G20 ಶೃಂಗ ಸಭೆ; ಹಂಪಿಯಲ್ಲಿ CWG ಸಭೆಗೆ ಚಾಲನೆ
ಬಳ್ಳಾರಿ, ಜುಲೈ 10; ಜಿ-20 ಶೃಂಗಸಭೆ ಅಂಗವಾಗಿ ವಿಶ್ವಪಾರಂಪರಿಕ ತಾಣವಾದ ಹಂಪಿಯಲ್ಲಿ 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ನಡೆಯುತ್ತಿದೆ. ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾದ ಹಂಪಿಯಲ್ಲಿ ಜುಲೈ 9 ರಿಂದ 12 ವರೆಗೆ ಸಭೆ ನಡೆಯಲಿದೆ.
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಮಾತನಾಡಿ, "ಭಾರತದ ಜಿ-20 ಪ್ರೆಸಿಡೆನ್ಸಿಯ ಅಡಿಯಲ್ಲಿ 3ನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆಯನ್ನು ಹಂಪಿಯಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಜಿ-20ರ ಸದಸ್ಯ ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು ಮತ್ತು ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ" ಎಂದರು.

ಈ ಸಭೆಯ ಅಂಗವಾಗಿ ಹಂಪಿಯ ಬಸವಣ್ಣ ಮಂಟಪದ ಬಳಿ ಜವಳಿ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ. ಜುಲೈ 10ರಂದು ವಸ್ತುಪ್ರದರ್ಶನ ಉದ್ಘಾಟನೆಗೊಂಡಿದೆ. ಸಂಡೂರಿನ ಕಲಾಕೇಂದ್ರದ 450ಕ್ಕೂ ಹೆಚ್ಚು ಜನ ಲಂಬಾಣಿ ಮಹಿಳೆಯರು 1300 ವೈವಿಧ್ಯಮಯ ಕಸೂತಿಗಳನ್ನು ಸಿದ್ದಪಡಿಸಿದ್ದು, ಇದು ವಿಶ್ವ ಗಿನ್ನಿಸ್ ದಾಖಲೆಗೆ ಸೇರಿತು.
ಯುನೆಸ್ಕೋ ಪಾರಂಪರಿಕ ತಾಣ; ದೇಶಿ ಸಾಂಸ್ಕೃತಿಕ ಕಲೆಗಳ ಜಾಗತಿಕ ಅನಾವರಣಕ್ಕೆ ಜಿ-20 ವೇದಿಕೆಯಾಗಲಿದೆ. ಈ ಹಿಂದೆ ಒರಿಸ್ಸಾದ ಖಜುರಾಹೋ ಹಾಗೂ ಭುವನೇಶ್ವರದಲ್ಲಿ ಜರುಗಿದ ಜಿ-20 1 ಮತ್ತು 2ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಗಳು ಯಶಸ್ವಿಯಾಗಿವೆ. 3ನೇ ಸಭೆಯನ್ನು ಯುನೆಸ್ಕೋ ಪಾರಂಪರಿಕ ಮಾನ್ಯತೆ ಪಡೆದ ತಾಣವಾದ ಹಂಪಿಯಲ್ಲಿ ಆಯೋಜನೆ ಮಾಡಲಾಗಿದೆ.
ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪು 4 ಪ್ರಮುಖ ಉದ್ದೇಶಗಳನ್ನು ಹೊಂದಿದೆ. ಮೊದಲನೆಯದಾಗಿ ಸದಸ್ಯ ರಾಷ್ಟ್ರಗಳ ಸಾಂಸ್ಕೃತಿಕ ಅಸ್ಮಿತೆಯನ್ನು ರಕ್ಷಿಸಿ, ಪುನರ್ ಸ್ಥಾಪಿಸುವುದಾಗಿದೆ. 1970ರ ಯುನಿಸ್ಕೋ ಓಡಂಬಡಿಕೆಯಂತೆ ಎಲ್ಲಾ ರಾಷ್ಟ್ರಗಳು ಪರಸ್ಪರ ಸಹಕಾರದಿಂದ, ವಸಾಹತು ಸಮಯ ಅಥವಾ ಇನ್ನಿತರ ಮಾರ್ಗಗಳಿಂದ ಪಡೆಯಲಾದ ಸಾಂಸ್ಕೃತಿಕ ಮಹತ್ವವುಳ್ಳ ಕಲಾಕೃತಿಗಳನ್ನು ಹಿಂದಿರುಗಿಸಬೇಕು. ಭಾರತವು ಸಹ ಇದಕ್ಕೆ ಬದ್ದವಾಗಿದ್ದು, ಈಗಾಗಲೇ ಭಾರತವು ಅಮೆರಿಕಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಮೆರಿಕಾವು 150 ಹೆಚ್ಚು ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ.
ಎರಡನೇ ಮುಖ್ಯ ಉದ್ದೇಶ ಜನಜೀವನದ ಜೊತೆಗೆ ಪಾರಂಪರಿಕವಾಗಿ ಬಳಕೆಗೆ ಬಂದ ಪದ್ದತಿಗಳನ್ನು ಉಳಿಸಿ ಬೆಳೆಸುವುದು. ಭಾರತದಲ್ಲಿ ಆರ್ಯುವೇದ ಪದ್ಧತಿ ಬಳಕೆಯಲ್ಲಿ ಇದೆ. ಹಲವಾರು ಸಂದರ್ಭದಲ್ಲಿ ಆರ್ಯವೇದಲ್ಲಿ ಬಳಕೆಯಲ್ಲಿದ್ದ ಔಷಧೋಪಚಾರಗಳ ಸ್ವಾಮ್ಯ ಹಕ್ಕು (ಪೇಟೆಂಟ್) ಬೇರೆಯವರ ಪಾಲಾಗಿದೆ. ಈ ರೀತಿಯ ಘಟನೆಗಳನ್ನು ತಪ್ಪಿಸುವುದು ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಕೆಲಸವಾಗಿದೆ.
ಮೂರನೇ ಉದ್ದೇಶ ಸಾಂಸ್ಕೃತಿಕ ಅಂಶಗಳು, ಕಲಾ ಕುಸುರಿ ಹಾಗೂ ಉದ್ದಿಮೆಗಳನ್ನು ಪ್ರಚುರ ಪಡಿಸುವುದಾಗಿದೆ. ಇದರ ಅಂಗವಾಗಿ ಹಂಪಿಯಲ್ಲಿ ಜವಳಿ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ನಾಲ್ಕನೇ ಉದ್ದೇಶವಾಗಿ ಸಾಂಸ್ಕೃತಿಕ ಅಂಶಗಳಿಗೆ ಡಿಜಿಟಲ್ ರೂಪ ನೀಡಿ, ಆಡಿಯೋ, ವಿಡಿಯೋ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದು. ಸಂಸ್ಕೃತಿ ಎಲ್ಲರನ್ನೂ ಒಗ್ಗೂಡಿಸುವುದಾಗಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆಗಸ್ಟ್ 26ರಂದು ಸಾಂಸ್ಕೃತಿಕ ಕಾರ್ಯಕಾರಣಿ ಗುಂಪಿನ ಅಂತಿಮ ಸಭೆ ನಡೆಯಲಿದೆ. ವಾರಣಾಸಿ ಸಭೆಯಲ್ಲಿ ಡಿಜಟಲೀಕರಣಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಚರ್ಚಿಸಲಾಗುತ್ತದೆ.












Click it and Unblock the Notifications