ಕ್ಷೇತ್ರ ತ್ಯಾಗಕ್ಕೆ ಮುಂದಾದ ಸಚಿವ ಆನಂದ್ ಸಿಂಗ್?
ಹೊಸಪೇಟೆ, ಏಪ್ರಿಲ್ 11; ಈ ಬಾರಿಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಟ್ಟಿ ಕೆಲವೇ ಕ್ಷಣಗಳಲ್ಲಿ ಬಿಡುಗಡೆಯಾಗಲಿದೆ. ಆದರೆ 22 ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಲಿದೆ? ಎಂಬ ವರದಿಗಳು ರಾಜ್ಯದ ಆಡಳಿತ ಪಕ್ಷ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಈಗಾಗಲೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದು ಹಲವು ಹಾಲಿ ಶಾಸಕರ ಎದೆಬಡಿತ ಹೆಚ್ಚಿಸಿದೆ.
ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸಹ ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದಾರೆ. 56 ವರ್ಷದ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ರಾಜಕೀಯ ಭವಿಷ್ಯಕ್ಕಾಗಿ ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಹಲವು ದಿನಗಳಿಂದ ಇಂತಹ ಗುಸು ಗುಸು ಸುದ್ದಿ ಕ್ಷೇತ್ರದಲ್ಲಿ ಕೇಳಿ ಬರುತ್ತಿತ್ತು. ಆದರೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಈ ಕುರಿತು ಸುದ್ದಿಗಳು ಖಚಿತವಾಗುತ್ತಿವೆ. ಸಿದ್ದಾರ್ಥ್ ಸಿಂಗ್‌ಗೆ ಟಿಕೆಟ್ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
2008 ರಿಂದ 2019ರ ಉಪ ಚುನಾವಣೆ ತನಕ ನಾಲ್ಕು ಬಾರಿ ವಿಜಯನಗರ ಕ್ಷೇತ್ರದಿಂದ ಆನಂದ್ ಸಿಂಗ್ ಸತತವಾಗಿ ಗೆಲುವು ಸಾಧಿಸಿದ್ದಾರೆ. ಅವರ ಪರಿಶ್ರಮದ ಕಾರಣದಿಂದಲೇ ಸರ್ಕಾರ ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ತಂದಿದೆ. ಈ ಬಾರಿಯ ಚುನಾವಣೆಯಲ್ಲಿ ಪುತ್ರ ಸಿದ್ದಾರ್ಥ್ ಸಿಂಗ್‌ರನ್ನು ರಾಜಕೀಯವಾಗಿ ಬೆಳೆಸುವ ಕಾರಣಕ್ಕಾಗಿ ಅವರಿಗೆ ಟಿಕೆಟ್ ನೀಡಿ, ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನಗೆ ಬಿಡಿ ಎಂದು ಆನಂದ್ ಸಿಂಗ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದಾರ್ಥ್ ಸಿಂಗ್ ಸಂಚಾರ; ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಕಳೆದ ಒಂದು ವರ್ಷದಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಾ ಜನರ ಜೊತೆ ಬೆರೆಯುತ್ತಿದ್ದಾರೆ. ಗ್ರಾಮ ವಾಸ್ತವ್ಯ, ಕಬ್ಬಡಿ, ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಯುವಕರನ್ನು ಸೆಳೆಯುತ್ತಿದ್ದಾರೆ. ದೇವಾಲಯ ಸೇರಿದಂತೆ ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಾರೆ. ಆನಂದ್ ಸಿಂಗ್ ಗೈರಾಗುವ ಕಾರ್ಯಕ್ರಮಗಳಲ್ಲಿ ಹಾಜರಾಗುವ ಮೂಲಕ ಜನರ ನಡುವೆ ಗುರುತಿಸಿಕೊಂಡಿದ್ದಾರೆ.
ಆನಂದ್ ಸಿಂಗ್ ಕುಟುಂಬದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಇದೆ. ಪುತ್ರ ಸಿದ್ದಾರ್ಥ್ ಸಿಂಗ್‌ಗೆ ಆದ್ಯತೆ ನೀಡಬೇಕು ಎಂದು ಆನಂದ್ ಸಿಂಗ್ ಮನವಿ ಮಾಡಿದ್ದಾರೆ. ಒಂದು ವೇಳೆ ಪುತ್ರನಿಗೆ ಟಿಕೆಟ್ ನಿರಾಕರಿಸಿದರೆ ತಾವೇ ಸ್ಪರ್ಧೆ ಮಾಡಲು ಆನಂದ್ ಸಿಂಗ್ ಬಯಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆಯಾಗಿರುವ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತಾ ಸಹ ಬಿಜೆಪಿ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತಿದೆ.
ರಾಣಿ ಸಂಯುಕ್ತಾ ರಾಷ್ಟ್ರಮಟ್ಟದಲ್ಲಿ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಬಿ. ಎಲ್. ಸಂತೋಷ್ ಮೂಲಕ ಅವರು ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಅನೇಕ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆ. ಅದರಲ್ಲಿ ವಿಜಯನಗರವೂ ಇದೆ. ಆದ್ದರಿಂದ ಆನಂದ್ ಸಿಂಗ್‌ಗೆ ಟಕೆಟ್ ನೀಡದಿದ್ದರೆ ತಮಗೆ ನೀಡಿ ಎಂದು ರಾಣಿ ಸಂಯುಕ್ತ ವರಿಷ್ಠಿಗೆ ಮನವಿ ಮಾಡಿದ್ದಾರೆ ಎಂಬ ಸುದ್ದಿಗಳಿವೆ.
ಮಂಗಳವಾರ ರಾತ್ರಿ ಈ ಬಾರಿಯ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ವಿಜಯ ನಗರ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ? ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ವೈಯಕ್ತಿಕವಾಗಿಯೂ ಕ್ಷೇತ್ರದಲ್ಲಿ ಗೆದ್ದು ಬರುವಷ್ಟು ಪ್ರಭಾವವನ್ನು ಆನಂದ್ ಸಿಂಗ್ ಹೊಂದಿದ್ದಾರೆ.












Click it and Unblock the Notifications