ್ಯ ಸ್ಥಾನಗಳನ್ನು ಹರಾಜು ಹಾಕಿದ ಗ್ರಾಮಸ್ಥರು
ಬಳ್ಳಾರಿ, ಡಿಸೆಂಬರ್ 7: ರಾಜ್ಯದ 5 ಸಾವಿರಕ್ಕೂ ಹೆಚ್ಚು ಗ್ರಾ.ಪಂ ಗಳಿಗೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಈಗ ಪ್ರತಿ ಹಳ್ಳಿ-ಹಳ್ಳಿಗಳಲ್ಲಿಯೂ ಚುನಾವಣಾ ಕಾವು ಜೋರಾಗಿದೆ. ಆದರೆ, ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣೆಯ ಸದಸ್ಯರನ್ನೇ ಹರಾಜು ಹಾಕುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಳಂಕ ತರಲಾಗಿದೆ ಎನ್ನಬಹುದು.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಜ್ಞಾವಂತ ಸಮುದಾಯ ತಲೆ ತಗ್ಗಿಸುವಂತಾಗಿದೆ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರನ್ನು ಜಯಶಾಲಿ ಎಂದು ಘೋಷಣೆ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಅನರ್ಥ ಮಾಡಲಾಗಿದೆ.
ಬಸಿಂದಿಗೇರಿ ಗ್ರಾ.ಪಂ ಗೆ ಸೇರಿದ ಬೈಲೂರು ಗ್ರಾಮದ ಎಲ್ಲ ಸದಸ್ಯ ಸ್ಥಾನಗಳು ಹರಾಜು ಆಗಿವೆ. ಒಟ್ಟು 26 ಸದಸ್ಯ ಸ್ಥಾನ ಹೊಂದಿರುವ ಬಸಿಂದಿಗೇರಿ ಗ್ರಾ.ಪಂನಲ್ಲಿ 2 ರಿಂದ 5.7 ಲಕ್ಷದ ವರೆಗೂ ಹಣ ಪಾವತಿಸಿ ಗ್ರಾ.ಪಂ ಸದಸ್ಯತ್ವ ಪಡೆದಿದ್ದಾರೆ.

ಬೈಲೂರು ಗ್ರಾಮದ ಮಾರೆಮ್ಮನ ಗುಡಿ ಮುಂದೆ ರಾತ್ರೋರಾತ್ರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ, ಯಾರು ಹೆಚ್ಚಿಗೆ ಹಣ ಕೊಡುತ್ತಾರೆ ಅವರನ್ನು ಗ್ರಾ.ಪಂ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಈ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಕತ್ತು ಹಿಸುಕಲಾಗಿದೆ ಎಂದು ಹೇಳಬಹುದು.
ಇನ್ನು ಈ ಕುರಿತು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಜಿ.ಪಂ ಸಿಇಒ ನಂದಿನಿ ಅವರು, ಸ್ಥಳೀಯ ತಹಶೀಲ್ದಾರ ಅವರಿಗೆ ಆದೇಶ ಮಾಡಿದ್ದು, ಕೂಡಲೇ ಹರಾಜಿನಲ್ಲಿ ಭಾಗಿಯಾದ ಎಲ್ಲ ಆಕಾಂಕ್ಷಿಗಳ ಮೇಲೆ ಪ್ರಕರಣ ದಾಖಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ತಹಶೀಲ್ದಾರ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆದರೆ, ಗ್ರಾಮಸ್ಥರ ವಾದವೇ ಬೇರೆಯಾಗಿದೆ. ಚುನಾವಣೆ ನಡೆಸುವ ಬದಲು, ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಬಂದ ಹಣದಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡುವುದಾಗಿ ತಿಳಿಸಿದ್ದಾರೆ. ಅದೇನೆ ಇದ್ದರೂ ದುಡ್ಡಿದ್ದವರಿಗೆ ಅಧಿಕಾರ ಎಂಬುದು ಗ್ರಾಮ ಪಂಚಾಯತಿ ಮಟ್ಟದಿಂದಲೇ ಸಾಬೀತಾಗಿದೆ.












Click it and Unblock the Notifications