Ballari News: ತಾರಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನವಿಲಿಗೂ ಚಿಕಿತ್ಸೆ
ಬಳ್ಳಾರಿ ಜನವರಿ 12: ಸಾಮಾನ್ಯವಾಗಿ ಆರೋಗ್ಯ ಕೇಂದ್ರಗಳಲ್ಲಿ ಮನುಷ್ಯರಿಗೆ ಮಾತ್ರ ಚಿಕಿತ್ಸೆ ನೀಡುವುದನ್ನು ಕಾಣುತ್ತೇವೆ, ಆದರೆ ನವಿಲಿಗೂ ಚಿಕಿತ್ಸೆ ನೀಡಿ ಆರೈಕೆ ಮಾಡಿರುವ ಘಟನೆ ಸಂಡೂರು ತಾಲ್ಲೂಕಿನ ತಾರಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಏನಿದು ಘಟನೆ?
ಸಂಡೂರು ತಾಲೂಕಿನ ತೋರಣಗಲ್ಲು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗಾಯಗೊಂಡು ನಡೆಯಲಾಗದ ಸ್ಥಿತಿಯಲ್ಲಿ ಕಂಡುಬಂದ ನವಿಲನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಾಘು ಅವರು ಗುರುತಿಸಿದ್ದಾರೆ. ತಕ್ಷಣ ನವಿಲಿನ ಆರೋಗ್ಯದ ಗಂಭೀರತೆಯ ಹಿನ್ನಲೆ ಹತ್ತಿರದ ತಾರಾನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದಿದ್ದಾರೆ.

ತಾರಾನಗರದ ವೈದ್ಯಾಧಿಕಾರಿ ಡಾ.ಸುನೀತಾ, ಡಾ.ಹರೀಶ್ ಹಾಗೂ ಸಿಬ್ಬಂದಿಯವರಾದ ಶಿವಗಂಗಾ, ಶಂಕರ ಉಪಸ್ಥಿತಿಯಲ್ಲಿ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದಿದ್ದಾರೆ. ಸಂಡೂರು ತಾಲೂಕಿನಲ್ಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚು ಪ್ರಾಣಿ-ಪಕ್ಷಿಗಳು ಕಂಡುಬರುತ್ತವೆ.
ರಸ್ತೆಯಲ್ಲಿ ದಾಟುವಾಗ ವಾಹನಗಳನ್ನು ನಿಧಾನವಾಗಿ ಚಲಿಸುವ ಮೂಲಕ ಪ್ರಾಣಿಗಳ ಸಂತತಿ ಕಾಪಾಡುವುದು ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್‍ಬಾಬು ಅವರು ಮನವಿ ಮಾಡಿದ್ದಾರೆ.
"ಸಾಮಾನ್ಯವಾಗಿ ಆರೋಗ್ಯ ಕೇಂದ್ರಗಳಲ್ಲಿ ಪ್ರಾಣಿ ಪಕ್ಷಿಗಳ ಚಿಕಿತ್ಸೆಗೆ ನೇರವಾಗಿ ಔಷಧಿಗಳು ಇಲ್ಲದಿದ್ದರೂ, ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ನವಿಲಿಗೆ ಬೇಕಾಗುವ ಔಷಧಿಯನ್ನು ತರಿಸಿಕೊಂಡು ಚಿಕಿತ್ಸೆ ನೀಡಿ ಆರೈಕೆ ಮಾಡಿ, ಕಳುಹಿಸಿ ಕೊಟ್ಟಿದ್ದಾರೆ. ಪ್ರಸ್ತುತ ನವಿಲು ಆರೋಗ್ಯವಾಗಿದೆ" ಎಂದು ಅರಣ್ಯ ಇಲಾಖೆಯ ಅಧಿಕಾರಿ ರಾಮು ಅವರು ತಿಳಿಸಿದ್ದಾರೆ.












Click it and Unblock the Notifications