'ಮಗಳು ಸಾಕಷ್ಟು ಕಷ್ಟಪಟ್ಟು ಓದಿದಳು. ನಮ್ಮನ್ನೂ ಓದಿಸಿದಳು'
ಬಳ್ಳಾರಿ, ಜೂನ್. 01: "ನಾನು ಕಷ್ಟಪಟ್ಟು ಓದಿದ್ದೆ. ನಿರೀಕ್ಷೆಯಂತೆಯೇ ನಾಲ್ಕನೇ ರಾಂಕ್ ನಲ್ಲಿ ಕೆ-ಸೆಟ್ ಪಾಸಾಗಿರುವೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಖುಷಿ ಆಗುತ್ತಿದೆ. ಒಳ್ಳೆಯ ಫಲಿತಾಂಶ ನನ್ನದು" ಎಂದು ಖುಷಿ ಖುಷಿಯಾಗಿ ಕುಣಿದು - ಕುಪ್ಪಳಿಸುತ್ತ ಮಾತನಾಡಿದರು ಎಸ್.ಆರ್. ಅಪರೂಪ.
ಮೆಡಿಕಲ್, ಇಂಜಿನಿಯರಿಂಗ್ ಬಗ್ಗೆ ಕನಸು ಕಾಣದೇ, ಸಂಶೋಧನಾ ಕ್ಷೇತ್ರದಲ್ಲಿ ದಾಪುಗಾಲಿಡಲು ಆಸಕ್ತಿವಹಿಸಿದ್ದಾರೆ ಅಪರೂಪ.

ಬಳ್ಳಾರಿಯ ಗೌತಮ್ ರೆಡ್ಡಿ (48) ಮತ್ತು ಶೋಭಾರಾಣಿ (42) ಅವರ ಮಗಳಾಗಿರುವ ಎಸ್.ಆರ್. ಅಪರೂಪ, ನಾರಾಯಣ ಕಾಲೇಜಿನ ವಿದ್ಯಾರ್ಥಿ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಈ ವಿದ್ಯಾರ್ಥಿಗೆ, ಸಂಶೋಧನಾ ಕ್ಷೇತ್ರವೆಂದರೆ ಅಚ್ಚುಮೆಚ್ಚು.
ಈ ಕಾರಣಕ್ಕಾಗಿಯೇ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಪ್ರವೇಶವನ್ನೂ ಪಡೆದು, ಪೋಷಕರಿಗೆ ತನ್ನ ಭವಿಷ್ಯದ ಗುರಿ - ಕನಸುಗಳೇನೆಂಬುದನ್ನು ಸ್ಪಷ್ಟಪಡಿಸಿದ್ದಾಳೆ.

ಅಪರೂಪ ಅವರ ಸಹೋದರಿ ಎಸ್.ಆರ್. ಅಪೂರ್ವ ಬೆಂಗಳೂರಿನ ಆಚಾರ್ಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ. ಸಹೋದರ ಎಸ್.ಆರ್. ಚನ್ನ ವೀರಾರೆಡ್ಡಿ, ಎಸ್‍ಎಸ್‍ಎಲ್ ಸಿ ವಿದ್ಯಾರ್ಥಿ. ನಿರೀಕ್ಷೆಯಂತೆಯೇ ಸಹೋದರಿ ಕೆ-ಸೆಟ್ ಫಲಿತಾಂಶ ಪಡೆದಿದ್ದಾಳೆ. ಆಕೆಯ ಇಚ್ಛೆಯಂತೆ ಸಂಶೋಧನಾ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.

ಗೌತಮರೆಡ್ಡಿ, ಶೋಭಾರಾಣಿ, ಮಗಳು ಸಾಕಷ್ಟು ಕಷ್ಟಪಟ್ಟು ಓದಿದಳು. ನಮ್ಮನ್ನೂ ಓದಿಸಿದಳು. ಫಲಿತಾಂಶ ಖುಷಿ ಕೊಡುತ್ತಿದೆ. ನಾವೇ ಬದುಕಿನಲ್ಲಿ ಪಾಸಾದಷ್ಟು ಸಂತೋಷವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications