ಸಮಗ್ರ ತೋಟಗಾರಿಕೆ ಕೃಷಿಯಲ್ಲಿ ಯಶಸ್ಸು ಕಂಡ ಬಳ್ಳಾರಿಯ ರೈತ ಮಹಿಳೆ
ಬಳ್ಳಾರಿ, ಏಪ್ರಿಲ್ 7: ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದು ಕೃಷಿಯಲ್ಲಿ ಯಶಸ್ಸುಗಳಿಸಿದ ಹಲವಾರು ರೈತರಿದ್ದಾರೆ. ಈಗ ಈ ಕ್ಷೇತ್ರದಲ್ಲಿ ಮಹಿಳೆಯರು ಸಹ ಸಾಧನೆ ಮಾಡಿ ಇತರರಿಗೆ ಮಾದರಿಯಾಗುತ್ತಿದ್ದಾರೆ. ಸಮಗ್ರ ಕೃಷಿ, ಕೃಷಿ ಇಲಾಖೆಯ ಸಲಹೆಗಳನ್ನು ಪಡೆದು ಗಡಿನಾಡು ಬಳ್ಳಾರಿಯ ರೈತ ಮಹಿಳೆ ಈ ಕ್ಷೇತ್ರದಲ್ಲಿ ಯಶಸ್ಸು ಪಡೆದಿದ್ದಾರೆ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ರೈತರು ಮಹಿಳೆಯ ಕೃಷಿ ಚಟುವಟಿಕೆಯನ್ನು ವೀಕ್ಷಣೆ ಮಾಡಿದ್ದಾರೆ.
ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ತಾನು ಉತ್ತಮ ಕೆಲಸ ಮಾಡಬಲ್ಲಳು ಎಂದು ಸಾಬೀತು ಪಡಿಸಿದ್ದಾಳೆ. ಇದಕ್ಕೆ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವು ಹೊರತಾಗಿಲ್ಲ. ಇಂದಿನ ಯುವಕರು ಕೃಷಿಯಿಂದ ದೂರ ಸರಿದು ಇತರೆ ಉದ್ಯೋಗವನ್ನು ಹುಡುಕುತ್ತಾ ನಗರ/ ಪಟ್ಟಣಗಳನ್ನು ಸೇರುತ್ತಿರುವ ಹೊತ್ತಿನಲ್ಲಿ ತೋಟಗಾರಿಕೆ ಕೃಷಿಯನ್ನೇ ತಮ್ಮ ಜೀವನವಾಗಿ ಮಾಡಿಕೊಂಡ ವಿದ್ಯಾವಂತ ಮಹಿಳೆಯರು ಕಂಡುಬರುವುದು ಅಪರೂಪ.

ಆದರೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಮುಷ್ಠಗಟ್ಟೆ ಗ್ರಾಮದ ಯುವ ರೈತ ಮಹಿಳೆ ಬಿ. ಸುಜಾತ ಪತಿ ನಾಗನ ಗೌಡ ಜೊತೆ ಸೇರಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ.
ದಂಪತಿಗಳು ಮೊದಲು ತಮ್ಮ ಜಮೀನಿನ ಮಣ್ಣು ಕಡಿಮೆ ಫಲವತ್ತತೆ ಹೊಂದಿದೆ ಎಂದು ಅರಿತು ಕೃಷಿ ಇಲಾಖೆಯಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿದರು. ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿ ಮಣ್ಣಿನ ಫಲವತ್ತತೆ ಉತ್ತಮಗೊಳಿಸಲು ಕ್ರಮಗಳನ್ನು ಕೈಗೊಂಡರು.
ಮಣ್ಣಿನ ಫಲವತ್ತತೆ ಹೆಚ್ಚಳ: ಬಿ. ಸುಜಾತ, ನಾಗನ ಗೌಡ ದಂಪತಿ ತಮ್ಮ ಜಮೀನಿನಲ್ಲಿ ಬೇವಿನಹಿಂಡಿ ಜೈವಿಕ ಗೊಬ್ಬರಗಳಾದ ಟ್ರೋಂಕೋಡರ್ಮ, ರೈಜೋಬಿಯಂ ಮತ್ತು ರಂಜಕ ಕರಗಿಸುವ ಅಣುಜೀವಿಗಳ ಜೊತೆಗೆ ವೆಸ್ಟ್ ಡಿಕಾಂಪೋಸರ್ ಬಳಸಿ ಕಾಂಪೋಸ್ಟ್, ತಿಪ್ಪೆಗೊಬ್ಬರ ಹಾಗೂ ಎರೆಹುಳು ಗೊಬ್ಬರಗಳನ್ನು ತಯಾರಿಸಿಕೊಂಡು ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಂಡರು.
ವಿವಿಧ ಸಾವಯವ ಮತ್ತು ಜೈವಿಕ ಗೊಬ್ಬರಗಳ ಉತ್ಪಾದನೆ ಮತ್ತು ಬಳಕೆಯಿಂದ ಉತ್ತಮ ಗೊಬ್ಬರವು ಸಿದ್ದವಾಗುವುದಲ್ಲದೇ ಬೆಳೆಗೆ ಅವಶ್ಯ ಸೂಕ್ಷಾಣು ಜೀವಿಗಳು ಲಭ್ಯವಾಗಿ ಹೆಚ್ಚಿನ ಇಳುವರಿ ಪಡೆಯಬಹುದು ಎಂಬುದನ್ನು ತಿಳಿದುಕೊಂಡರು.
ಬಿಸಿಲ ನಾಡಿನಲ್ಲಿ ನೀರಿನ ಮಹತ್ವ ಮತ್ತು ತಮ್ಮ ಜಮೀನಿಲ್ಲಿನ ನೀರಿನ ಅಭಾವ ಅರಿತ ಇವರು ಮೊದಲಿಗೆ ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದರು. ನಂತರ ಹೆಚ್ಚಿನ ಇಳಿಜಾರು ಹೊಂದಿರುವ ಕ್ಷೇತ್ರದಲ್ಲಿ ಮಣ್ಣಿನ ಸವಕಳಿ ಕಡಿಮೆ ಮಾಡಲು ಇಳಿಜಾರಿಗೆ ಅಡ್ಡಲಾಗಿ ಕ್ಷೇತ್ರ ಬದುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಮಣ್ಣಿನ ಸಂರಕ್ಷಣೆ ಮತ್ತು ಮಳೆ ನೀರಿನ ಇಂಗುವಿಕೆ ಹೆಚ್ಚಾಗಿದೆ.
ಇತರ ರೈತರಂತೆ ಸಾಂಪ್ರದಾಯಿಕ ಬೆಳೆಗಳನ್ನು ಅವಲಂಬಿಸದೇ 'ಸಮಗ್ರ ತೋಟಗಾರಿಕೆ ಕೃಷಿ ಪದ್ದತಿ'ಯನ್ನು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ತಮ್ಮ 7.25 ಎಕರೆ ಕ್ಷೇತ್ರದಲ್ಲಿ ವೈವಿಧ್ಯಮಯ ಬೆಳೆಗಳಾದ ಹಲಸು, ತೆಂಗು, ಪೇರಲ, ನಿಂಬೆ, ನುಗ್ಗೆ, ಬಾಳೆ, ಸೇಬು, ಹುಣುಸೆ, ತೇಗ, ಹೊನ್ನೆ, ಸಪೋಟ ಮತ್ತು ಔಷಧ ಬೆಳೆಯಾಗಿ ನನ್ನಾರಿ ಇತ್ಯಾದಿ ಬೆಳೆದಿದ್ದಾರೆ. ಅಲ್ಲದೆ ಹತ್ತು ಹಲವು ತೋಟಗಾರಿಕೆ ಬೆಳೆಗಳನ್ನು ಇವರ ಜಮೀನಿನಲ್ಲಿ ಕಾಣಬಹುದು.
ಇವರು ನೂತನ ತಂತ್ರಜ್ಞಾನವನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಸಹಾಯಧನದ ಪಡೆದು ನೆರಳು ಮನೆಯಲ್ಲಿ ಹಣ್ಣುಗಳ ಶೇಖರಣೆ ಮತ್ತು ನನ್ನಾರಿ ಬೆಳೆಯ ಶೇಖರಣೆ ಮಾಡುತ್ತಿದ್ದಾರೆ. ತೋಟದಲ್ಲಿ ಸಂಪೂರ್ಣವಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.
ತಮ್ಮ ಜಮೀನಿನಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಾವಯವ ಪದ್ದತಿಗೆ ಮೊರೆ ಹೋಗಿದ್ದಾರೆ. ಬೆಳೆಗಳಿಗೆ ಜೈವಿಕ ಮತ್ತು ಸಸ್ಯಜನ್ಯ, ಕೀಟನಾಶಕಗಳನ್ನು ಬಳಸುವ ಮೂಲಕ ಬೆಳೆಗೆ ತಗಲುವ ಕೀಟ-ರೋಗ ಬಾಧೆಯನ್ನು ಕಡಿಮೆ ಖರ್ಚಿನಲ್ಲಿ ನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ.
ಇವರು ಪ್ರತಿ ವರ್ಷ ನನ್ನಾರಿ ಬೆಳೆಯಿಂದ ಸರಾಸರಿ 9 ರಿಂದ 10 ಲಕ್ಷ ರೂ. ನಿವ್ವಳ ಲಾಭ ಪಡೆಯುತ್ತಿದ್ದಾರೆ. ಸಮಗ್ರ ಕೃಷಿ ಪದ್ದತಿಯಲ್ಲಿ ಪಶು ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವುದು ಕಾಣಬಹುದಾಗಿದೆ. ಇವುಗಳಿಂದ ಸಾವಯವ ಪದ್ದತಿಯಲ್ಲಿ ಕಡಿಮೆ ಖರ್ಚಿನಲ್ಲಿ ಬೆಳೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆ ಎನ್ನುವುದು ಬಿ. ಸುಜಾತ ಪತಿ ನಾಗನ ಗೌಡ ದಂಪತಿಗಳ ಅಭಿಪ್ರಾಯ.
ಬಿ. ಸುಜಾತ ಕೆಲಸಕ್ಕೆ ಪತಿ ನಾಗನ ಗೌಡ ಕೈ ಜೋಡಿಸಿ ಇವರು ಬೆಳೆದ ಹಣ್ಣು ಮತ್ತು ತರಾಕಾರಿಗಳನ್ನು ಮಾರುಕಟ್ಟೆಗೆ ಒದಗಿಸಲು ಮತ್ತು ಅದರಿಂದ ಬಂದ ಆದಾಯವನ್ನು ತಂದುಕೊಡುವುದಲ್ಲದೆ ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಬಿ. ಸುಜಾತ ಸಾಧನೆಯನ್ನು ಗುರುತಿಸಿದ ಕೃಷಿ ಇಲಾಖೆಯ ಆತ್ಮ ಯೋಜನೆಯಲ್ಲಿ ಇವರಿಗೆ ಪ್ರಗತಿ ಪರ ಮಹಿಳೆಯನ್ನಾಗಿಸಿ 2024-25ನೇ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕರ ಪಟ್ಟಿಯಲ್ಲಿ ಸೇರಿಸಲು ಅನುವು ಮಾಡಲಾಗಿದೆ.
ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಯಶಸ್ಸು ಕಂಡ ಬಿ. ಸುಜಾತ, ನಾಗನ ಗೌಡ ಇವರು ಇತರೆ ಯುವ ರೈತ ಮಹಿಳೆಯರಿಗೆ ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತ ಮಹಿಳೆಯರಿಗೆ ಪ್ರೇರಣೆಯಾಗಿದ್ದು, ಇತರರು ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕರಣೀಯರಾಗಿದ್ದಾರೆ.












Click it and Unblock the Notifications